ಅವಕಾಶಗಳ ಸದುಪಯೋಗದಿಂದ ಮಹಿಳೆಗೆ ಉತ್ತಮ ಸ್ಥಾನ

| Published : Jul 09 2025, 12:18 AM IST

ಸಾರಾಂಶ

ಮಹಿಳೆಗೆ ಉತ್ತಮ ಅವಕಾಶ ದೊರಕಿದಲ್ಲಿ ಅಥವಾ ಮಹಿಳೆ ಅವಕಾಶಗಳ ಸದುಪಯೋಗ ಮಾಡಿಕೊಂಡರೆ ಸಮಾಜದಲ್ಲಿ ಉತ್ತಮ ಸ್ಥಾನ ಹೊಂದಲು ಸಾಧ್ಯ. ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಪದವಿಯಲ್ಲಿ ಕಲಿಯುವ ವಿಷಯಗಳು ತಮ್ಮ ಇಲಾಖೆಯ ಕಾರ್ಯಚಟುವಟಿಕೆಗಳಿಗೆ ಅತ್ಯಂತ ಸೂಕ್ತವಾಗಿದೆ.

ಧಾರವಾಡ: ಇಲ್ಲಿಯ ಕೃಷಿ ವಿವಿ ಗ್ರಾಮೀಣ ಗೃಹ, ಸಮುದಾಯ ವಿಜ್ಞಾನ ಮಹಾವಿದ್ಯಾಲಯ ಪದವೀಧರರ ಸಂಘ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ್‌ ಮಂಗಳವಾರ ನೆರವೇರಿಸಿದರು.

ಸಮುದಾಯ ವಿಜ್ಞಾನ ಮಹಾವಿದ್ಯಾಯದ ವಿದ್ಯಾರ್ಥಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕು. ಶಿಶು ಅಭಿವೃದ್ದಿ ಅಧಿಕಾರಿ, ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ, ಮೇಲ್ವಿಚಾರಕರ ಹುದ್ದೆಗಳಲ್ಲಿ ಮೀಸಲಾತಿ ಕಲ್ಪಿಸಬೇಕು ಹಾಗೂ ಹಿರಿಯ ನಾಗರಿಕರ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಸಂಘದಿಂದ ಸಚಿವರಿಗೆ ಮನವಿ ಮಾಡಲಾಯಿತು.

ಮಹಿಳೆಯರ ಸಬಲೀಕರಣ ಕುರಿತಂತೆ ಬದಲಾಗುತ್ತಿರುವ ವಿಚಾರಧಾರೆಗಳ ಕುರಿತು ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಮಹಿಳಾ ಸ್ಥಾನಮಾನಗಳ ಸಬಲೀಕರಣ ಮತ್ತು ವಿವಿಧ ಉದ್ಯೋಗಾವಕಾಶಗಳ ಈಡೇರಿಕೆಗೆ ಸಹಕಾರ ಮತ್ತು ಬೆಂಬಲ ಸೂಚಿಸುವುದಾಗಿ ತಿಳಿಸಿದರು. ಈ ಮಹಾವಿದ್ಯಾಲಯದ ಪದವೀಧರರಿಗೆ ತಮ್ಮ ಇಲಾಖೆಯ ಹುದ್ದೆಗಳಲ್ಲಿ ಶೇ. 20-30ರಷ್ಟು ಮೀಸಲಾತಿ ನೀಡುವ ಭರವಸೆ ಸಹ ನೀಡಿದರು.

ಮಹಿಳೆಗೆ ಉತ್ತಮ ಅವಕಾಶ ದೊರಕಿದಲ್ಲಿ ಅಥವಾ ಮಹಿಳೆ ಅವಕಾಶಗಳ ಸದುಪಯೋಗ ಮಾಡಿಕೊಂಡರೆ ಸಮಾಜದಲ್ಲಿ ಉತ್ತಮ ಸ್ಥಾನ ಹೊಂದಲು ಸಾಧ್ಯ. ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಪದವಿಯಲ್ಲಿ ಕಲಿಯುವ ವಿಷಯಗಳು ತಮ್ಮ ಇಲಾಖೆಯ ಕಾರ್ಯಚಟುವಟಿಕೆಗಳಿಗೆ ಅತ್ಯಂತ ಸೂಕ್ತವಾಗಿದೆ ಎಂದರು. ಗ್ರಾಮೀಣ ಗೃಹ ವಿಜ್ಞಾನ/ಸಮುದಾಯ ವಿಜ್ಞಾನ ಮಹಾವಿದ್ಯಾಲಯ ಪದವೀಧರರ ಸಂಘದ ಲಾಂಛನವನ್ನು ಸಹ ಈ ಸಂಧರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಆಯೋಜಿಸಿದ್ದ ವಸ್ತು ಪ್ರದರ್ಶನವನ್ನು ವೀಕ್ಷಿಸಿ ತಂತ್ರಜ್ಞಾನಗಳ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು.

