ಸಾರಾಂಶ
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪ್ರಧಾನಿ ಮೋದಿ ದೇಶದ ಇಬ್ಬರು ಹೆಣ್ಣು ಮಕ್ಕಳನ್ನು ಕಳುಹಿಸಿ ಸಂದೇಶ ನೀಡಿದ್ದಾರೆ. ತಾವು ಯಾವುದಕ್ಕೂ ಕಡಿಮೆ ಇಲ್ಲ ಎಂಬುದನ್ನು ವಿರೋಧಿಗಳಿಗೆ ತೋರಿಸಿದ್ದಾರೆ. ಪಹಲ್ಗಾಮ್ ಕೃತ್ಯ ನಡೆಸಿದ ಭಯೋತ್ಪಾದಕರಿಗೆ ಈಗ ಹೆಣ್ಣು ಮಕ್ಕಳ ತಾಕತ್ತು ಏನು ಎಂಬುದನ್ನು ಪ್ರಧಾನಿ ಮೋದಿ ಸರ್ಕಾರ ತೋರಿಸಿದೆ.
ಕನ್ನಡಪ್ರಭ ವಾರ್ತೆ ಕೋಲಾರಪಾಕಿಸ್ತಾನದ ಮೇಲೆ ಯುದ್ಧ ನಡೆಯಬಾರದು ಎಂದು ಹೇಳಲು ಸಾಧ್ಯವಿಲ್ಲ. ಪರಿಸ್ಥಿತಿಯನ್ನು ಪ್ರಧಾನಿ, ಗೃಹ ಸಚಿವ ಹಾಗೂ ರಕ್ಷಣಾ ಸಚಿವರು ಗಮನಿಸುತ್ತಿದ್ದಾರೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲಾ ಬದ್ಧರಾಗಿರುತ್ತೇವೆ ಎಂದು ಸಂಸದ ಎಂ.ಮಲ್ಲೇಶ್ ಬಾಬು ತಿಳಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತ ದೇಶ ಭಯೋತ್ಪಾದಕರಿಗೆ ಖಡಕ್ ಉತ್ತರ ನೀಡಿದೆ. ಇದರಿಂದ ದೇಶದ ಜನತೆಗೆ ವಿಶ್ವಾಸ ಬಂದಿದೆ ಎಂದರು.ಪ್ರತೀಕಾರದ ಭರವಸೆ ಈಡೇರಿಕೆ
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ನರಮೇಧಕ್ಕೆ ಪ್ರತೀಕಾರವಾಗಿ ಜನರಿಗೆ ಕೊಟ್ಟ ಮಾತನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೇವಲ ೧೫ ದಿನಗಳಲ್ಲಿ ಈಡೇರಿಸಿ ಭರವಸೆ ಉಳಿಸಿಕೊಂಡಿದ್ದಾರೆ ಎಂದು ಹೇಳಿದರು. ನಮ್ಮ ಯೋಧರು ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ಆ ದೇಶಕ್ಕೆ ನಡುಕ ಹುಟ್ಟಿಸಿದ್ದಾರೆ. ಪ್ರಧಾನಿ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ಕೋಲಾರ ಜಿಲ್ಲೆಯ ಪ್ರತಿಯೊಬ್ಬರೂ ಬೆಂಬಲವಾಗಿ ಇರುತ್ತಾರೆ. ದೇಶದ ಯೋಧರು ನಡೆಸಿರುವ ಕಾರ್ಯಾಚರಣೆ ಶ್ಲಾಘಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಖರ್ಗೆ ಮಾತನಾಡುವಾಗ ಕಾಂಗ್ರೆಸ್ ನಾಯಕರು ಬೇಸರದಲ್ಲಿ ಇದ್ದಂತೆ ಕಂಡುಬಂತು. ಏನೋ ಸಮಸ್ಯೆಯಲ್ಲಿ ಇದ್ದಂತೆ ಕಂಡುಬಂತು ಎಂದರು.ಮಹಿಳೆಯರಿಂದ ಯುದ್ಧದ ಮಾಹಿತಿ
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪ್ರಧಾನಿ ಮೋದಿ ದೇಶದ ಇಬ್ಬರು ಹೆಣ್ಣು ಮಕ್ಕಳನ್ನು ಕಳುಹಿಸಿ ಸಂದೇಶ ನೀಡಿದ್ದಾರೆ. ತಾವು ಯಾವುದಕ್ಕೂ ಕಡಿಮೆ ಇಲ್ಲ ಎಂಬುದನ್ನು ವಿರೋಧಿಗಳಿಗೆ ತೋರಿಸಿದ್ದಾರೆ. ಪಹಲ್ಗಾಮ್ ಕೃತ್ಯದಲ್ಲಿ ಪತಿಯನ್ನು ಕಳೆದುಕೊಂಡ ಮಹಿಳೆಯೊಬ್ಬರು ತಮ್ಮನ್ನೂ ಹತ್ಯೆ ಮಾಡಿ ಎಂದಾಗ ಉಗ್ರರು, ಮೋದಿಗೆ ಹೇಳು’ ಎನ್ನುತ್ತಾರೆ. ಈಗ ಹೆಣ್ಣು ಮಕ್ಕಳ ತಾಕತ್ತು ಏನು ಎಂಬುದನ್ನು ತೋರಿಸಲು ಮೋದಿ ಸರ್ಕಾರ ಉತ್ತಮ ನಿರ್ಧಾರ ತೆಗೆದುಕೊಂಡಿದೆ’ ಎಂದು ಹೇಳಿದರು.