ನಾಳೆ ಸೊರಬದಲ್ಲಿ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

| Published : Feb 08 2024, 01:32 AM IST

ನಾಳೆ ಸೊರಬದಲ್ಲಿ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

ಸೊರಬ ಪಟ್ಟಣದ ಡಾ. ರಾಜ್ ರಂಗಮಂದಿರಲ್ಲಿ ಫೆ.9ರಂದು 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಕಡಸೂರು ಬಸವಣ್ಣಪ್ಪ ವೇದಿಕೆಯಲ್ಲಿ ಜರುಗುವ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸುವರು. ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಮಾಜ ಚಿಂತಕ ರಾಜಪ್ಪ ಮಾಸ್ಟರ್ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಶ್ರೀ ರಂಗನಾಥ ದೇವಸ್ಥಾನದಿಂದ ಡಾ. ರಾಜ್ ರಂಗಮಂದಿರವರೆಗೆ ವಿವಿಧ ಕಲಾತಂಡಗಳೊಂದಿಗೆ ಶ್ರೀ ಭುವನೇಶ್ವರಿದೇವಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮೆರವಣಿಗೆಗೆ ಚಾಲನೆ ನೀಡುವರು ಎಂದು ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಪಾಣಿ ಸೊರಬದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

ಪಟ್ಟಣದ ಡಾ. ರಾಜ್ ರಂಗಮಂದಿರಲ್ಲಿ ಫೆ.9ರಂದು 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಪಾಣಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಕಸಾಪ ವತಿಯಿಂದ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಡಸೂರು ಬಸವಣ್ಣಪ್ಪ ವೇದಿಕೆಯಲ್ಲಿ ಜರುಗುವ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸುವರು. ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಮಾಜ ಚಿಂತಕ ರಾಜಪ್ಪ ಮಾಸ್ಟರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

ಬೆಳಗ್ಗೆ 9 ಗಂಟೆಗೆ ಶ್ರೀ ರಂಗನಾಥ ದೇವಸ್ಥಾನದಿಂದ ಡಾ. ರಾಜ್ ರಂಗಮಂದಿರವರೆಗೆ ವಿವಿಧ ಕಲಾತಂಡಗಳೊಂದಿಗೆ ಶ್ರೀ ಭುವನೇಶ್ವರಿದೇವಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮೆರವಣಿಗೆಗೆ ಚಾಲನೆ ನೀಡುವರು. "

ಬೆಳಗ್ಗೆ 11 ಗಂಟೆಗೆ ನಡೆಯುವ ಗೋಷ್ಠಿ-1ರಲ್ಲಿ "ಸಮ್ಮೇಳನ ಅಧ್ಯಕ್ಷರ ಬದುಕು ಮತ್ತು ಹೋರಾಟ " ಕುರಿತು ಚಿಂತನಾಗೋಷ್ಠಿ ನಡೆಯಲಿದೆ. ಲೇಖಕ, ಉಪನ್ಯಾಸಕ ಸರ್ಫ್ರಾಜ್ ಚಂದ್ರಗುತ್ತಿ ಉಪನ್ಯಾಸ ನೀಡುವರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ವಿಶ್ವನಾಥ್ ಕಾನಡೆ ಅಧ್ಯಕ್ಷತೆ ವಹಿಸುವರು. ಗೌರವ ಉಪಸ್ಥಿತಿಯಲ್ಲಿ ದತ್ತಿದಾನಿಗಳಾದ ಬಿ.ವೈ. ಬಂಡಿವಡ್ಡರ್, ಮಲ್ಲಿಕಾರ್ಜುನ ನಿಜಗುಣ, ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎಸ್. ಹುಚ್ಚರಾಯಪ್ಪ, ಜಿಪಂ ಮಾಜಿ ಸದಸ್ಯೆ ಕೆ.ಜಿ. ಲೋಲಾಕ್ಷಮ್ಮ, ಮಹಾದೇವಿ ಶಿವಮೊಗ್ಗ, ಕೋಡ್ಲುಯಜ್ಞಯ್ಯ ಭದ್ರಾವತಿ ಭಾಗವಹಿಸುವರು.

ಮಧ್ಯಾಹ್ನ 12 ಗಂಟೆಗೆ ನಡೆಯುವ ಗೋಷ್ಠಿ-2ರಲ್ಲಿ "ಸಮಾಜವಾದದ ನೆಲೆಯಾಗಿ ಶಿವಮೊಗ್ಗ ಜಿಲ್ಲೆ " ಮತ್ತು "ರೈತರ ಬದುಕು ಬವಣೆಗಳು " ವಿಷಯಗಳ ಕುರಿತು ಸಹಾಯಕ ಪ್ರಾಧ್ಯಾಪಕ ಡಾ. ಮೋಹನ ಚಂದ್ರಗುತ್ತಿ ಮತ್ತು ಉಪನ್ಯಾಸಕ ಡಾ. ಉಮೇಶ ಭದ್ರಾಪುರ ವಿಷಯ ಮಂಡಿಸುವರು. ಕುವೆಂಪು ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಸಣ್ಣರಾಮ ಅಧ್ಯಕ್ಷತೆ ವಹಿಸುವರು.