ಕುಲಪತಿ ಡಾ. ಪಿ.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಾ. ಉಷಾ ಮಳಗಿ ವರದಿ ವಾಚನ ಮಾಡಿದರು. ಡಾ. ಅನಸೂಯಾ ಪಾಟೀಲ, ಡಾ. ಸರೋಜಿನಿ ಕರಕಣ್ಣವರ, ಡಾ. ಲತಾ ಪೂಜಾರ, ಡಾ. ವೀಣಾ ಜಾಧವ ಇದ್ದರು.ಸಿಎಂ, ಡಿಸಿಎಂ ದೆಹಲಿ ಪ್ರವಾಸಕ್ಕೆ ಬೇರೆ ಬಣ್ಣ ಬೇಡ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್

ಧಾರವಾಡ: ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳ ದೆಹಲಿ ಪ್ರವಾಸದ ಬಗ್ಗೆ ವಿಶೇಷ ಬಣ್ಣ ಕಟ್ಟುವುದು ಬೇಡ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹಬ್ಬಾಳಕರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಭಯ ಮುಖಂಡರು ದೆಹಲಿಗೆ ಹೋಗಿದ್ದು ವಿಶೇಷವೇನಿಲ್ಲ. ಅವರವರ ಕೆಲಸಗಳಿಗೆ ಹೋಗಿದ್ದಾರೆ. ರಾಜ್ಯವನ್ನು ನಿಭಾಯಿಸುವ ಇಬ್ಬರು ಮುಖಂಡರು ಕೇಂದ್ರ ಮಂತ್ರಿಗಳ ಜತೆಗೆ ಭೇಟಿ ಸೇರಿದಂತೆ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ದೆಹಲಿಗೆ ಹೋಗಿದ್ದಾರಷ್ಟೇ ಎಂದರು.

ಮುಖ್ಯಮಂತ್ರಿಗಳ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು 136 ಜನ ಶಾಸಕರು ಗೆದ್ದಾಗಲೇ ವಿಪಕ್ಷ ಇದೇ ಮಾತು ಹೇಳುತ್ತಿದೆ. ಈ ಸರ್ಕಾರ ಮೂರು ತಿಂಗಳಲ್ಲಿ ಬೀಳುತ್ತದೆ ಎಂದಿದ್ದರು. ಬಿಜೆಪಿ ಮುಖಂಡರಿಗೆ ಕೆಲಸವಿಲ್ಲದೇ ಇಂತಹ ಹೇಳಿಕೆ ನೀಡುತ್ತಾರೆ. ಮುಖ್ಯಮಂತ್ರಿಗಳ ಬದಲಾವಣೆಯಾಗಲಿ, ಮತ್ತೊಂದಾಗಲಿ ಇಲ್ಲ. ಎಲ್ಲವನ್ನು ಕಾಂಗ್ರೆಸ್‌ ಹೈಕಮಾಂಡ್ ನೋಡಿಕೊಳ್ಳಲಿದೆ ಎಂದರು.

ಪ್ರತಿ ಆರು ತಿಂಗಳಿಗೊಮ್ಮೆ ಶಾಸಕರ ಸಭೆ ಮಾಡುತ್ತಿದ್ದು, ಈ ಬಾರಿಯೇ ತಡವಾಗಿದೆ. ಸಭೆಯಲ್ಲಿ ಶಾಸಕರ ಕುಂದು- ಕೊರತೆಗಳಿಗೆ ಪರಿಹಾರ ನೀಡುವುದಾಗಿದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.