ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ತಾಲೂಕಿನಲ್ಲಿ ಈ ಬಾರಿ ಸುರಿದ ಮಳೆಗೆ ಈವರೆಗೆ 97 ಮನೆಗಳು ಹಾನಿಗೊಳಗಾಗಿದ್ದು, 120 ಕಡೆ ಗುಡ್ಡಜರಿತಗಳು ಉಂಟಾಗಿದ್ದು. 10 ಸೇತುವೆಗಳು ಹಾಳಾಗಿವೆ. ಇದು ಕಳೆದ ಐದು ವರ್ಷಗಳ ಬಳಿಕ ಅತಿ ಹೆಚ್ಚಿನ ಹಾನಿ ಎಂದು ಅಂದಾಜಿಸಲಾಗಿದೆ. 2019ರಲ್ಲಿ ತಾಲೂಕಿನಲ್ಲಿ ಭೀಕರ ನೆರೆ ಉಂಟಾಗಿ ಅಪಾರ ಹಾನಿಯಾಗಿದ್ದ ಬಳಿಕ ಅತಿಹೆಚ್ಚಿನ ಮಳೆ 2024 ರ ಜುಲೈಯಲ್ಲಿ ಸುರಿದಿದೆ. ನಿರಂತರವಾಗಿ ಸುರಿದ ಕುಂಭದ್ರೋಣ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿತ, ಮನೆಗಳಿಗೆ ಹಾನಿ,ರಸ್ತೆ ಸಂಪರ್ಕ ಕಡಿತಗೊಂಡು ತಾಲೂಕಿನ ಜನತೆ ಸಾಕಷ್ಟು ಕಷ್ಟ-ನಷ್ಟ ಅನುಭವಿಸಿದೆ. ಕಾಳಜಿ ಕೇಂದ್ರ ತೆರೆದು ಜನರನ್ನು ಸ್ಥಳಾಂತರಿಸಲಾಗಿದೆ.ಮಳೆಯ ಜತೆ ಬೀಸಿದ ಗಾಳಿಗೆ ನೆರಿಯ ಗ್ರಾಮವು ತತ್ತರಗೊಂಡಿದ್ದರೆ ಇತರ ಗ್ರಾಮಗಳಲ್ಲೂ ಅಡಕೆ, ರಬ್ಬರ್ ಮರಗಳು ಧರಾಶಾಯಿಯಾಗಿ ಕೃಷಿ ನಷ್ಟ ಉಂಟಾಗಿದೆ. ನದಿಗಳ ನೀರು ತೋಟಗಳನ್ನು ಆವರಿಸಿ ಹಲವು ದಿನ ನಿಂತ ಕಾರಣ ಅಡಕೆ ಮರಗಳು ಬುಡ ಸಹಿತ ಉರುಳಿ ಬಿದ್ದಿವೆ.
ರಾಷ್ಟ್ರೀಯ ಹೆದ್ದಾರಿ, ಗ್ರಾಮೀಣ ರಸ್ತೆಗಳು ಮಳೆಯ ಪರಿಣಾಮ ತೀವ್ರ ಹದಗೆಟ್ಟು ಸಂಚಾರಕ್ಕೆ ಸಂಕಷ್ಟ ಉಂಟಾಗಿದೆ. ಮೆಸ್ಕಾಂ ಇಲಾಖೆಯು ಸಾಕಷ್ಟು ನಷ್ಟ ಅನುಭವಿಸಿದ್ದು ಸಿಬ್ಬಂದಿ ಅಹರ್ನಿಶಿ ದುಡಿದು ಕಂಗಾಲಾಗಿದ್ದಾರೆ. ನೂರಾರು ವಿದ್ಯುತ್ ಕಂಬಗಳ ಅಲ್ಲಲ್ಲಿ ಮುರಿದು ಬಿದ್ದು ಕೆಲವು ಪರಿಸರಗಳಲ್ಲಿ ವಿದ್ಯುತ್ ಸಂಪರ್ಕ ಹಲವಾರು ದಿನಗಳಿಂದ ಕಡಿತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ. ಉಸ್ತುವಾರಿ ಸಚಿವ, ಡಿಸಿ, ಜನಪ್ರತಿನಿಧಿಗಳು, ಅಧಿಕಾರಿಗಳು ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲಿಸಿ ನಷ್ಟದ ಪ್ರಮಾಣ ಅಂದಾಜಿಸಿದ್ದಾರೆ. ನದಿಗಳಲ್ಲೂ ಹೆಚ್ಚಿದ ನೀರಿ ಹರಿವು: 2019ರ ಬಳಿಕ ಇಲ್ಲಿನ ನದಿಗಳಲ್ಲಿ ಅತಿ ಹೆಚ್ಚು ನೀರಿನ ಪ್ರಮಾಣ ಕಂಡು ಬಂದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಅಪಾಯ ಮಟ್ಟ ತಲುಪದ ನದಿಗಳು ಈ ಬಾರಿ ಅಪಾಯ ಮಟ್ಟ ಮೀರಿ ಹರಿದಿವೆ. ಬೇಸಿಗೆಯಲ್ಲಿ ಬಹಳ ಬೇಗ ನದಿಗಳು ಬತ್ತಿ ಸಂಕಷ್ಟ ಅನುಭವಿಸಿದ್ದ ತಾಲೂಕಿನ ಜನತೆ ಈಗ ನದಿಗಳಲ್ಲಿ ಅತಿ ಹೆಚ್ಚಿನ ನೀರು ಹರಿದು ಸಮಸ್ಯೆಗೊಳಗಾಗಿದ್ದಾರೆ. ನದಿ ಪಾತ್ರದ ಜನರು ಸ್ಥಳಾಂತರಗೊಳ್ಳುವಂತೆ ಈ ಹಿಂದೆಯೇ ಡಿಸಿಯವರ ಆದೇಶದಂತೆ ಪಂಚಾಯಿತಿಗಳ ಮೂಲಕ ನೋಟಿಸ್ ನೀಡಿದ್ದರೂ ಅವರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂಬ ದೂರು ಕೇಳಿ ಬರುತ್ತಿದೆ.ಜುಲೈ ತಿಂಗಳಿಡಿ ಸುರಿದ ಮಳೆ ಆಗಸ್ಟ್ 1ರ ಬಳಿಕ ಕೊಂಚ ಕಡಿಮೆಯಾಗಿದ್ದು ಜನಜೀವನ ಯಥಾಸ್ಥಿತಿಯತ್ತ ಬರತೊಡಗಿದೆ. ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಕೃಷಿ ಚಟುವಟಿಕೆಗಳಿಗೆ ವೇಗ ಸಿಕ್ಕಿದೆ. ಅಡಕೆ ತೋಟಗಳಿಗೆ ಎರಡನೇ ಬಾರಿಯ ಔಷಧಿ ಸಿಂಪಡಣೆ ನಡೆಯುತ್ತಿದೆ.ಸಾಕಷ್ಟು ಕೊಳೆ ರೋಗವು ಕಂಡು ಬಂದಿದೆ. ನಿರಂತರ ಸುರಿಯುತ್ತಿದ್ದ ಮಳೆ ಈಗ ಆಗಾಗ ಸುರಿಯುತ್ತಿದ್ದು ಮೋಡಕವಿದ ವಾತಾವರಣ ಮುಂದುವರಿದಿದೆ.
........ನಾಲ್ಕು ದಶಕದಿಂದ ಕಾಣದಂತ ಮಳೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಕಷ್ಟ ನಷ್ಟಗಳು ತಾಲೂಕಿನಲ್ಲಿ ಉಂಟಾಗಿದೆ. ಜನ, ಜಾನುವಾರು, ಮನೆ ಎಲ್ಲ ರೀತಿಯಲ್ಲೂ ತೊಂದರೆ ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದ.ಕ.ಜಿಲ್ಲೆಗೆ ಅನ್ವಯಿಸುವಂತೆ 300 ಕೋಟಿ ರು. ವಿಶೇಷ ಅನುದಾನ ಘೋಷಿಸಬೇಕು.
- ಪ್ರತಾಪ್ ಸಿಂಹ ನಾಯಕ್, ವಿಧಾನ ಪರಿಷತ್ ಸದಸ್ಯ---------
ರಸ್ತೆ ಸಹಿತ ಮಳೆ ಹಾನಿಗೆ ವಿಶೇಷ ಪ್ಯಾಕೇಜ್ ಘೋಷಣೆ ಬಗ್ಗೆ ಸದ್ಯ ಯಾವುದೇ ನಿರ್ಧಾರವಿಲ್ಲ. ಭಾಗಶಃ ಹಾನಿಯಾದ ಮನಗಳಿಗೆ ಎನ್ ಡಿ ಆರ್ ಎಫ್ ನಡಿ 6,500 ರು., ರಾಜ್ಯ ಸರ್ಕಾರದಿಂದ 43,500 ರು. ಹಾಗೂ ಹೆಚ್ಚಿನ ಹಾನಿಗೆ 1ಲಕ್ಷ ರ., ಪೂರ್ತಿ ಹಾನಿಗೊಳಗಾದ ಮನೆಗಳಿಗೆ 1.20 ಲಕ್ಷ ರು. ಹಾಗೂ ಇತರ ನಿಗಮದಡಿ ಪೂರ್ಣಮನೆ ಕಟ್ಟಲು 5 ಲಕ್ಷ ರು. ನೆರವು ಸಿಗಲಿದೆ. ರಸ್ತೆ ತಡೆಗೋಡೆ ಕುಸಿತಗೊಂಡಲ್ಲಿ ತಾತ್ಕಾಲಿಕ ನಿರ್ವಹಣೆ ವೆಚ್ಚ ಕ್ರಮ ಕೈಗೊಂಡು ಮಳೆ ನಿಂತ ಬಳಿಕ ಸಮಗ್ರ ನಿರ್ವಹಣೆಗೆ ಅಧಿಕಾರಿಗಳಲ್ಲಿ ಅಂದಾಜು ಮಾಡುವ ಮೂಲಕ ಸರಕಾರ ಅನುದಾನ ಬಿಡುಗಡೆ ಮಾಡಲಿದೆ- ದಿನೇಶ್ ಗುಂಡೂರಾವ್, ಉಸ್ತುವಾರಿ ಸಚಿವ, ದ.ಕ.