ಹನುಮಸಾಗರ ಸಮೀಪದ ಬಾದಿಮನಾಳ ಗ್ರಾಮದಲ್ಲಿ ಗುರುವಾರ ತಾಲೂಕು ಮಟ್ಟದ 9ನೇ ಪೋಷಣ ಅಭಿಯಾನ ಮಾಸಾಚರಣೆ ಸಮಾರೋಪ ಸಮಾರಂಭ ನಡೆಯಿತು.

ಹನುಮಸಾಗರ: ಅಪೌಷ್ಟಿಕತೆ ನಿವಾರಣೆಗೆ ಎಲ್ಲರ ಸಹಕಾರ ಅವಶ್ಯಕವಾಗಿದ್ದು, ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳಿಗೆ ಸಮತೋಲನ ಆಹಾರದ ಅವಶ್ಯಕತೆ ಇದೆ ಎಂದು ಸಿಡಿಪಿಒ ಯಲ್ಲಮ್ಮ ಹಂಡಿ ಹೇಳಿದರು.

ಸಮೀಪದ ಬಾದಿಮನಾಳ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ತಾಲೂಕು ಮಟ್ಟದ 9ನೇ ಪೋಷಣ ಅಭಿಯಾನ ಮಾಸಾಚರಣೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ತಾಯಿ ಮತ್ತು ಮಕ್ಕಳ ಆರೋಗ್ಯ ಹಾಗೂ ಪೌಷ್ಟಿಕ ಆಹಾರದ ಮಹತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಪೋಷಣ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಕುಟುಂಬ ಸದಸ್ಯರು ಈ ಬಗ್ಗೆ ಗಮನ ಹರಿಸಬೇಕು. ಅರ್ಹ ಫಲಾನುಭವಿಗಳು ಅಂಗನವಾಡಿ ಕೇಂದ್ರಗಳ ಮೂಲಕ ಸರ್ಕಾರ ನೀಡುವ ಪೌಷ್ಟಿಕ ಆಹಾರ ಹಾಗೂ ವಿವಿಧ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮಕ್ಕಳ ತಜ್ಞ ಶಿವಕುಮಾರ ರಾಠೋಡ ಮಾತನಾಡಿ, ಮಗುವಿನ ಉತ್ತಮ ಬೆಳವಣಿಗೆ ಗರ್ಭಧಾರಣೆಗೂ ಮುನ್ನ ಮಹಿಳೆಯರು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಫೋಲಿಕ್ ಆಸಿಡ್‌ ಮಾತ್ರೆ ಸೇವಿಸಬೇಕು. ಗರ್ಭಿಣಿಯರು ನಿರ್ಲಕ್ಷ್ಯ ಮಾಡದೆ ಆರಂಭದಲ್ಲಿ ಪ್ರತಿ ತಿಂಗಳು ಹಾಗೂ ಏಳು ತಿಂಗಳ ನಂತರ 15 ದಿನಗಳಿಗೊಮ್ಮೆ ಹತ್ತಿರದ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಗುವಿಗೆ 6 ತಿಂಗಳ ವರೆಗೆ ತಾಯಿ ಹಾಲು ಬಿಟ್ಟು ಬೇರೆ ಏನು ನೀಡಬಾರದು. ಬಾಣಂತಿಯರು ಸರ್ಕಾರಿ ಆಸ್ಪತ್ರೆಯಲ್ಲಿ ನೀಡುವ ಕ್ಯಾಲ್ಸಿಯಮ್ ಮಾತ್ರೆ ಸೇವಿಸಲು ಹಿಂಜರಿಕೆ ಮಾಡಬಾರದು ಎಂದರು.

ವೈದ್ಯಾಧಿಕಾರಿ ರಾಣಿ ಚವ್ಹಾಣ, ತಾಲೂಕು ಪೋಷಣ ಅಭಿಯಾನ ಸಂಯೋಜಕಿ ಭಾಗ್ಯ ಹೊಸಮಮನಿ, ಅಂಗನವಾಡಿ ಮೇಲ್ವಿಚಾರಕಿ ಕಲಾವತಿ ಭಕ್ತನಕೊಪ್ಪ, ಶೋಭಾ ನಾಯಕ, ಶಕುಂತಲಾ, ನಾಗಮ್ಮ ಗುಂಡುರು, ಸಾವಿತ್ರಿ, ಶಿವಲೀಲಾ ಹಿರೇಮಠ, ಅನ್ನಪೂರ್ಣಾ, ಮಂಜುಳಾ ಹಕ್ಕಿ, ಮುಖಂಡರಾದ ಮಲ್ಲಪ್ಪ ಬ್ಯಾಳಿ, ರವಿ ಪರಸಾಪುರ, ಕಳಕಪ್ಪ, ಶರಣಪ್ಪ ಪರಸಾಪುರ ಇತರರಿದ್ದರು.