ಸಾರಾಂಶ
ದೇಶದಲ್ಲಿ 5 ಕೋಟಿ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಇವೆ. ಇತರ ವ್ಯವಸ್ಥೆಗೆ ಹೋಲಿಸಿದರೆ ಭಾರತದಲ್ಲಿ ಪ್ರಕರಣ ವಿಲೇವಾರಿ ತ್ವರಿತವಾಗಿದೆ ಎಂದು ಗಣ್ಯರು ಅಭಿಮತ ವ್ಯಕ್ತಡಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಶಾಂತಿಯ ಜೊತೆಗೆ ರಕ್ತ ತರ್ಪಣದಿಂದ ಸ್ವಾತಂತ್ರ್ಯ ದೊರಕಿ 78 ವರ್ಷಗಳಾದರೂ, ಇಂದಿಗೂ ಜನರಿಗೆ ನ್ಯಾಯ ಸಿಗುತ್ತಿಲ್ಲ. ನ್ಯಾಯಕ್ಕೋಸ್ಕರ ಮತ್ತೊಂದು ಸ್ವಾತಂತ್ರ್ಯ ಹೋರಾಟ ಮಾಡಬೇಕೇ ಎಂಬ ಸಂಶಯ ನನ್ನನ್ನು ಯಾವಾಗಲೂ ಕಾಡುತ್ತದೆ ಎಂದು ಉಪಲೋಕಾಯುಕ್ತ ನ್ಯಾ| ಬಿ.ವೀರಪ್ಪ ಅಭಿಪ್ರಾಯಪಟ್ಟರು.ಅವರು ಮಂಗಳವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಉಡುಪಿ ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರಿ ಆಸ್ಪತ್ರೆ ಸೇರಿದಂತೆ ಹೆಚ್ಚಿನ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದಕ್ಕೆ ಕಾರಣ ಸಮಾಜ. ಹಣ ಪಡೆದು ಮತ ಹಾಕುತ್ತಾರೆ. ಹೀಗಾದಾಗ ಉತ್ತಮ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಜಾಗೃತವಾದ ಸಮಾಜ, ಸಾಮಾಜಿಕ ಜವಾಬ್ದಾರಿಯೊಂದಿಗೆ ಸ್ವಾರ್ಥವನ್ನು ಬಿಟ್ಟಾಗ ಉತ್ತಮ ದೇಶವನ್ನು ಕಟ್ಟಲು ಸಾಧ್ಯ ಎಂದರು.ದೇಶದಲ್ಲಿ ಪ್ರಸ್ತುತ 5 ಕೋಟಿ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಇವೆ. ಪ್ರಪಂಚದ ಇತರೇ ನ್ಯಾಯಾಂಗ ವ್ಯವಸ್ಥೆಗೆ ಹೋಲಿಸಿದರೆ ಭಾರತದಲ್ಲಿ ಪ್ರಕರಣ ವಿಲೇವಾರಿ ತ್ವರಿತವಾಗಿದೆ ಎಂದರು.
ಸುಪ್ರೀಂಕೋರ್ಟಿನ ವಿಶ್ರಾಂತ ನ್ಯಾ. ಎ.ಎಸ್.ಬೋಪಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ, ಜನರಿಗೆ ನ್ಯಾಯ ಒದಗಿಸುವ ಆತ್ಮವಿಶ್ವಾಸ ನ್ಯಾಯವಾದಿಗಳಲ್ಲಿರಬೇಕು. ಸಾಮಾಜಿಕ ಸಮಸ್ಯೆಗಳ ಬಗ್ಗೆ ಗಮನಹರಿಸಿ ಅವುಗಳನ್ನೂ ಇತ್ಯರ್ಥಪಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಕಿರಣ್ ಎಸ್ ಗಂಗಣ್ಣನವರ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ರಾಜೇಶ್ ಎ.ಆರ್ ವಂದಿಸಿದರು. ವಕೀಲ ಶ್ರೀನಿಧಿ ಹೆಗ್ಡೆ ಅತಿಥಿಗಳನ್ನು ಪರಿಚಯಿಸಿದರು. ಟಿ.ವಿಜಯಕುಮಾರ್ ಶೆಟ್ಟಿ ನಾಡಗೀತೆ ಹಾಡಿದರು. ಭಾಗವತ ಕೆ.ಜೆ ಗಣೇಶ್ ಪ್ರಾರ್ಥಿಸಿದರು. ನ್ಯಾಯವಾದಿ ಸಹನಾ ಕುಂದರ್ ನಿರೂಪಿಸಿದರು.