ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಗುಣಮಟ್ಟದ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಿಗೆ ಗುರು ದಾರಿ ದೀಪವಾದರೇ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ವ್ಯಕ್ತಿತ್ವ ವಿಕಶನ ತರಬೇತುದಾರ ಆರ್.ಎ.ಚೇತನ್ ರಾವ್ ಅಭಿಪ್ರಾಯಪಟ್ಟರು.ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾರತೀ ವಿದ್ಯಾ ಸಂಸ್ಥೆ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಗುರುಪಥ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು, ಶಿಕ್ಷಕರು ವಿದ್ಯಾರ್ಥಿಗಳಲ್ಲಿರುವ ಗುರಿಯನ್ನು ಸರಿ ದಾರಿಯಲ್ಲಿ ಕೊಂಡೊಯ್ಯುವಲ್ಲಿ ಸರಿಯಾದ ಮಾರ್ಗದರ್ಶನ ನೀಡಬೇಕು ಎಂದರು.
ಸಮಾಜದಲ್ಲಿ ಕೇವಲ 15ರಷ್ಟು ಮಂದಿ ಪ್ರತಿಭಾವಂತರು ಮಾತ್ರ ವಿವಿಧ ಕ್ಷೇತ್ರಗಳಲ್ಲಿ ತೊಡಗಿ ಜಗತ್ತನ್ನು ಬದಲಾವಣೆ ಮಾಡಲು ತೋಡಗಿದ್ದು, ಎಂಜಿನಿಯರ್, ಡಾಕ್ಟರ್, ಜಡ್ಜ್ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಿ ಹಲವು ಕಂಪನಿಗಳನ್ನು ಸ್ಥಾಪಿಸಿ ಸಾಧನೆ ಮಾಡಿದ್ದಾರೆ. ಉಳಿದ ಶೇ.25 ರಷ್ಟು ಮಂದಿ 60 ರಿಂದ 80 ರಷ್ಟು ಅಂಕ ಪಡೆದರೂ ಮೇಲಕ್ಕೂ ಏರದೆ, ಕೆಳಗೂ ಇಳಿಯದೆ ಸಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಮಾತನಾಡಿ, ಭಾರತೀ ವಿದ್ಯಾಸಂಸ್ಥೆ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ. ಉತ್ತಮ ಶಿಕ್ಷಕರ ತಂಡ ಕಟ್ಟಿಕೊಂಡು ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲಗುವುದು ಎಂದರು.
ನನ್ನ ತಂದೆ ಮಾಜಿ ಸಂಸದ ದಿ.ಜಿ.ಮಾದೇಗೌಡ ಅವರು ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಿದ ಪರಿಣಾಮ ಸಂಸ್ಥೆಯ ಲಕ್ಷಾಂತರ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಂಡು ದೇಶ-ವಿದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ಇದು ನನ್ನ ತಂದೆಯ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ ಎಂದು ಭಾವುಕರಾದರು.ಇದೇ ವೇಳೆ ಮಹಾಜನ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ವಿನೋದಮ್ಮ ಅವರಿಗೆ ಉತ್ತಮ ಅಧ್ಯಾಪಕಿ ಪ್ರಶಸ್ತಿ ನೀಡಿ 10 ಸಾವಿರ ರೂ.ನಗದು ಹಾಗೂ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು. ಭಾರತೀ ಸ್ನಾತಕೋತ್ತರ ವಿಭಾಗದ ಗಣಿತಶಾಸ್ತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕುಮುದ ಅವರಿಗೆ ಪಿಎಚ್.ಡಿ ಪದವಿ ದೊರೆತ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ 100ಕ್ಕೂ ಹೆಚ್ಚು ಅಧ್ಯಾಪಕ-ಅಧ್ಯಾಪಕೇತರರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಜಿ. ಮಾದೇಗೌಡರ ಭಾವಚಿತ್ರಗಳಿಗೆ ಗಣ್ಯರು ಪುಷ್ಪನಮನ ಸಲ್ಲಿಸಿದರು.ಈ ವೇಳೆ ಬಿಇಟಿ ಸಿಇಒ ಆಶಯ್ ಜಿ.ಮಧು, ಕಾರ್ಯದರ್ಶಿಗಳಾದ ಬಿ.ಎಂ.ನಂಜೇಗೌಡ, ಸಿದ್ದೇಗೌಡ, ಬಿಇಡಿ ಕಾಲೇಜು ಪ್ರಾಂಶುಪಾಲ ಎಸ್.ಎಲ್.ಸುರೇಶ್, ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥರಾದ ಡಾ.ಎಂ.ಎಸ್. ಮಹದೇವಸ್ವಾಮಿ, ಎಸ್.ನಾಗರಾಜು, ಬಿ.ಕೆ.ಕೃಷ್ಣ, ಜಿ.ಬಿ.ಪಲ್ಲವಿ, ಪ್ರೊ.ಎಸ್.ಜವರೇಗೌಡ, ಬಿ.ಆರ್.ಚಂದನ್, ಬಾಲಸುಬ್ರಹ್ಮಣ್ಯ, ಪುಟ್ಟಸ್ವಾಮಿ, ಜಿ.ಕೆ.ಕೃಷ್ಣ. ರಾಜೇಂದ್ರ ರಾಜೇ ಅರಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.