ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಮನೆ ಮುಂದೆ ಸೋಮವಾರ ರಾತ್ರಿ ಕರಡಿ ನೋಡಿ ಭಯಭೀತರಾಗಿರುವ ಘಟನೆ ಎಲ್ಲೇಮಾಳ ರಸ್ತೆಯ ಮನೆಯೊಂದರ ಬಳಿ ಜರುಗಿದೆ. ಎಲ್ಲೇಮಾಳ ರಸ್ತೆಯಲ್ಲಿ ಬರುವ ಡಿಯರ್ ಹಾರ್ಡ್ ವೇರ್ ಸಮೀಪದಲ್ಲಿರುವ ಛಲವಾದಿ ಮಹಾಸಭಾ ಅಧ್ಯಕ್ಷ ಬಸವರಾಜ್ ಅವರ ಮನೆಯ ಮುಂದೆ ಸೋಮವಾರ ರಾತ್ರಿ 8.00ರ ಸಮಯದಲ್ಲಿ ಕರಡಿ ಕಾಣಿಸಿಕೊಂಡಿದ್ದು ಇದನ್ನು ಕಂಡು ಜನರು ಭಯಭೀತರಾಗಿದ್ದಾರೆ.ಅರಣ್ಯ ಅಧಿಕಾರಿಗಳ ಭೇಟಿ: ಘಟನೆ ವಿಷಯ ತಿಳಿಯುತ್ತಿದ್ದಂತೆ ಪಟ್ಟಣದ ಮಲೆ ಮಾದೇಶ್ವರ ವನ್ಯಜೀವಿ ವಿಭಾಗದ ಬಫರ್ ಜೋನ್ ವಲಯದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕರಡಿ ಮತ್ತೆ ಕಾಣಿಸಿಕೊಂಡರೆ ಅರಣ್ಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡುವಂತೆ ತಿಳಿಸಿದ್ದಾರೆ. ಸಿಬ್ಬಂದಿ ವರ್ಗ ಸಹ ಕರಡಿಯ ಚಲನವಲನವನ್ನು ಪರಿಶೀಲನೆ ನಡೆಸಲು ನಿಗಾ ಇಡಲಾಗಿದೆ. ಭಯಭೀತರಾದ ಕುಟುಂಬಸ್ಥರು: ಅರಣ್ಯ ಪ್ರದೇಶದಿಂದ ಒಂದು ಕಿ.ಮೀ ದೂರದಲ್ಲಿರುವ ಎಲ್ಲೇಮಾಳ ರಸ್ತೆಯ ಒಂಟಿ ಮನೆಯ ಮುಂಭಾಗ ರಾತ್ರಿ ಎಂಟು ಗಂಟೆ ಸಮಯದಲ್ಲಿ ಕರಡಿಯನ್ನು ನೋಡಿ ಮನೆಯವರು ಭಯಭೀತರಾಗಿದ್ದು ಕೂಡಲೇ ಸಂಬಂಧಪಟ್ಟ ವಲಯ ಅರಣ್ಯ ಅಧಿಕಾರಿಗಳು ಮನೆಗಳ ಮುಂಭಾಗ ಬರುತ್ತಿರುವ ಕರಡಿಯನ್ನು ಹಿಡಿದು ಬೇರೆ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಬೇಕು. ಮಹದೇಶ್ವರ ಬೆಟ್ಟ ಹಾಗೂ ಹನೂರು ಮುಖ್ಯ ರಸ್ತೆ ಆಗಿರುವುದರಿಂದ ಅಕ್ಕಪಕ್ಕದಲ್ಲಿ ಹಲವಾರು ಮನೆಗಳಿದೆ ತೋಟದ ಜಮೀನುಗಳಲ್ಲಿ ವಾಸಿಸುವ ರೈತರು ಸಹ ರಾತ್ರಿ ಕರಡಿ ಮನೆಯ ಮುಂಭಾಗ ಕಾಣಿಸಿಕೊಂಡಿರುವ ಬಗ್ಗೆ ಭಯಭೀತರಾಗಿದ್ದು ಹಿರಿಯ ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಛಲವಾದಿ ಮಹಾಸಭಾ ಹನೂರು ಘಟಕದ ಅಧ್ಯಕ್ಷ ಬಸವರಾಜ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.