ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳು ಮಾ.21 ರಿಂದ ಏಪ್ರಿಲ್ 4 ವರೆಗೆ ನಡೆಯಲಿದ್ದು, ತಾಲೂಕಿನಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಆಲೂರು, ಬೆಥೆಸ್ಥಾ ಪ್ರೌಢಶಾಲೆ ಬೈರಾಪುರ, ಸರ್ಕಾರಿ ಪ್ರೌಢಶಾಲೆ ಕಾಮತಿ ಕೂಡಿಗೆ, ಕರ್ನಾಟಕ ಪಬ್ಲಿಕ್ ಶಾಲೆ ರಾಯರಕೊಪ್ಪಲು ಹಾಗೂ ಎಸ್.ಕೆ.ಎನ್.ಆರ್.ಎಚ್ ಪ್ರೌಢಶಾಲೆ ಕೆ. ಹೊಸಕೋಟೆಯ ಈ ಐದು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ ತಿಳಿಸಿದ್ದಾರೆ.ಆಲೂರು ತಾಲೂಕಿನ ಒಟ್ಟು 18 ಸರ್ಕಾರಿ ಪ್ರೌಢಶಾಲೆಗಳು, 3 ಸರ್ಕಾರಿ ವಸತಿ ಶಾಲೆಗಳು, 04 ಅನುದಾನಿತ ಶಾಲೆಗಳು ಹಾಗೂ 09 ಅನುದಾನ ರಹಿತ ಶಾಲೆಗಳೂ ಸೇರಿ ಒಟ್ಟು 34 ಪ್ರೌಢಶಾಲೆಗಳ 988 ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗೆ ಹಾಜರಾಗಲಿದ್ದಾರೆ. ತಾಲೂಕು ಹಂತದಿಂದ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಮುಖ್ಯ ಅಧಿಕ್ಷಕರು, ಪ್ರಶ್ನೆಪತ್ರಿಕೆ ಪಾಲಕರು, ಮೊಬೈಲ್ ಸ್ವಾಧೀನಾಧಿಕಾರಿಗಳು, ಸ್ಥಾನಿಕ ಜಾಗೃತ ದಳ ಹಾಗು ಕೊಠಡಿ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಪ್ರತಿ ಪರೀಕ್ಷಾ ಕೊಠಡಿ ಹಾಗೂ ಪ್ರಶ್ನೆ ಪತ್ರಿಕೆ ತೆರೆಯುವ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು ಜಿಲ್ಲಾ ಹಂತದಿಂದ ಪ್ರತಿ ಕೇಂದ್ರದ ಪ್ರತಿ ಕೊಠಡಿಗಳ ಪರೀಕ್ಷಾ ಕಾರ್ಯವನ್ನು ಅವಲೋಕಿಸಲಾಗುತ್ತದೆ. ಈಗಾಗಲೇ ಎಲ್ಲಾ ಪರೀಕ್ಷಾ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು ಪರೀಕ್ಷೆಯನ್ನು ಉತ್ತಮವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆಗೂ ಮೊದಲು ಕೇಂದ್ರಕ್ಕೆ ಹಾಜರಾಗಲು ಮತ್ತು ಯಾವುದೇ ಆತಂಕವಿಲ್ಲದೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲು ಶಿಕ್ಷಣಾಧಿಕಾರಿಗಳು ಕೋರಿದ್ದಾರೆ.