ಹಳೆದೇವರಹೊನ್ನಾಳಿ ಬಳಿ ಬಲೆಗೆ ಬಿದ್ದ ಕರಡಿ

| Published : May 30 2024, 12:53 AM IST

ಸಾರಾಂಶ

ತಾಲೂಕಿನ ಹೊಸ ಮತ್ತು ಹಳೆದೇವರಹೊನ್ನಾಳಿ ಪ್ರದೇಶದಲ್ಲಿ ಕಾಣಿಸಿಕೊಂಡು ಜನರ ಆತಂಕಕ್ಕೆ ಕಾರಣವಾಗಿದ್ದ ಕರಡಿಯನ್ನು ಬುಧವಾರ ಆರಣ್ಯ ಇಲಾಖೆಯವರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಕೆಲ ದಿನಗಳಿಂದ ತಾಲೂಕಿನ ಹೊಸ ಮತ್ತು ಹಳೆದೇವರಹೊನ್ನಾಳಿ ಗ್ರಾಮದ ವ್ಯಾಪ್ತಿಯಲ್ಲಿ ಪ್ರತ್ಯಕ್ಷವಾಗಿ ಈ ಭಾಗದ ಜನರ ಮತ್ತು ರೈತರ ಆತಂಕಕ್ಕೆ ಕಾರಣವಾಗಿದ್ದ ಕರಡಿಯನ್ನು ಬುಧವಾರ ಮಧ್ಯಾಹ್ನ ಆರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ಬೀಸಿದ ಬಲೆಗೆ ಸೆರೆಯಾಗುವ ಮೂಲಕ ಈ ಭಾಗದ ಜನರು ನಿಟ್ಟುಸಿರು ಬಿಡುವಂತಾಗಿದೆ.

ಅರಣ್ಯ ಇಲಾಖೆಯವರು ಈ ಭಾಗದಲ್ಲಿ ಬೋನ್ ಇರಿಸಿ ಕರಡಿ ಸೆರೆಗೆ ಕ್ರಮಕೈಗೊಂಡಿದ್ದರು. ಬುಧವಾರ ಮಧ್ಯಾಹ್ನ ಇಲ್ಲಿನ ಪಾಳು ಬಿದ್ದ ಗುಡಿಯ ಸಮೀಪವಿರುವ ಸುದ್ದಿ ಕೇಳಿ ಆರಣ್ಯ ಇಲಾಖೆಯ ಶಾಂತಿಸಾಗರ ವಲಯ ಆರಣ್ಯಾಧಿಕಾರಿ ಜಗದೀಶ್ ಹಾಗೂ ಆರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೋನಿಗೆ ಸೆರೆಯಾಗುವಂತೆ ಪ್ರಯತ್ನ ಪಟ್ಟರೂ ಕೂಡ ಅದು ಫಲಕಾರಿಯಾಗದ ಕಾರಣ ಕರಡಿಯನ್ನು ಬಲೆಯನ್ನು ಬಳಸಿ ಸರೆಹಿಡಿಯಲಾಗಿದೆ.

ಈ ಸಂದರ್ಭದಲ್ಲಿ ಗ್ರಾಮದ ನಾಗೇಂದ್ರಪ್ಪ ಅವರಿಗೆ ಕರಡಿ ಕಚ್ಚಿ ಗಾಯಗೊಳಿಸಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಕೊಡಿಸಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದಿರುವ ಅರಣ್ಯಾಧಿಕಾರಿಗಳು, ಸೆರೆ ಹಿಡಿದ ಕರಡಿಯನ್ನು ಚನ್ನಗಿರಿ ತಾಲೂಕಿನ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಗ್ಯ ವಿಚಾರಿಸಿದ ಶಾಸಕ: ಜನರನ್ನು ಕಂಗೆಡಿಸಿದ್ದ ಕರಡಿಯನ್ನು ಅಧಿಕಾರಿಗಳು ಸೆರೆಹಿಡಿದು ಆಂತಕ ದೂರಮಾಡಿದ್ದರಿಂದ ಶಾಸಕರು ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನು, ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದ ಗ್ರಾಮದ ನಾಗೇಂದ್ರಪ್ಪರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಅವರ ಆರೋಗ್ಯ ವಿಚಾರಿಸಿದ್ದಾಗಿ ಶಾಸಕರು ತಿಳಿಸಿದ್ದಾರೆ.