ಎಚ್ಎಸ್‌ಆರ್‌ಪಿ ಹೆಸರಲ್ಲಿ ನಡೆದಿದೆ ಮಹಾ ದೋಖಾ!

| Published : Apr 02 2024, 01:03 AM IST

ಸಾರಾಂಶ

ದೇಶದ ಎಲ್ಲಾ ವಾಹನಗಳಿಗೂ ಒಂದೇ ಮಾದರಿಯ ನಂಬರ್ ಪ್ಲೇಟ್‌ಗಳು ಅಳವಡಿಕೆಗೆ ರೇಡಿಯಂ ಅಂಗಡಿಗಳಲ್ಲಿ ₹ 500 ಪಡೆದು ಕೇವಲ IND ನಂಬರ್ ಪ್ಲೇಟ್‌ಗಳನ್ನು ಅಳವಡಿಸಲಾಗುತ್ತಿದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಎಲ್ಲಾ ವಾಹನಗಳಿಗೂ ಒಂದೇ ಮಾದರಿಯ ನಂಬರ್ ಪ್ಲೇಟ್‌ಗಳು ಇರಬೇಕು. ಜೊತೆಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ಗಳನ್ನು (ಎಚ್‌ಎಸ್‌ಆರ್‌ಪಿ) ಅಳವಡಿಸಬೇಕು ಎಂದು ಕೇಂದ್ರ ಸಾರಿಗೆ ಇಲಾಖೆ ಚಾಲನೆ ನೀಡಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದನೆ ಸಿಗದ ಕಾರಣ ಅವಧಿಯನ್ನು ಎರಡ್ಮೂರು ಬಾರಿ ವಿಸ್ತರಿಸಿತು. ಈಗ ಕೊನೆಯ ಅವಕಾಶ ಎಂದು ಮೇ 31ರವರೆಗೆ ಗಡುವು ನೀಡಿದೆ. ಈ ಅವಧಿಯೊಳಗೆ ಎಚ್ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸಿಕೊಳ್ಳದಿದ್ದರೆ ಭಾರೀ ಪ್ರಮಾಣದ ದಂಡ ತೆರಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಈಗಾಗಲೇ ವಾಹನ ಮಾಲೀಕರಿಗೆ ನೀಡಲಾಗಿದೆ.

ಮೇ 31 ಕೊನೆಯ ಗಡುವು ನೀಡಿದ್ದರಿಂದ ಇದೀಗ ಎಲ್ಲೆಡೆ ರೇಡಿಯಂ ಅಂಗಡಿಗಳ ಮುಂದೆ ವಾಹನಗಳು ಸಾಲು ಸಾಲಾಗಿ ನಿಲ್ಲುತ್ತಿವೆ. ರೇಡಿಯಂ ಅಂಗಡಿಗಳಲ್ಲಿ ₹ 500 ಪಡೆದು ಕೇವಲ IND ನಂಬರ್ ಪ್ಲೇಟ್‌ಗಳನ್ನು ಅಳವಡಿಸಲಾಗುತ್ತಿದೆ. ಎಚ್ಎಸ್‌ಆರ್‌ಪಿ ಹೆಸರಿನಲ್ಲಿ IND ಪ್ಲೇಟ್ ಅಳವಡಿಸಿ ವಾಹನಗಳ ಮಾಲೀಕರಿಗೆ ವಂಚಿಸುತ್ತಿರುವುದು ಕಂಡುಬರುತ್ತಿದೆ.

ಎಚ್ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸುವುದು ಹೇಗೆ?:

ಎಚ್ಎಸ್‌ಆರ್‌ಪಿ ಸಂಖ್ಯಾ ಫಲಕಗಳನ್ನು ಸ್ಥಳೀಯವಾಗಿ ಎಲ್ಲಿಯೂ ಖರೀದಿ ಮಾಡಲು ಆಗಲ್ಲ. ಅವುಗಳನ್ನು ಆನ್‌ಲೈನ್‌ನಲ್ಲಿಯೇ ಬುಕ್ ಮಾಡಿ ಸಮೀಪದ ಶೋರೂಂಗಳಿಗೆ ನಿಗದಿತ ದಿನಾಂಕಕ್ಕೆ ಹೋಗಿ ಅಳವಡಿಸಿಕೊಳ್ಳಬೇಕು. Book my hsrp.com ಅಥವಾ www.siam.in ಈ ವೆಬ್‌ಸೈಟ್‌ಗಳಲ್ಲಿ ವಾಹನದ ನಂಬರ್, ಇಂಜಿನ್ ನಂಬರ್, ಚಸ್ಸಿ ನಂಬರ್, ಮಾಲೀಕರ ವಿಳಾಸ ಸೇರಿದಂತೆ ಅಗತ್ಯವಿರುವ ದಾಖಲೆಗಳನ್ನು ನೀಡಿ ಬುಕ್ ಮಾಡಿಕೊಳ್ಳಬೇಕು. ಆನ್‌ಲೈನ್ ನಲ್ಲಿಯೇ ಪೇಮೆಂಟ್ ಮಾಡಿದ ಬಳಿಕ, ನಂಬರ್ ಪ್ಲೇಟ್‌ಗಳು ಹತ್ತಿರದ ಶೋರೂಂಗೆ ಬರುವ ದಿನಾಂಕ ಗೋಚರವಾಗಿ, ಒಂದು ಅಕಾನಾಲೇಜ್ಮೆಂಟ್‌ ಬರುತ್ತದೆ, ಅದರಂತೆ ಆ ದಿನಾಂಕದಂದು ಶೋರೂಂಗೆ ಹೋಗಿ ನಂಬರ್ ಪ್ಲೇಟ್‌ ಅಳವಡಿಸಿಕೊಳ್ಳಬೇಕು.ಆನ್‌ಲೈನ್‌ನಲ್ಲೂ ವಂಚನೆ?:

