ಸಾರಾಂಶ
ಗದಗ: ಹುಬ್ಬಳ್ಳಿಯ ಜಗದ್ಗುರು ಸಿದ್ಧಾರೂಢ ಸ್ವಾಮೀಜಿ ಜಯಂತ್ಯುತ್ಸವದ ಅಂಗವಾಗಿ ಸಿದ್ಧಾರೂಢ ಮಠದಲ್ಲಿ ಸಿದ್ಧಾರೂಢ ಸ್ವಾಮಿಯವರ ಟ್ರಸ್ಟ್ ಕಮಿಟಿ ವತಿಯಿಂದ ಏ. 10ರಿಂದ 15ರ ವರೆಗೆ ರಾಜ್ಯಮಟ್ಟದ 9ನೇ ವರ್ಷದ ಭಜನಾ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ರಾಜ್ಯಮಟ್ಟದ ಭಜನಾ ಸ್ಪರ್ಧೆ ಸಮಿತಿ ಅಧ್ಯಕ್ಷ ಹಾಗೂ ಶ್ರೀಮಠದ ಧರ್ಮದರ್ಶಿ ಶಾಮಾನಂದ ಪೂಜಾರಿ ಹೇಳಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.ಸ್ಪರ್ಧೆಯಲ್ಲಿ ಭಾಗವಹಿಸುವ ಭಜನಾ ತಂಡದವರು ಏ. 10ರೊಳಗಾಗಿ ಮಠದ ಟ್ರಸ್ಟ್ ಕಮಿಟಿಯ ಕಾರ್ಯಾಲಯದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಭಜನಾ ಮೇಳದವರಿಗೆ ಮಠದಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗುವುದು. ತಂಡದ ಪ್ರತಿಯೊಬ್ಬ ಕಲಾವಿದರಿಗೂ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಹೇಳಿದರು.
ಭಜನಾ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡದವರಿಗೆ ಮೂರು ಪದಗಳನ್ನು ಹಾಡುವ ಅವಕಾಶವಿದ್ದು, ಮೂರೂ ಪದಗಳನ್ನು 18 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಪ್ರತಿ ತಂಡದವರು ಎರಡು ಪದ್ಯಗಳನ್ನು ಕೈವಲ್ಯ ಪದ್ಧತಿ ಸಾಹಿತ್ಯದ ಮೇಲೆ ಕಡ್ಡಾಯವಾಗಿ ಹಾಡಬೇಕು. ಪ್ರತಿ ತಂಡದವರು ಮೂರನೇ ಪದ್ಯವನ್ನು ಜಗದ್ಗುರು ಸಿದ್ಧಾರೂಢರು, ದಾಸರ ಪದ್ಯ, ಶಿಶುನಾಳ ಶರೀಫರ ಪದ್ಯ ಹಾಗೂ ವಚನ ಸಾಹಿತ್ಯ ಇವುಗಳಲ್ಲಿ ಯಾವುದಾದರೊಂದು ಹಾಡಬಹುದು. ಇಲ್ಲವೇ ಮೂರು ಪದ್ಯಗಳನ್ನು ಕೈವಲ್ಯ ಸಾಹಿತ್ಯದ ಮೇಲೆ ಹಾಡಬಹುದು. ಸಿದ್ದಾರೂಢರ ಮೇಲಿನ ಪದ್ಯ, ದಾಸರ ಪದ್ಯ, ಶರೀಫರ ಪದ್ಯ ಹಾಡುವವರು ತಮ್ಮ ಹಾಡಿನ ಸಾಹಿತ್ಯದ ಒಂದು ಪ್ರತಿಯನ್ನು ನಿರ್ಣಾಯಕರ ಕಡೆ ಒಪ್ಪಿಸಬೇಕು. ಜಾನಪದ ಹಾಗೂ ಸಿನಿಮಾ ಶೈಲಿಯಲ್ಲಿ ಹಾಡುವವರಿಗೆ ಅವಕಾಶ ನೀಡಲಾಗುವುದಿಲ್ಲ. ಒಂದು ಸ್ಪರ್ಧೆಯಲ್ಲಿ ಭಾಗವಹಿಸುವ ತಂಡದ ಕಲಾವಿದರ ಸಂಖ್ಯೆ 6ಕ್ಕಿಂತ ಕಡಿಮೆ ಇರಬಾರದು ಮತ್ತು 10ಕ್ಕಿಂತ ಹೆಚ್ಚಿಗೆ ಇರಬಾರದು. ಒಂದು ತಂಡದಲ್ಲಿ ಭಾಗವಹಿಸಿದ ಕಲಾವಿದರಿಗೆ ಮತ್ತೊಂದು ತಂಡದಲ್ಲಿ ಹಾಡಲು ಅವಕಾಶ ಇಲ್ಲ. ಆದರೆ, ತಬಲಾ ವಾದಕರಿಗೆ ಮಾತ್ರ ಕೇವಲ 2 ತಂಡಗಳಲ್ಲಿ ತಬಲಾ ಸಾಥ್ ನೀಡಲು ಅವಕಾಶ ನೀಡಲಾಗುವುದು. ಇನ್ನುಳಿದ ನಿಯಮಗಳನ್ನು ಸ್ಪರ್ಧೆಯ ಮುಂಚಿತವಾಗಿ ಸ್ಥಳದಲ್ಲಿಯೇ ಎಲ್ಲ ತಂಡದವರಿಗೆ ತಿಳಿಸಲಾಗುವುದು. ಸ್ಪರ್ಧೆಯ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಬಂದಲ್ಲಿ ನಿರ್ಣಾಯಕರ ಹಾಗೂ ಶ್ರೀ ಸಿದ್ಧಾರೂಢ ಸ್ವಾಮಿಯವರ ಟ್ರಸ್ಟ್ ಕಮಿಟಿಯ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯ ಸಮಿತಿಯ ನಿರ್ಣಯವೇ ಅಂತಿಮ ಎಂದು ಸ್ಪಷ್ಟಪಡಿಸಿದರು.ಭಜನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ₹1 ಲಕ್ಷ, ದ್ವಿತೀಯ ₹80 ಸಾವಿರ, ತೃತೀಯ ₹70 ಸಾವಿರ ಹಾಗೂ ಸಮಾಧಾನಕರ ಬಹುಮಾನವಾಗಿ 10 ತಂಡಗಳಿಗೆ ₹9 ಸಾವಿರ ನೀಡಲಾಗುವುದು. 16 ವರ್ಷದೊಳಗಿನ ಬಾಲಕರ ಹಾಗೂ ಬಾಲಕಿಯರ ತಲಾ ಒಂದು ತಂಡಕ್ಕೆ ₹10 ಸಾವಿರ ನೀಡಲಾಗುವುದು. ವೈಯಕ್ತಿಕ ಬಹುಮಾನ (ತಲಾ ಇಬ್ಬರಿಗೆ): ಕ್ರಮವಾಗಿ ಉತ್ತಮ ಹಾಡುಗಾರರಿಗೆ, ಉತ್ತಮ ಹಾರ್ಮೋನಿಯಂ ವಾದಕರಿಗೆ, ಉತ್ತಮ ತಬಲಾ ವಾದಕರಿಗೆ, ಉತ್ತಮ ತಾಳ ವಾದಕರಿಗೆ, ಉತ್ತಮ ಧಮಡಿ ವಾದಕರಿಗೆ ₹3 ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ, ಹೆಚ್ಚಿನ ಮಾಹಿತಿಗಾಗಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಮೊಬೈಲ್ ಸಂಖ್ಯೆ 9880169881, 8095882033 ಸಂಪರ್ಕಿಸಬಹುದು ಎಂದರು.
ಮಾಜಿ ಶಾಸಕ, ಸಿದ್ಧಾರೂಢ ಕಮಿಟಿ ಅಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ, ಜಗದ್ಗುರು ಶ್ರೀ ಸಿದ್ಧಾರೂಢರ 190ನೇ ಜಯಂತಿ ಹಾಗೂ ಶ್ರೀ ಗುರುನಾಥಾರೂಢರ 115ನೇ ಜಯಂತಿ, ಶ್ರೀ ಸಿದ್ಧಾರೂಢರ ಕಥಾಮೃತ ಶತಮಾನೋತ್ಸವ ನಿಮಿತ್ತ 2024ನೇ ಸಾಲಿನ ಶಿವರಾತ್ರಿ ಮಹೋತ್ಸವದಿಂದ 2025ನೇ ಸಾಲಿನ ಶಿವರಾತ್ರಿ ಮಹೋತ್ಸವದ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.ವಿಶ್ವ ವೇದಾಂತ ಪರಿಷತ್, ಆರೂಢ ಜ್ಯೋತಿ ಯಾತ್ರೆ, ಲಕ್ಷರುದ್ರಾಭಿಷೇಕ, ಕೋಟಿ ಬಿಲ್ವಾರ್ಚನೆ, 108 ಅದ್ವೈತ ವೇದಾಂತ ಗ್ರಂಥಗಳ ಮುದ್ರಣ, ಶ್ರೀ ಸಿದ್ದಾರೂಡ ಕಥಾಮೃತ ಮೆರವಣಿಗೆ ಹಾಗೂ ಆರತಿ ಕುಂಭೋತ್ಸವ, ಗುರುಕುಲ ಪ್ರಾರಂಭೋತ್ಸವ, ಸ್ಮರಣ ಸಂಚಿಕೆ ಲೋಕಾರ್ಪಣೆ, ಅದ್ವೈತ ವೇದಾಂತ ಮಂಟಪದ ನಿರ್ಮಾಣ, 1008 ಶ್ರೀ ಸಿದ್ದಾರೂಢರ ತುಲಾಭಾರ ಸೇವೆ ಹಾಗೂ ಭಕ್ತರಿಗಾಗಿ 108 ಕೊಠಡಿಗಳ ನಿರ್ಮಾಣ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಭಕ್ತರು ಈ ಪುಣ್ಯಮಯ ಕಾರ್ಯಕ್ರಮಕ್ಕೆ ಆಗಮಿಸಿ ತನು-ಮನ-ಧನದಿಂದ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ, ಪುನೀತ ಮಹಾರಾಜರು, ಆತ್ಮಾನಂದ ಸ್ವಾಮೀಜಿ, ಜಿ.ಆರ್. ಓದುಗೌಡರ ಸೇರಿ ಅನೇಕರು ಇದ್ದರು.