ಸಾರಾಂಶ
ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮದಲ್ಲಿ ಪೌಷ್ಟಿಕ ಆಹಾರದ ಕರಪತ್ರ ಬಿಡುಗಡೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ಪ್ರತಿನಿತ್ಯ ಸಮತೋಲನವಾಗಿ ಸೇವಿಸುವುದರಿಂದ ಮನುಷ್ಯನ ಆಯುಷ್ಯ ಹಾಗೂ ಆರೋಗ್ಯ ವೃದ್ದಿಸುತ್ತದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೀರೇಂದ್ರ ಪಾಟೀಲ್ ಹೇಳಿದರು.ತಾಲೂಕಿನ ಸಾಣೇಹಳ್ಳಿಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಕ್ತಿವರ್ಧಕ ಆಹಾರಗಳಾದ ದವಸ ಧಾನ್ಯಗಳು, ಬೆಳವಣಿಗೆ ಸಹಾಯಕವಾದ ಬೇಳೆಕಾಳುಗಳು, ಮೊಟ್ಟೆ, ಮಾಂಸ ಹಾಗೂ ಔಷಧಿ ಸತ್ವಗಳನ್ನು ಒಳಗೊಂಡ ಸೊಪ್ಪು ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸುವುದರಿಂದ ದೇಹವನ್ನು ರೋಗಗಳಿಂದ ರಕ್ಷಿಸುತ್ತವೆ ಎಂದರು.
ಸ್ಥಳೀಯ ಆಸ್ಪತ್ರೆ ವೈದ್ಯಾಧಿಕಾರಿ ಡಾ.ದರ್ಶನ್ ಮಾತನಾಡಿ, ಮಕ್ಕಳಿಗೆ ಜಂಕ್ ಫುಡ್ ಗಳನ್ನು ತಿನ್ನಿಸುವುದನ್ನು ನಿಲ್ಲಿಸಿ ಪೌಷ್ಟಿಕಾಂಶ ಭರಿತ ಸತ್ವಯುತ ಆಹಾರ ನೀಡುವ ಮೂಲಕ ಅವರ ಉತ್ತಮ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕರಿಸುವಂತೆ ತಾಯಂದಿರಿಗೆ ಕರೆ ನೀಡಿದರು.ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ವಿಶಾಲ ಸಿರಿಧಾನ್ಯಗಳ ಬಗ್ಗೆ ಹಾಗೂ ಸಿಹೆಚ್ಒ ಚಿಕ್ಕತೊಳಸಮ್ಮ ಶಿಶುಗಳ ಆಹಾರದ ಬಗ್ಗೆ ಮಾಹಿತಿ ನೀಡಿದರು. ಇದೆ ವೇಳೆ ಪೌಷ್ಟಿಕ ಆಹಾರದ ಕರಪತ್ರ ಬಿಡುಗಡೆ ಮಾಡಲಾಯಿತು ಹಾಗೂ ಪೌಷ್ಟಿಕ ಆಹಾರಗಳ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಅಶೋಕ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಗೀತಾ, ನೇತ್ರಾವತಿ, ಸಿಹೆಚ್ಒ ರೂಪ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿಯರು, ಬಾಣಂತಿಯರು, ತಾಯಂದಿರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.