ದೇಶದಲ್ಲಿ ಶೇ. 99ರಷ್ಟು ರೈಲು ಮಾರ್ಗದ ವಿದ್ಯುದ್ದೀಕರಣ: ಜೋಶಿ

| Published : Aug 11 2025, 12:31 AM IST

ದೇಶದಲ್ಲಿ ಶೇ. 99ರಷ್ಟು ರೈಲು ಮಾರ್ಗದ ವಿದ್ಯುದ್ದೀಕರಣ: ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರದ ಮೋದಿ ಸರ್ಕಾರ ಆದ್ಯತೆ ನೀಡಿದ್ದು, ಮೇಕ್ ಇನ್ ಇಂಡಿಯಾ ಅಡಿ ಭಾರತದಲ್ಲೇ ಒಂದೇ ಭಾರತ್ ರೈಲು ಸಿದ್ಧವಾಗಿದೆ. ಇದು ದೇಶಕ್ಕೆ ಹೆಮ್ಮೆಯ ಸಂಗತಿ.

ಹುಬ್ಬಳ್ಳಿ: ಕಳೆದ 60 ವರ್ಷದಲ್ಲಿ ದೇಶದ ಶೇ. 45ರಷ್ಟು ಮಾರ್ಗ ಮಾತ್ರ ವಿದ್ಯುದ್ದೀಕರಣವಾಗಿದ್ದು, 2014ರಿಂದ ಈಚೆಗೆ ಶೇ. 54ರಷ್ಟು ರೈಲು ಮಾರ್ಗ ವಿದ್ಯುದ್ದೀಕರಣ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಬೆಂಗಳೂರಿನಿಂದ ಬೆಳಗಾವಿಗೆ ಆರಂಭವಾದ ವಂದೇ ಭಾರತ ರೈಲನ್ನು ಹುಬ್ಬಳ್ಳಿಯಲ್ಲಿ ಸ್ವಾಗತಿಸಿ ಮಾತನಾಡಿದರು. ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರದ ಮೋದಿ ಸರ್ಕಾರ ಆದ್ಯತೆ ನೀಡಿದ್ದು, ಮೇಕ್ ಇನ್ ಇಂಡಿಯಾ ಅಡಿ ಭಾರತದಲ್ಲೇ ಒಂದೇ ಭಾರತ್ ರೈಲು ಸಿದ್ಧವಾಗಿದೆ. ಇದು ದೇಶಕ್ಕೆ ಹೆಮ್ಮೆಯ ಸಂಗತಿ ಎಂದರು.

ಕೆಲವೆಡೆ ರೈಲು ಮಾರ್ಗದ ಮೂಲ ಸೌಕರ್ಯ ಕೊರತೆ ಹಿನ್ನೆಲೆಯಲ್ಲಿ ಸರಕು ಸಾಗಾಣೆಯಲ್ಲಿ ಅಡತಡೆ ಉಂಟಾಗುತ್ತಿದೆ. ಹೀಗಾಗಿ, ಆ ಅಡತಡೆಗಳನ್ನು ನಿವಾರಿಸಿ ದೇಶದಲ್ಲಿ ಸರಕು ಸಾಗಾಣಿಕೆ ವೆಚ್ಚ ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ. ದೇಶದಲ್ಲಿ ಈಗ ಸರಕು ಸಾಗಾಣಿಕಾ ವೆಚ್ಚ ಶೇ. 12ರಷ್ಟಿದೆ. ಇದನ್ನು 2030ರ ಒಳಗೆ ಶೇ. 8ಕ್ಕೆ ಇಳಿಸುವ ಮತ್ತು ಮುಂದೆ ಶೇ. 6ಕ್ಕೆ ತರುವ ನಿಟ್ಟಿನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಪ್ರಧಾನಿ ಮೋದಿ ಸರ್ಕಾರ ರೈಲ್ವೆಗೆ ₹8 ಸಾವಿರ ಕೋಟಿ ನೀಡಿದೆ ಎಂದು ತಿಳಿಸಿದರು.

ದಾವಣಗೆರೆ ಮತ್ತು ತುಮಕೂರಿನಲ್ಲಿ ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿಕೊಟ್ಟರೆ ಮುಂದಿನ ದಿನಗಳಲ್ಲಿ ಕೇವಲ ನಾಲ್ಕರಿಂದ ನಾಲ್ಕೂವರೆ ಗಂಟೆಯಲ್ಲಿ ವಂದೇ ಭಾರತ ರೈಲು ಬೆಂಗಳೂರು ತಲುಪಲಿದೆ. ಇದರಿಂದ ವೇಳೆ ಉಳಿತಾಯವಾಗಲಿದೆ ಎಂದರು.

