ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಶಿಕ್ಷಕರಲ್ಲಿ ನಡೆ ಮತ್ತು ನುಡಿ ಒಂದೇ ಆಗಿದ್ದರೆ, ವಿದ್ಯಾರ್ಥಿ ಹಾಗೂ ಸಮಾಜ ಮೆಚ್ಚುವಂತಹ ಶಿಕ್ಷಕರಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದು ಕುಂದೂರು ಮಠಾಧ್ಯಕ್ಷ ಡಾ. ಶರತ್‌ಚಂದ್ರ ಸ್ವಾಮೀಜಿ ತಿಳಿಸಿದರು.
ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಮೈಸೂರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಕೆ.ಪಿ ಚಿಕ್ಕವೀರಯ್ಯ ಶಿಕ್ಷಕ ಪ್ರಶಸ್ತಿ ಹಾಗೂ ಕೆ.ಸಿ. ಶಿವಪ್ಪ ಪ್ರತಿಭಾ ಪುರಸ್ಕಾರ ಪ್ರಶಸ್ತಿ-೨೦೨೩ರ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಕೆ.ಪಿ. ಚಿಕ್ಕವೀರಯ್ಯ ಅವರು ಶಿಕ್ಷಕರಾಗಿದ್ದವರು. ಅವರ ಮಗ ಕೆ.ಸಿ. ಶಿವಪ್ಪ ಅವರು ಪ್ರೊಫೆಸರ್ ಆಗಿದ್ದಾರೆ. ಇಂತವರು ದತ್ತಿಯನ್ನು ಸ್ಥಾಪನೆ ಮಾಡಿ, ಉತ್ತಮ ಶಿಕ್ಷಕರು ಹಾಗು ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಹೆಮ್ಮೆ ವಿಚಾರವಾಗಿದೆ. ಇಂಥ ಶಿಕ್ಷಕರಿಂದ ಮೌಲ್ಯ ಹೆಚ್ಚುತ್ತಿದೆ. ಶಿಕ್ಷಕರಾದವರು ನಿರಂತರ ಅಧ್ಯಯನ ಶೀಲರಾಗಬೇಕು. ಸಮಾಜವನ್ನು ತಿದ್ದುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ವೀರಪ್ಪ ಅವರ ಸೇವೆ ಸಾರ್ಥಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಓದುವ ಹವ್ಯಾಸವೇ ಕ್ಷೀಣಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಶಿಕ್ಷಕರು ಸೋಮಾರಿಗಳಾಗುತ್ತಿದ್ದಾರೆ. ಯಾರು ಸಹ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಿಲ್ಲ. ಬೆರಳಣಿಕೆಯಷ್ಟು ಮಂದಿ ಶಿಕ್ಷಕರು ಮಾತ್ರ ನಿರಂತರ ಕಲಿಕೆಯಲ್ಲಿ ತೊಡಗಿದ್ದಾರೆ. ಇಂಥವರಿಗೆ ಉತ್ತಮ ಸಮಾಜ ಕಟ್ಟಲು ಸಾಧ್ಯವಿದೆ. ಇವರನ್ನು ಸೋಮಾರಿ ಶಿಕ್ಷಕರು ಎಂದರೆ ತಪ್ಪಾಗಲಾರದು. ವಿದ್ಯಾರ್ಥಿ ಹಾಗು ಶಿಕ್ಷಕರು ಪ್ರಶ್ನೆ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು. ಯಾವಾಗ ಅವನು ಪ್ರಶ್ನೆ ಮಾಡುವುದಿಲ್ಲವು ಅವನು ಕಲಿಕೆಯಲ್ಲಿ ಆಸಕ್ತಿ ಕಳೆದುಕೊಂಡ ಎಂಬರ್ಥ ಮೂಡುತ್ತದೆ ಎಂದು ಶರತ್ ಚಂದ್ರ ಸ್ವಾಮೀಜಿ ತಿಳಿಸಿದರು.ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಡು ಕಟ್ಟುವ ಕೆಲಸದಲ್ಲಿ ಶಿಕ್ಷಕರು , ರೈತರು ಹಾಗೂ ಯೋಧರ ಪಾತ್ರ ಬಹಳ ಮುಖ್ಯವಾದದ್ದು, ಇಂಥ ಶಿಕ್ಷಕರನ್ನು ಸನ್ಮಾನಿಸುವ ಮೂಲಕ ಇನ್ನು ಹೆಚ್ಚಿನ ಉತ್ತೇಜನವನ್ನು ನಮ್ಮ ಕೆ.ಸಿ. ಶಿವಪ್ಪ ಮತ್ತು ಪುತ್ರ ರವಿ ಮಾಡುತ್ತಿದ್ದಾರೆ. ಪರಿಷತ್‌ಗೆ ದತ್ತಿ ನೀಡಿ, ಆ ದತ್ತಿ ಮೂಲಕ ನಿರಂತರವಾಗಿ ಪ್ರತಿ ವರ್ಷದ ಉತ್ತಮ ಶಿಕ್ಷಕರು, ಪ್ರತಿಭಾವಂತ ವಿದ್ಯಾರ್ಥಿಯನ್ನು ಗೌರವಿಸುವುದು ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಸಮಾಜಕ್ಕೆ ನೀಡುತ್ತಿರುವ ಬಹುದೊಡ್ಡ ಕೊಡುಗೆಯಾಗಿದೆ ಎಂದರು.