ಮಧ್ಯಾಹ್ನ 1 ಗಂಟೆಯ ಗೋಷ್ಠಿ-3ರಲ್ಲಿ ಕವಿಗೋಷ್ಠಿ- ಕವಿ ಸಮಯದಲ್ಲಿ ತಾಲೂಕಿನ ಉದಯೋನ್ಮುಖ ಕವಿಗಳಿಂದ ಸ್ವರಚಿತ ಕವನ ವಾಚನ ಇರುತ್ತದೆ. ಡಾ. ಅಜಿತ್ ಹೆಗಡೆ ಹರೀಶಿ ಅಧ್ಯಕ್ಷತೆ ವಹಿಸುವರು. ರೇಣುಕಮ್ಮ ಗೌಳಿ, ಸಂಜಯ ಡೋಂಗ್ರೆ, ಶಂಕರ್ ಶೇಟ್, ನಾಗರಾಜ ಗುತ್ತಿ, ಎಚ್.ಎಸ್. ರಘು ಶಿಕಾರಿಪುರ, ವಿ.ಟಿ. ಸ್ವಾಮಿ ಸಾಗರ ಭಾವಹಿಸುವರು.

ಸಮಾರೋಪ:

ಸಮಾರೋಪ ಸಮಾರಂಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ ವಿಶೇಷ ಆಹ್ವಾನಿತರಾಗಿ ಭಾವಹಿಸುವರು. ಜಿಲ್ಲಾಧ್ಯಕ್ಷ ಡಿ. ಮಂಜುನಾಥ, ಕಸಾಪ ವಿವಿಧ ಘಟಕಗಳ ಪದಾಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರು, ಸಾಹಿತಿಗಳು ಭಾಗವಹಿಸುವರು ಎಂದು ತಿಳಿಸಿದರು.

ಸಭೆಯಲ್ಲಿ ತಾಲೂಕು ಕಸಾಪ ಕಾರ್ಯಧ್ಯಕ್ಷ ಎಚ್.ಗಣಪತಿ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್, ಕಸಾಪ ಕಾರ್ಯದರ್ಶಿಗಳಾದ ರಮೇಶ್, ವಿನಾಯಕ ಕಾನಡೆ, ಉಳಿವಿ ಹೋಬಳಿ ಘಟಕದ ಅಧ್ಯಕ್ಷ ಶಿವಕುಮಾರ್, ಆನವಟ್ಟಿ ಘಟಕದ ಅಧ್ಯಕ್ಷ ಬಸವನ ಗೌಡ, ಮಾಜಿ ಅಧ್ಯಕ್ಷ ಹಾಲೇಶ್ ನವಲೆ ಮೊದಲಾದವರು ಹಾಜರಿದ್ದರು.

- - - ಬಾಕ್ಸ್ ಸಮ್ಮೇಳನಾಧ್ಯಕ್ಷ ಟಿ.ರಾಜಪ್ಪ ಮಾಸ್ತರ್ ಪರಿಚಯಸಾಮಾಜಿಕ ಚಳವಳಿಯ ಮೂಲಕ ಹೋರಾಟದ ನೆಲೆ ಕಂಡುಕೊಂಡ ಟಿ. ರಾಜಪ್ಪ ಮಾಸ್ತರ್ ಸೊರಬ ತಾಲೂಕಿನ ಬೊಮ್ಮನಹಳ್ಳಿಯವರು. 1954ರಲ್ಲಿ ಬಂಗಾರಮ್ಮ, ಮಂಚಪ್ಪ ದಂಪತಿ ಪುತ್ರರಾಗಿ ಜನಿಸಿ, ಅದೇ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಕುಪ್ಪಗಡ್ಡೆಯಲ್ಲಿ ಹಿರಿಯ ಪ್ರಾಥಮಿಕ ಶಿಕ್ಷಣ ಮುಗಿಸಿದರು. 1970ರಲ್ಲಿ ಪಟ್ಟಣದ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಮೆಟ್ರಿಕ್ ಶಿಕ್ಷಣದಲ್ಲಿ ತೇರ್ಗಡೆ ಹೊಂದಿದರು. ಶಿವಮೊಗ್ಗ ಡಿ.ವಿ.ಎಸ್. ಕಾಲೇಜಿನಲ್ಲಿ ಪದವಿಪೂರ್ವ, ಸಹ್ಯಾದ್ರಿ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ, ನ್ಯಾಷನಲ್ ಕಾಲೇಜಿನಲ್ಲಿ ಬಿ.ಇಡಿ. ಶಿಕ್ಷಣ ಪಡೆದರು.

