ಸಾರಾಂಶ
ಅವರಿವರ ಮನೆಯಲ್ಲಿ ಅಡುಗೆ ಮಾಡಿ ಜೀವನ ಸಾಗಿಸುತ್ತಿರುವ ಮಹಿಳೆ ಮಗ ವಿಜ್ಞಾನ ವಿಷಯದಲ್ಲಿ ರಾಜ್ಯಕ್ಕೆ 9ನೇ ರ್‍ಯಾಂಕ್ ಗಳಿಸಿದ್ದಾನೆ.
ಮಹಾಲಿಂಗಪುರ : ಮನಸ್ಸೊಂದಿದ್ದರೆ ಮಾರ್ಗ ಉಂಟು. ಈ ಮಾತಿಗೆ ಉದಾಹರಣೆಯಂತೆ ಅಪ್ಪನಿಲ್ಲದ, ಅವರಿವರ ಮನೆಯಲ್ಲಿ ಅಡುಗೆ ಮಾಡಿ ಜೀವನ ಸಾಗಿಸುತ್ತಿರುವ ಮಹಿಳೆ ಮಗ ವಿಜ್ಞಾನ ವಿಷಯದಲ್ಲಿ ರಾಜ್ಯಕ್ಕೆ 9ನೇ ರ್‍ಯಾಂಕ್ ಗಳಿಸಿದ್ದಾನೆ. ಬುದ್ನಿ ಪಿಡಿ ನಿವಾಸಿ ನಂದನ್ ಮಲ್ಲಾಪುರ ಪಿಯುಸಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 590 ಅಂಕ ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.
ಈತನಿಗೆ ಅಪ್ಪ ಇಲ್ಲ, ತಾಯಿ ನಾಗವೇಣಿ ಮಲ್ಲಾಪುರ. ಬೆಳೆಯ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ ಇವನ ಪ್ರತಿಭೆ ಹಾಗೂ ಬಡತನ ಕಂಡು ಸ್ಥಳೀಯ ಜೆಸಿ ಆಂಗ್ಲ ಮಾಧ್ಯಮ ಶಾಲೆಯು ಎಲ್‌ಕೆಜಿಯಿಂದ 10 ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಿತ್ತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈತ ರಾಜ್ಯಕ್ಕೆ 4ನೇ ರ್‍ಯಾಂಕ್ಡೆ ಪಡೆದು ಸಂಸ್ಥೆಯ ನಂಬಿಕೆ ಉಳಿಸಿಕೊಂಡಿದ್ದ.
ನಂದನ್‌ನ್ನು ಜಮಖಂಡಿಯ ತುಂಗಳ ಸೈನ್ಸ್ ಪಿಯು ಕಾಲೇಜು ಸಹ ದತ್ತು ಪಡೆದು ಉಚಿತ ಶಿಕ್ಷಣ, ವಸತಿ, ಊಟ ನೀಡಿದ್ದನ್ನು ಸಾರ್ಥಕ ಮಾಡಿದ್ದಾನೆ. ಇದೀಗ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ 9 ನೇ ರ್‍ಯಾಂಕ್ ಪಡೆಯುವ ಮೂಲಕ ಬಾಗಲಕೋಟೆ ಜಿಲ್ಲೆಗೆ, ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾನೆ. ಕಾಲೇಜು ಮತ್ತು ಹೆತ್ತವರ ಕೀರ್ತಿ ತಂದಿದ್ದಾನೆ. ಗಣಿತ, ಜೀವಶಾಸ್ತ್ರ, ರಸಾಯನ ಶಾಸ್ತ್ರದಲ್ಲಿ ತಲಾ 100 ಅಂಕ, ಭೌತಶಾಸ್ತ್ರ ಮತ್ತು ಹಿಂದಿಯಲ್ಲಿ ತಲಾ 98, ಇಂಗ್ಲಿಷ್‌ನಲ್ಲಿ 94 ಅಂಕ ಗಳಿಸಿದ್ದಾನೆ.
ನಂದನ್ ತುಂಬಾ ಪ್ರತಿಭಾವಂತ. ಅವನನ್ನು ದತ್ತು ಪಡೆದು ಶಿಕ್ಷಣ ನೀಡಿದ್ದು ಸಾರ್ಥಕವಾಯಿತು. ಅವನಿಗೆ ಮೆಡಿಕಲ್ ಸೀಟ್ ಸಿಗುವುದು ಖಂಡಿತ, ಸೀಟು ಸಿಕ್ಕಲ್ಲಿ ಅವನ ಪೂರ್ತಿ ಖರ್ಚು ನಮ್ಮ ಸಂಸ್ಥೆ ವತಿಯಿಂದಲೇ ಭರಿಸುತ್ತೇವೆ
ವಿಜಯ ಕುಲಕರ್ಣಿ. ತುಂಗಳ ಪಿಯು ಕಾಲೇಜು-
ನಂದನ್ ಚುರುಕುತನ ಹಾಗೂ ಮನೆಯ ಪರಿಸ್ಥಿತಿ ಕಂಡು ನಮ್ಮ ಸಂಸ್ಥೆಯಿಂದ ಎಲ್‌ಕೆಜಿಯಿಂದ 10ನೇ ತರಗತಿ ವರಗೆ ಉಚಿತ ಶಿಕ್ಷಣ ನೀಡಿದ್ದು ಸಾರ್ಥಕವಾಯಿತು. ಈಗ ಪಿಯುಸಿನಲ್ಲಿ ರಾಜ್ಯಕ್ಕೆ 9 ರ್‍ಯಾಂಕ್ ಗಳಿಸಿದ್ದು ಸ್ಮರಣೀಯ.
ಶಿವಾನಂದ ತಿಪ್ಪಾ, ಉಪಾಧ್ಯಕ್ಷ ನವಚೇತನ ಶಿಕ್ಷಣ ಸಂಸ್ಥೆ, ಮಹಾಲಿಂಗಪುರ