ಪ್ರೊ ಕೆ.ಸಿ. ಶಿವಪ್ಪ ಗಡಿನಾಡಿನವರು, ಪಕ್ಕದ ಕಾಗಲವಾಡಿಯವರಾಗಿದ್ದು, ಮುದ್ದುರಾಮು ತ್ರಿಪದಿಗಳನ್ನು ರಚನೆ ಮಾಡುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ವಿಶಿಷ್ಟ ವಾದ ಕೊಡುಗೆಯನ್ನು ನೀಡುತ್ತಿದ್ದಾರೆ. ೪೦ ಸಾವಿರಕ್ಕು ಹೆಚ್ಚು ತ್ರಿಪದಿಗಳನ್ನು ರಚನೆ ಮಾಡುವ ಮೂಲಕ ರಮ್ಯ ಕವಿಯಾಗಿದ್ದಾರೆ. ಅವರ ವಯಸ್ಸು ಮೀರಿ ಕಾವ್ಯರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಕಲಿಕಾ ಆಸಕ್ತಿ ಹಾಗೂ ಬರಹಗಳು ಯುವ ಜನಾಂಗಕ್ಕೆ ಸ್ಫೂರ್ತಿಯಾಗಿದೆ ಎಂದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಸಿ. ನಾಗಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೆ.ಸಿ. ಶಿವಪ್ಪ ಅವರ ತ್ರಿಪದಿಗಳು ಹೆಚ್ಚು ಪ್ರಚಲಿತವಾಗಿವೆ. ಅವರು ಮುದ್ದುರಾಮ ಕಾವ್ಯನಾಮ ಬಹಳ ಅದ್ಬುತವಾಗಿದೆ. ಇಂಥ ಮನಸ್ಸುವುಳ್ಳವರು ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಸಮಾಜವನ್ನು ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆ.ಪಿ. ಚಿಕ್ಕವೀರಯ್ಯ ಶಿಕ್ಷಕ ಪ್ರಶಸ್ತಿಯನ್ನು ವಿ.ವೀರಪ್ಪ ಹಾಗೂ ಕೆ.ಸಿ. ಶಿವಪ್ಪ ಪ್ರತಿಭಾ ಪುರಸ್ಕಾರ ಪ್ರಶಸ್ತಿಯನ್ನು ಎನ್. ರಾಜೇಶ್ವರಿ ಅವರಿಗೆ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಪ್ರಸಾರಂಗ ವಿಭಾಗದ ಪ್ರೊ. ನೀಲಗಿರಿ ತಳವಾರ್, ನಾಡಿನ ಹಿರಿಯ ಸಾಹಿತಿ ಹಾಗೂ ದತ್ತಿ ಪ್ರಾಯೋಜಕರಾದ ಕೆ.ಸಿ. ಶಿವಪ್ಪ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ದುಗ್ಗಟ್ಟಿ ಮಲ್ಲಿಕಾರ್ಜುನಸ್ವಾಮಿ, ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ಕೆ. ರವಿಕುಮಾರ್, ಕಾರ್ಯದರ್ಶಿ ಬಿ.ಎಸ್. ವಿನಯ್, ತಾಲೂಕು ಅಧ್ಯಕ್ಷರಾದ ಮಹದೇವಪ್ರಭು, ನಾಗರಾಜು, ಜ್ಯೋತಿ ಪ್ರಕಾಶ್, ವೀರಭದ್ರಸ್ವಾಮಿ, ಆರ್.ಎಂ.ಸ್ವಾಮಿ, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ವಸಂತಮ್ಮ, ತಾಲೂಕು ಅಧ್ಯಕ್ಷರಾದ ಶೋಭಾ ಸಿದ್ದರಾಜು, ರೂಪ ತೋಟೇಶ್, ಆರ್. ಪುಟ್ಟಮಲ್ಲಪ್ಪ, ಉಡಿಗಾಲ ಕುಮಾರಸ್ವಾಮಿ, ನಾಗಶ್ರೀ ಪ್ರತಾಪ್, ಪ್ರಾಂಶುಪಾಲ ಸಿದ್ದರಾಜು, ಮೊದಲಾದವರು ಇದ್ದರು.