ಲಿಂಗರಾಜು ಕೋರಾ
ಕನ್ನಡಪ್ರಭ ವಾರ್ತೆ ಬೆಂಗಳೂರುರಾಜಧಾನಿ ಬೆಂಗಳೂರಿನ ಉತ್ತರ ವಲಯದ ಹತ್ತು ಸರ್ಕಾರಿ ಶಾಲೆಗಳಲ್ಲಿ ಒಂಬತ್ತನೇ ತರಗತಿವರೆಗೂ ಓದಿದ 181 ಮಕ್ಕಳು 10ನೇ ತರಗತಿ ದಾಖಲಾತಿಯಲ್ಲಿ ಕಾಣೆಯಾಗಿದ್ದಾರೆ. ಇದು ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿದ್ದೆಗೆಡಿಸಿದ್ದು, ಆ ಶಾಲೆಗಳಿಂದ ಮಾಹಿತಿ ಕೇಳಿದ್ದಾರೆ.
ಒಂದೇ ತರಗತಿ ಅಂತರದಲ್ಲಿ ಇಷ್ಟೊಂದು ಮಕ್ಕಳ ಸಂಖ್ಯೆ ಕಡಿಮೆಯಾಗಿರುವುದರ ಸುತ್ತ ಅಧಿಕಾರಿಗಳಲ್ಲೇ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಆ ಮಕ್ಕಳು ವಲಸೆ ಹೋದರಾ? ಶಾಲೆ ಬಿಟ್ಟರಾ? ಬೇರೆ ಶಾಲೆಗಳಿಗೆ ವರ್ಗಾವಣೆ ಆದರಾ? ಇಲ್ಲಾ ಅವರು ಕಲಿಕೆಯಲ್ಲೇನಾದರೂ ಹಿಂದುಳಿದಿರಬಹುದಾದ ಕಾರಣಕ್ಕೆ ಮತ್ತೊಂದು ವರ್ಷ ಹಿಂದಿನ ತರಗತಿಯಲ್ಲೇ ಉಳಿಸಲಾಯಿತಾ? ಇಷ್ಟೆಲ್ಲಾ ಪ್ರಶ್ನೆಗಳು ಹುಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತವ ವಲಯ 2ರ ಕ್ಷೇತ್ರ ಶಿಕ್ಷಣಾಧಿಕಾರಿ ಲತಾಮಣಿ ಅವರು ತಮ್ಮ ವ್ಯಾಪ್ತಿಯ 10 ಶಾಲೆಗಳಿಂದ ಮಾಹಿತಿ ಕೇಳಿದ್ದಾರೆ. ಆಯಾ ಶಾಲೆಗಳು ಇಲಾಖೆಯ ಸ್ಟೂಡೆಂಟ್ಸ್ ಅಚೀವ್ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್(ಎಸ್‌ಎಟಿಎಸ್) ತಂತ್ರಾಂಶದಲ್ಲಿ ದಾಖಲಿಸಿರುವ ಮಾಹಿತಿ ಆಧರಿಸಿ ಈ ಮಾಹಿತಿ ಕೇಳಲಾಗಿದೆ. ಇದರಲ್ಲಿ ಪ್ರವೇಶ ಬೇಡಿಕೆ ಹೆಚ್ಚಾಗಿದೆ ಎನ್ನಲಾಗುವ ಮೂರು ಕರ್ನಾಟಕ ಪಬ್ಲಿಕ್ ಶಾಲೆಗಳೂ ಸೇರಿವೆ. ಆ ಮಕ್ಕಳು ಎಲ್ಲಿ ಹೋದರು ಎನ್ನುವುದು ಶಾಲೆಗಳು ನೀಡುವ ಉತ್ತರದಿಂದಲೇ ತಿಳಿದು ಬರಬೇಕಾಗಿದೆ.10 ಶಾಲೆ ಯಾವ್ಯಾವು:
ಮೊದಲನೆಯದು ಹೆಬ್ಬಾಳದ ಕರ್ನಾಟಕ ಬಲ್ಲಿಕ್ ಶಾಲೆ. ಈ ಶಾಲೆಯಲ್ಲಿ 2024-25ನೇ ಸಾಲಿನಲ್ಲಿ 9ನೇ ತರಗತಿಯಲ್ಲಿ 171 ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ಆದರೆ ಈಗ 10ನೇ ತರಗತಿಯಲ್ಲಿ 129 ಮಕ್ಕಳಿದ್ದು ಉಳಿದ 42 ಮಕ್ಕಳು ಎಲ್ಲಿ ಹೋದರು ಎನ್ನುವುದು ಪತ್ತೆಯಾಗಬೇಕಿದೆ. ಯಶವಂತಪುರ ಸಂತೆಬೀದಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಇದ್ದ 75 ವಿದ್ಯಾರ್ಥಿಗಳಲ್ಲಿ 29 ಮಂದಿ ಕಡಿಮೆಯಾಗಿ ಈಗ 10ನೇ ತರಗತಿಯಲ್ಲಿ 46 ಮಂದಿ ಮಾತ್ರ ಇದ್ದಾರೆ. ಇನ್ನು, ಶೇಷಾದ್ರಿಪುರ ಲಿಂಕ್‌ರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ 9ನೇ ತರಗತಿಯಲ್ಲಿದ್ದ 45 ಮಕ್ಕಳಲ್ಲಿ 16 ಮಂದಿ ಕಡಿಮೆಯಾಗಿ ಈಗ 29 ಮಂದಿ ಇದ್ದಾರೆ. ಜಾಲಹಳ್ಳಿಯ ಸರ್ಕಾರಿ ಪಿಯುಸಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇದ್ದ 127 ಮಕ್ಕಳಲ್ಲಿ 19 ಮಕ್ಕಳು ಕಡಿಮೆಯಾಗಿ ಹತ್ತನೇ ತರಗತಿಗೆ 108 ಮಕ್ಕಳು ದಾಖಲಾಗಿರುವುದಾಗಿರುವುದಾಗಿ ತೋರಿಸಲಾಗಿದೆ.
ಅದೇ ರೀತಿ ಐಐಎಸ್‌ಸಿ ಸರ್ಕಾರಿ ಪ್ರೌಢಶಾಲೆಯಲ್ಲಿ 16, ಪ್ಯಾಲೇಸ್ ಗುಟ್ಟಹಳ್ಳಿ ಶಾಲೆಯಲ್ಲಿ 15, ಪ್ರಕಾಶ್‌ನಗರ ಶಾಲೆಯಲ್ಲಿ 13, ಮುನಾವರ ಮೊಹಲ್ಲಾದ ಉರ್ದು ಹೈಸ್ಕೂಲ್‌ನಲ್ಲಿ 8, ಶ್ರೀರಾಮ್‌ಪುರ ಪ್ರೌಢ ಶಾಲೆಯಲ್ಲಿ 7, ಮಲ್ಲೇಶ್ವರಂ 18ನೇ ಕ್ರಾಸ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ 3 ಮಕ್ಕಳ ಸಂಖ್ಯೆ 10ನೇ ತರಗತಿ ದಾಖಲಾತಿಯಲ್ಲಿ ಕಡಿಮೆಯಾಗಿದೆ.
ಶಿಕ್ಷಕರು ‘ಖಾಸಗಿ’ ಶಾಲೆಗಳದಾರಿ ಏನಾದರೂ ತುಳಿದರಾ?
