ಸಾರಾಂಶ
ಧಾರವಾಡ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಆ್ಯಂಡ್ ಗ್ಯಾಂಗ್‌ನ ಭಾಗವಾಗಿರುವ ಎ-9 ಆರೋಪಿ ಧನರಾಜ್ ಎಂಬಾತನನ್ನು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಕರೆತರುವ ನಿಟ್ಟಿನಲ್ಲಿ ಇಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ಕುರಿತು ಜೈಲು ಅಧಿಕಾರಿ ಮಹಾದೇವ ನಾಯಕ ಮಾಧ್ಯಮಗಳ ಜತೆ ಮಾತನಾಡಿ, ಈ ಪ್ರಕರಣದಲ್ಲಿ ಎ-9 ಆರೋಪಿಯನ್ನು ಧಾರವಾಡ ಜೈಲಿಗೆ ವರ್ಗ ಮಾಡುವ ಕುರಿತು ಸೂಚನೆ ಬಂದಿಲ್ಲ. ಈ ಕುರಿತು ಮಾಹಿತಿ ಬಂದ ತಕ್ಷಣ ಭದ್ರತಾ ಕ್ರಮಕೈಗೊಳ್ಳಲಾಗುವುದು ಎಂದಿರುವ ಅವರು, ಧಾರವಾಡ ಕೇಂದ್ರ ಕಾರಾಗೃಹಕ್ಕೆ 65 ಸಿಸಿ ಕ್ಯಾಮೆರಾ ಕಣ್ಗಾವಲು ಇದೆ. ಎ-9 ಆರೋಪಿ ಧನರಾಜನನ್ನು ಇಲ್ಲಿಗೆ ಕರೆ ತಂದರೆ ಪ್ರತ್ಯೇಕ ವ್ಯವಸ್ಥೆ ಮಾಡುವುದಿಲ್ಲ. ಸಾಮಾನ್ಯ ಕೈದಿಗಳಿಗೆ ನೀಡುವ ಸೌಲಭ್ಯ ನಿಯಮಾನುಸಾರ ನೀಡಲಾಗುವುದು ಎಂದರು.
ಜೈಲಿನಲ್ಲಿ 13 ಭದ್ರತಾ ಕೊಠಡಿ ಇದ್ದು, 618 ಕೈದಿಗಳು ಇದ್ದಾರೆ. ಮಹಿಳಾ ಕೈದಿ ಸೇರಿ 675 ಕೈದಿಗಳಿದ್ದು, ಹೊಸ ಕೈದಿಗಳಿಗೆ ಆರೋಗ್ಯ ತಪಾಸಣೆ ನಡೆಸಲಾಗುವುದು, ಕೈದಿಗಳಿಗೆ ಯಾವುದೇ ವಿಶೇಷ ಸೌಲಭ್ಯ ನೀಡುವುದಿಲ್ಲ. ಅಲ್ಲದೇ, ಮುನ್ನೆಚ್ಚರಿಕೆ ಕ್ರಮವಾಗಿ ಬುಧವಾರ ಬೆಳಗ್ಗೆಯಿಂದ ಜೈಲು ಹೊರಗೆ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿತ್ತು. ಆರೋಪಿ ಧನರಾಜನನ್ನು ಬುಧವಾರ ತಡರಾತ್ರಿ ಕರೆ ತರಬಹುದು ಎಂದು ಅಂದಾಜಿಸಲಾಗಿದೆ.