ದಕ್ಷಿಣ ಕನ್ನಡದಲ್ಲಿ ಡೆಂಘೀಗೆ 51ರ ಹರೆಯ ವ್ಯಕ್ತಿ ಬಲಿ

| Published : Jul 14 2024, 01:32 AM IST

ಸಾರಾಂಶ

ಯತೀಶ್ ಅವರು ಉತ್ತಮ ಗುಣನಡತೆಯಿಂದ ಶಂಭೂರು ಗ್ರಾಮದಲ್ಲಿ ಚಿರಪರಿಚಿತರಾಗಿದ್ದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಡೆಂಘೀ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದು, ಇದುಈ ವರ್ಷ ದ.ಕ. ಜಿಲ್ಲೆಯಲ್ಲಿ ಡೆಂಘೀಗೆ ಮೊದಲ ಸಾವು ಎನಿಸಿದೆ.

ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ನಿವಾಸಿಯಾಗಿದ್ದು, ಪ್ರಸ್ತುತ ಪುತ್ತೂರಿನಲ್ಲಿ ವಾಸವಾಗಿರುವ ಯತೀಶ್ ( 51) ಮೃತರು. ಮೂಲತಃ ಶಂಭೂರು ಗರಡಿ ನಿವಾಸಿಯಾಗಿರುವ ಯತೀಶ್ ಅವರು ಇತ್ತೀಚಿಗೆ ಪತ್ನಿಯ ತವರೂರು ಪುತ್ತೂರಿನ ಕಬಕದಲ್ಲಿ ಮನೆ ಮಾಡಿ ಅಲ್ಲಿ ವಾಸವಾಗಿದ್ದರು.

ಭಾರತ್ ಬೀಡಿ ಕಂಪನಿಯ ಬಿ.ಸಿ. ರೋಡಿನ ಶಾಖೆಯಲ್ಲಿ ಸಿಬ್ಬಂದಿಯಾಗಿದ್ದ ಇವರು ಜ್ವರದಿಂದಾಗಿ ಬಂಟ್ವಾಳ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ತಪಾಸಣೆ ವೇಳೆ ಡೆಂಘೀ ಫಾಸಿಟಿವ್‌ ಬಂದಿದ್ದು, ಪ್ಲೇಟ್ಲೆಟ್‌ ತೀರಾ ಕಡಿಮೆ ಕಂಡು ಬಂದಿತ್ತು. ಆದರೆ ಅದಾಗಲೇ ತೀವ್ರ ಜ್ವರಕ್ಕೆ ತುತ್ತಾಗಿದ್ದ ಅವರನ್ನು ಐಸಿಯುನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅಂದೇ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಯತೀಶ್‌ ಮೃತಪಟ್ಟಿದ್ದಾರೆ.

ಯತೀಶ್ ಅವರು ಉತ್ತಮ ಗುಣನಡತೆಯಿಂದ ಶಂಭೂರು ಗ್ರಾಮದಲ್ಲಿ ಚಿರಪರಿಚಿತರಾಗಿದ್ದರು. ಇವರು ಪತ್ನಿ ಹಾಗೂ ಎರಡು ಹೆಣ್ಮಕ್ಕಳನ್ನು ಅಗಲಿದ್ದಾರೆ. ............................

ಜಿಲ್ಲೆಯಲ್ಲಿ ಮೊದಲ ಬಲಿ...!

ರಾಜ್ಯದಲ್ಲಿ ಡೆಂಘೀ ಹಾವಳಿ ಹೆಚ್ಚಿದ್ದರೂ ದ.ಕ. ಜಿಲ್ಲೆಯಲ್ಲಿ ಡೆಂಘೀನಿಂದ ಯಾವುದೇ ಪ್ರಾಣ ಹಾನಿಯಾಗಿರಲಿಲ್ಲ. ಆದರೆ ಡೆಂಘೀ ಪೀಡಿತ ಯತೀಶ್‌ ಅವರ ಸಾವಿನಿಂದ ಡೆಂಘೀ ಜ್ವರಕ್ಕೆ ದ.ಕ.ದಲ್ಲಿ ಮೊದಲ ಬಲಿಯಾಗಿದೆ ಎಂದು ಹೇಳಲಾಗಿದೆ.