ಕಳೆದ ಎರಡು ವರ್ಷಗಳಲ್ಲಿ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತದ ಹಿನ್ನೆಲೆಯಲ್ಲಿ ಫಲಿತಾಂಶ ಉತ್ತಮಗೊಳಿಸುವ ಹೊಣೆಯನ್ನು ಸರ್ಕಾರ ಆಯಾ ಶಾಲಾ ಮುಖ್ಯ ಶಿಕ್ಷಕರಿಗೆ ಹೊರಿಸಿದೆ. ಫಲಿತಾಂಶ ಕುಸಿದರೆ ಅವರೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂದೂ ಹೇಳಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿಯ ಸರ್ಕಾರಿ ಶಾಲೆಗಳಲ್ಲೂ ಕೂಡ ಖಾಸಗಿ ಶಾಲೆಗಳ ಮಾದರಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಅಥವಾ ಫೇಲಾಗಬಹುದೆಂಬ ಅನುಮಾನ ಇರುವ ವಿದ್ಯಾರ್ಥಿಗಳನ್ನು ಶಿಕ್ಷಕರೇನಾದರೂ ಖಾಸಗಿ ಅಭ್ಯರ್ಥಿಗಳಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸುವ ಹಾದಿ ಹಿಡಿದರಾ ಎನ್ನುವ ಅನುಮಾನವೂ ಮತ್ತೊಂದೆಡೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಬೆಂಗಳೂರು ಉತ್ತರ-2 ಬಿಇಒ ಅವರು ಉತ್ತಮ ಕೆಲಸ ಮಾಡಿದ್ದಾರೆ. ಅವರ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ ನಗರದ ಉತ್ತರ ವಿಭಾಗದ ಇತರೆ ಮೂರು ಮತ್ತು ದಕ್ಷಿಣ ವಿಭಾಗದ ನಾಲ್ಕು ವಲಯಗಳ ಶಾಲೆಗಳಲ್ಲೂ ಈ ರೀತಿ 9ನೇ ತರಗತಿಯಿಂದ 10ನೇ ತರಗತಿಗೆ ಮಕ್ಕಳ ದಾಖಲಾತಿ ಕಡಿಮೆಯಾಗಿರಬಹುದು. ಇತರೆ ಜಿಲ್ಲೆಗಳಲ್ಲೂ ಕಡಿಮೆ ಆಗಿರಬಹುದು. ಹಾಗಾಗಿ ರಾಜ್ಯದ ಎಲ್ಲಾ ಡಿಡಿಪಿಐ, ಬಿಇಒಗಳಿಗೂ ಈ ಸಂಬಂಧ ಎಸ್‌ಎಟಿಎಸ್ ಮಾಹಿತಿ ಪರಿಶೀಲಿಸಿ ಶಾಲೆಗಳಿಂದ ಮಾಹಿತಿ ಪಡೆದು ಮಕ್ಕಳು ಎಲ್ಲಿ ಹೋದರೆಂದು ಸ್ಪಷ್ಟ ಮಾಹಿತಿ ಪತ್ತೆ ಹೆಚ್ಚಬೇಕೆಂಬುದು ಪೋಷಕರು, ತಜ್ಞರ ಆಗ್ರಹವಾಗಿದೆ.ವಲಸೆ, ವರ್ಗಾವಣೆ, ಅದೇ ತರಗತಿಯಲ್ಲೇ ಉಳಿದಿರುವುದು ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಮಕ್ಕಳ ಸಂಖ್ಯೆ 10ನೇ ತರಗತಿಗೆ ಕಡಿಮೆ ಆಗಿರಬಹುದು. ಸರ್ಕಾರಿ ಶಾಲೆಯ ಯಾವುದೇ ಮಕ್ಕಳಿಗೂ ಅನ್ಯಾಯ ಆಗಬಾರದು ಎಂಬ ಉತ್ತಮ ಉದ್ದೇಶದಿಂದ ಶಾಲೆಗಳಿಂದ ಮಾಹಿತಿ ಕೇಳಿದ್ದೇನೆ. ಸದ್ಯದಲ್ಲೇ ಶಾಲೆಯವರು ಮಾಹಿತಿ ನೀಡಲಿದ್ದಾರೆ. ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.
- ಲತಾಮಣಿ, ಕ್ಷೇತ್ರ ಶಿಕ್ಷಣಾಧಿಕಾರಿ, ಬೆಂ.ಉತ್ತರ 2