1979ರಲ್ಲಿ ತಾಲೂಕಿನ ಮಾವಲಿ ಗ್ರಾಮದ ಉಮಾಮಹೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ಸೇವೆ ಮತ್ತು ಪಟ್ಟಣದಲ್ಲಿ ಶಾಂತವೇರಿ ಗೋಪಾಲಗೌಡ ಬೋಧನಾ ಸಂಸ್ಥೆ ಪ್ರಾರಂಭಿಸಿದರು. 25 ವರ್ಷಗಳ ಕಾಲ ಬಡ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ, ಇಂಗ್ಲೀಷ್ ವಿಷಯ ಹೇಳಿಕೊಡುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದ್ದಾರೆ. 2014ರಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದ್ದಾರೆ.

ಬುದ್ದ, ಬಸವ, ಅಂಬೇಡ್ಕರ್ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಅಸಮಾನತೆ ತೊಡೆಯುವ ನಿಟ್ಟಿನಲ್ಲಿ ಹಲವಾರು ಚಳವಳಿಗಳ ನಡೆಸಿದ್ದಾರೆ. 1984ರಲ್ಲಿ ಚಂದ್ರಗುತ್ತಿ ರೇಣುಕಾಂಬಾ ದೇವಿಗೆ ಭಕ್ತರು ಸಲ್ಲಿಸುತ್ತಿದ್ದ ಬೆತ್ತಲೆಸೇವೆ ವಿರುದ್ಧ ಚಳವಳಿ ನಡೆಸಿದ್ದರ ಫಲವಾಗಿ ಇಂದು ಅನಿಷ್ಠ ಪದ್ಧತಿ ನಿಷೇಧಗೊಂಡಿದೆ. ಬಗರ್‌ಹುಕುಂ, ಹಾಲಕ್ಷತ್ರಿಯ ಮೀಸಲಾತಿ, ಮಂಡಲ ವರದಿ ಸೇರಿದಂತೆ ಇನ್ನಿತರ ಹೋರಾಟಗಳಲ್ಲಿ ಯಶಸ್ಸು ಕಂಡಿದ್ದಾರೆ.

1983ರಲ್ಲಿ ಶೇಖರಮ್ಮ ಅವರನ್ನು ಸರಳ ವಿವಾಹ ಆಗಿದ್ದಾರೆ. ಅಂತರ್ಜಾತಿ ವಿವಾಹ, ಕುವೆಂಪು ಮಂತ್ರಮಾಂಗಲ್ಯ ವಿವಾಹಕ್ಕೆ ಯುವಜನತೆಗೆ ಪ್ರೇರಣೆ ನೀಡಿದ್ದಾರೆ. 1989ರಿಂದ 1992 ರವರೆಗೆ ನಡೆದ ಸಾಕ್ಷರತಾ ಆಂದೋಲನ ಅಕ್ಷರ ತುಂಗಾ ಕಾರ್ಯಕ್ರಮದಲ್ಲಿ ಹಗಲಿರುಳು ಶ್ರಮಿಸಿ ಸಾಕ್ಷರತಾ ಮಹತ್ವ ಸಾರಿದ್ದಾರೆ. ಹೀಗೆ ವಿದ್ಯಾರ್ಥಿಗಳ ಉತ್ತಮ ಶಿಕ್ಷಕರಾಗಿ, ಸಮಾಜದ ಕೆಳಸ್ಥರದಲ್ಲಿ ಬದುಕುತ್ತಿರುವವರ ದ್ವನಿಯಾಗಿದ್ದಾರೆ ರಾಜಪ್ಪ ಮಾಸ್ತರ್. ಅವರ ಶಿಷ್ಯ ವೃಂದ ಮತ್ತು ಅಭಿಮಾನಿ ಬಳಗ "ಸಮತೆಯ ದನಿ " ಎನ್ನುವ ಕೃತಿ ಹೊರತಂದಿದ್ದಾರೆ.

- - - -07ಕೆಪಿಸೊರಬ01:

ಸೊರಬ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ತಾಲೂಕು ಕಸಾಪ ಅಧ್ಯಕ್ಷ ಪಾಣಿ ಶಿವಾನಂದ ಮಾಹಿತಿ ನೀಡಿದರು. -02ಕೆಪಿಸೊರಬ02: ಟಿ. ರಾಜಪ್ಪ ಮಾಸ್ತರ್