ಸಾರಾಂಶ
ಮಾತೃಭಾಷೆಯನ್ನು ಉತ್ತಮವಾಗಿ ಕಲಿತರೆ, ಇತರೆ ಭಾಷೆಗಳನ್ನೂ ಕೂಡ ಸುಲಲಿತವಾಗಿ ಕಲಿತು ತಮ್ಮ ಬದುಕನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಿದೆ. ತಾಯಿ ಭಾಷೆಯಲ್ಲಿ ಪಾಂಡಿತ್ಯವನ್ನು ಪಡೆದ ನಂತರ ಇತರೆ ಭಾಷೆಗಳನ್ನು ಕಲಿಯುವುದು ತಪ್ಪಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ
ಆಂಗ್ಲಭಾಷೆಯಲ್ಲಿ ಮಕ್ಕಳು ಕಲಿತರೆ ಮಾತ್ರವೇ ಉತ್ತಮ ಭವಿಷ್ಯ ಎಂಬ ಭ್ರಮೆಯಿಂದ ಪೋಷಕರು ಹೊರಬರಬೇಕು ಎಂದು ಶಂಕರಗೌಡ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಿ.ಡಿ. ಸುವರ್ಣ ಹೇಳಿದರು.ಕೌಶಲ್ಯ ಯುವತಿ ಮತ್ತು ಮಹಿಳಾ ಮಂಡಳಿ ವತಿಯಿಂದ ನಗರದ ಪರಿಚಯ ಅತಿಥಿ ಗೃಹದಲ್ಲಿ ನಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾತೃಭಾಷೆಯನ್ನು ಉತ್ತಮವಾಗಿ ಕಲಿತರೆ, ಇತರೆ ಭಾಷೆಗಳನ್ನೂ ಕೂಡ ಸುಲಲಿತವಾಗಿ ಕಲಿತು ತಮ್ಮ ಬದುಕನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಿದೆ. ತಾಯಿ ಭಾಷೆಯಲ್ಲಿ ಪಾಂಡಿತ್ಯವನ್ನು ಪಡೆದ ನಂತರ ಇತರೆ ಭಾಷೆಗಳನ್ನು ಕಲಿಯುವುದು ತಪ್ಪಲ್ಲ ಎಂದು ಪ್ರತಿಪಾದಿಸಿದರು.ಕನ್ನಡ ಶಾಲೆಗಳ ಬಗ್ಗೆ ಪೋಷಕರಲ್ಲಿ ತಿರಸ್ಕಾರ ಮನೋಭಾವನೆ ಇದೆ. ಅಲ್ಲಿ ಕಲಿತವರು ಭವಿಷ್ಯದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುವುದಿಲ್ಲ ಎನ್ನುವುದು ಕೇವಲ ಮೂಢನಂಬಿಕೆ. ನಾನು ಮತ್ತು ನನ್ನ ಮಕ್ಕಳು ಸರ್ಕಾರಿ ಶಾಲೆಯಲ್ಲೇ ಓದಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದೇವೆ. ಕನ್ನಡವನ್ನು ಉಳಿಸುತ್ತಿರುವ ಸರ್ಕಾರಿ ಶಾಲೆಗಳ ಬಗ್ಗೆ ಪ್ರತಿಯೊಬ್ಬರಿಗೂ ಹೆಮ್ಮೆ ಇರಬೇಕು ಎಂದರು.
ಕೌಶಲ್ಯ ಮಹಿಳಾ ಮಂಡಳಿ ಅಧ್ಯಕ್ಷೆ ವಿಜಯಾ ನಾಗಣ್ಣ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಲೆಕ್ಕ ಪರಿಶೋಧಕ ಸಿ.ಆನಂದ್, ಕೆ.ಪಿ. ಅರುಣಾಕುಮಾರಿ, ಸಂಸ್ಥೆಯ ಕಾರ್ಯದರ್ಶಿ ಅರುಣ ಕೆಂಪರಾಜು ಇತರರಿದ್ದರು.