ಹುಲಿ ದಾಳಿಗೆ ಗಾಯಗೊಂಡಿದ್ದ ಮರಿ ಆನೆ ಸಾವು

| Published : Apr 21 2024, 02:18 AM IST

ಸಾರಾಂಶ

ಕೆಲ ದಿನಗಳ ಹಿಂದೆ ಹುಲಿ ದಾಳಿ ನಡೆಸಿದ್ದ ಪರಿಣಾಮ ನಿತ್ರಾಣಗೊಂಡಿದ್ದ ಕಾಡಾನೆಯ ಮರಿ ಮೈಸೂರು-ಊಟಿ ಹೆದ್ದಾರಿಯಲ್ಲೇ ಪ್ರಾಣ ಬಿಟ್ಟ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ಕೆಲ ದಿನಗಳ ಹಿಂದೆ ಹುಲಿ ದಾಳಿ ನಡೆಸಿದ್ದ ಪರಿಣಾಮ ನಿತ್ರಾಣಗೊಂಡಿದ್ದ ಕಾಡಾನೆಯ ಮರಿ ಮೈಸೂರು-ಊಟಿ ಹೆದ್ದಾರಿಯಲ್ಲೇ ಪ್ರಾಣ ಬಿಟ್ಟ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ಬಂಡೀಪುರ ಅರಣ್ಯದೊಳಗೆ ಮರಿ ಆನೆ ಮೇಲೆ ಹುಲಿ ದಾಳಿ ನಡೆಸಿ ಗಾಯಗೊಳಿಸಿತ್ತು. ತಾಯಿ ಆನೆ ಬರುವ ಸುಳಿವು ಅರಿತ ಹುಲಿ ಕಾಡಿನೊಳಗೆ ಓಡಿ ಹೋಗಿದೆ. ಮರಿ ಆನೆಗೆ ಹುಲಿ ಪರಚಿತ ಗಾಯಗಳಾಗಿ ಕಾಲು ಕೊಳೆತು ಹುಳ ಬಿದ್ದಿತ್ತು. ಶನಿವಾರ ಬೆಳಗ್ಗೆ ನಿತ್ರಾಣಗೊಂಡಿದ್ದ ಗಾಯಾಳು ಮರಿ ಆನೆ ಮೈಸೂರು-ಊಟಿ ಹೆದ್ದಾರಿ ಬದಿ ಕುಸಿದು ಬಿದ್ದಿದೆ. ಮರಿ ಆನೆಯ ಬಳಿಗೆ ತಾಯಿ ಆನೆ ನಿಂತ ಕಾರಣ ಮೈಸೂರು-ಊಟಿ ಹೆದ್ದಾರಿ ವಾಹನಗಳ ಸಂಚಾರ ಬಂದ್‌ ಆಗಿ ಕಿಮೀ ಗಟ್ಟಲೇ ವಾಹನಗಳು ಹೆದ್ದಾರಿಯ ಎರಡು ಬದಿ ನಿಂತು ಟ್ರಾಫಿಕ್‌ ಜಾಮ್‌ ಆಗಿತ್ತು.

ತಾಯಿ ಆನೆ ಗೋಳಾಟ ಕಂಡ ಹೆದ್ದಾರಿಯ ಎರಡು ಬದಿ ನಿಂತ ವಾಹನಗಳಲ್ಲಿದ್ದ ಜನರು ಹೆದ್ದಾರಿಗೆ ಇಳಿದು ಸತ್ತ ಮರಿ ಆನೆ ಕಂಡ ತಾಯಿ ಆನೆ ರೋಧನ ಕಂಡು ಜನರು ಮೌನವಾಗಿ ನೋಡುತ್ತ ನಿಂತಿದ್ದರು. ವಿಷಯ ತಿಳಿದು ಬಂಡೀಪುರ ಎಸಿಎಫ್‌ ನವೀನ್‌, ಆರ್‌ಎಫ್‌ಒ ದೀಪಾ ತಮ್ಮ ಸಿಬ್ಬಂದಿಗಳೊಂದಿಗೆ ತೆರಳಿ ರೋಧಿಸುತ್ತಿದ್ದ ತಾಯಿ ಆನೆಯನ್ನು ಕಾಡಿನೊಳಗೆ ಓಡಿಸುವಲ್ಲಿ ಸಫಲರಾದರು. ಸತ್ತ ಮರಿ ಆನೆ ಶವಯನ್ನು ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದು ಶವ ಪರೀಕ್ಷೆ ಬಳಿಕ ಕಾಡಿನೊಳಗೆ ಶವ ಸಂಸ್ಕಾರ ಮಾಡಲಾಗುವುದು ಎಂದು ಬಂಡೀಪುರ ಎಸಿಎಫ್‌ ನವೀನ್‌ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಸತ್ತ ಮರಿ ಆನೆಯ ಬಳಿ ತಾಯಿ ಆನೆ ಹೆದ್ದಾರಿಯಲ್ಲಿ ಕೆಲ ತಾಸು ನಿಂತ ಕಾರಣ ಮೈಸೂರು ಕಡೆಯಿಂದ ಹಾಗೂ ಗೂಡಲೂರು ಕಡೆಯಿಂದ ಬಂದ ವಾಹನಗಳಲ್ಲಿದ್ದ ಪ್ರವಾಸಿಗರು ಪರದಾಡಿದರು.