ಹುಬ್ಬ‍ಳ್ಳಿ- ಅಂಕೋಲಾ ರೈಲು ಮಾರ್ಗಕ್ಕೆ ಈಗಾಗಲೇ ಡಿಪಿಆರ್ ಸಿದ್ಧವಾಗಿದ್ದು, ವನ್ಯಜೀವಿ ಮಂಡಳಿ ಅನುಮತಿ ಕೊಟ್ಟರೇ ಶೀಘ್ರವೇ ರೈಲು ಮಾರ್ಗ ನಿರ್ಮಾಣವಾಗಲಿದೆ. ಇಲ್ಲಿ ರೈಲು ಮಾರ್ಗ ನಿರ್ಮಾಣವಾದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ 2 ಬಂದರುಗಳನ್ನು ಖಾಸಗಿಯವರೇ ಹೂಡಿಕೆ ಮಾಡಿ ಅಭಿವೃದ್ಧಿ ಮಾಡಲು ಉತ್ಸುಕರಾಗಿದ್ದಾರೆ. ಇದರಿಂದ ಸರಕು ಸಾಗಾಣಿಕೆಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.

ಈ ಹಿಂದೆಯೇ ಬೆಂಗಳೂರಿನಿಂದ ಬೆಳಗಾವಿಗೆ ವಂದೇ ಭಾರತ ರೈಲು ಆರಂಭವಾಗಬೇಕಿತ್ತು. ಆದರೆ, ತಾಂತ್ರಿಕ ಕಾರಣಗ‍ಳಿಂದ ತಡವಾಗಿತ್ತು. ಇದೀಗ ಎಲ್ಲ ತೊಂದರೆ ನಿವಾರಿಸಿ ರೈಲು ಸಂಚಾರ ಆರಂಭಿಸಿದೆ. ದೇಶದಲ್ಲಿ 2018ರಿಂದ ಈಚೆಗೆ 150 ವಂದೇ ಭಾರತ ರೈಲುಗಳು ಸಂಚರಿಸುತ್ತಿದ್ದು, ಇದರಲ್ಲಿ 11 ಕರ್ನಾಟಕದಲ್ಲಿ ಮತ್ತು 2 ಹುಬ್ಬಳ್ಳಿಗೆ ಸಂಚರಿಸುತ್ತಿರುವುದು ಖುಷಿಯ ಸಂಗತಿ ಎಂದರು.

ವೇಳಾಪಟ್ಟಿ: ಬೆಳಗಾವಿ- ಹುಬ್ಬಳ್ಳಿ ರೈಲು ನಂಬರ 26751 ಬೆಳಗಾವಿಯಿಂದ ಬೆಳಗ್ಗೆ 5.20ಕ್ಕೆ ಪ್ರಯಾಣ ಆರಂಭಿಸಲಿದ್ದು, ಬೆಳಗ್ಗೆ 7.08ಕ್ಕೆ ಧಾರವಾಡ, 7.30ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದ್ದು, ಮಧ್ಯಾಹ್ನ 1.50ಕ್ಕೆ ಬೆಂಗಳೂರು ತಲುಪಲಿದೆ. ನಂಬರ್ 26752 ಬೆಂಗಳೂರಿನಿಂದ ಮಧ್ಯಾಹ್ನ 2.20ಕ್ಕೆ ಬಿಡುವ ರೈಲು ರಾತ್ರಿ 8ಕ್ಕೆ ಹುಬ್ಬಳ್ಳಿ, 8.20ಕ್ಕೆ ಧಾರವಾಡ ಮಾರ್ಗವಾಗಿ ರಾತ್ರಿ 8.40ಕ್ಕೆ ಬೆ‍ಳಗಾವಿ ತಲುಪಲಿದೆ.

ಕಾರ್ಯಕ್ರಮದಲ್ಲಿ ವಂದೇ ಭಾರತ ರೈಲಿನ ಕುರಿತು ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಉಪಮೇಯರ್ ಸಂತೋಷ್ ಚವ್ಹಾಣ್, ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಿಗಿ, ಡಿಆರ್‌ಎಂ ಬೇಲಾ ಮೀನಾ, ಡಾ. ಕಾರ್ತಿಕ ಹಾಗಡೆಕಟ್ಟಿ, ಅಲೋಕ್ ಕುಮಾರ್, ರವೀಂದ್ರ ಬಿರಾದಾರ, ಪ್ರಸಾದ್ ಇಚ್ಚಂಗಿಮಠ, ಮನೀಶ ಅಗರವಾಲ್, ಪ್ರವೀಣ್ ಎಸ್‌.ಪಿ ಮತ್ತಿತರರಿದ್ದರು.