ಈಗಾಗಲೇ ಆನ್‌ಲೈನ್‌ನಲ್ಲಿ ಎಚ್ಎಸ್‌ಆರ್‌ಪಿ ಬುಕ್ ಮಾಡಲು ಜನರು ಪರದಾಡುತ್ತಿದ್ದಾರೆ. ಮತ್ತೊಂದೆಡೆ ಇದರಿಂದ ಹಣ ಮಾಡಿಕೊಳ್ಳಲು ಕೆಲ ಖದೀಮರು ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿ ಮಾಡಿದ್ದಾರೆ. ಸರಿಯಾದ ಮಾಹಿತಿ ಗೊತ್ತಿಲ್ಲದೆ, ಯಾವುದೋ ಸೈಟ್‌ಗೆ ಹೋಗಿ ಬುಕ್ ಮಾಡಿದಲ್ಲಿ ವಾಹನ ಮಾಲೀಕರ ಹಣಕ್ಕೆ ಪಂಗನಾಮ ಬೀಳವುದಂತೂ ಗ್ಯಾರಂಟಿ. ಆದ್ದರಿಂದ Book my hsrp.com ಅಥವಾ www.siam.in ನಲ್ಲಿ ಮಾತ್ರ ಬುಕ್ ಮಾಡಬೇಕು ಎಂದು ಆರ್‌ಟಿಒ ಅಧಿಕಾರಿಗಳು ಹೇಳುತ್ತಾರೆ.

ಎಚ್‌ಎಸ್ಆರ್‌ಪಿ ವಿಶೇಷತೆಗಳು:

ಎಚ್‌ಎಸ್‌ಆರ್‌ಪಿ ಸಂಖ್ಯಾ ಫಲಕಗಳು ಅತೀ ಸುರಕ್ಷತಾ ನೋಂದಣಿ ಫಲಕವಾಗಿವೆ. ಇವುಗಳನ್ನು ಅಲ್ಯೂಮಿನಿಯಂ ಲೋಹದಿಂದ ತಯಾರು ಮಾಡಲಾಗಿದ್ದು, ಪ್ಲೇಟ್‌ನ ಮೇಲ್ಭಾಗದ ಎಡಬದಿಯಲ್ಲಿ ಅಶೋಕ ಚಕ್ರ ಮುದ್ರೆಯ 20X20 ಮಿ.ಮೀ ಅಳತೆಯ ಕ್ರೋಮಿಯಂ ಹಾಲೋಗ್ರಾಮ್ ಇರುತ್ತದೆ. ಇಂಗ್ಲಿಷ್ ಅಕ್ಷರಗಳು ಹಾಗೂ ನಂಬರ್‌ಗಳು ಉಬ್ಬಿಕೊಂಡಿರುವ ರೀತಿ ಅಚ್ಚಾಗಿರುತ್ತವೆ. ಉಬ್ಬಿನ ಮೇಲೆ ಸಂಪೂರ್ಣವಾಗಿ IND ಎಂದು ಬರೆಯಲಾಗಿದ್ದು, ಈ ನಂಬ‌ರ್ ಪ್ಲೇಟ್‌ಗಳಿಗೆ ಎರಡು ಲಾಕ್ ಪಿನ್‌ ಅಳವಡಿಸಲಾಗಿದೆ. ಇದರಿಂದ ಅಸಲಿ ಯಾವುದು, ನಕಲಿ ಯಾವುದು? ಎಂದು ಸುಲಭವಾಗಿ ಕಂಡುಹಿಡಿಯಬಹುದಾಗಿದೆ.

ಶೇ.2ರಷ್ಟು ವಾಹನಗಳಿಗೆ ಮಾತ್ರ ಎಚ್‌ಎಸ್ಆರ್‌ಪಿ:

ಸಾಕಷ್ಟು ಬಾರಿ ಎಚ್ಚರಿಸಿದರೂ ವಿಜಯಪುರ ಜಿಲ್ಲೆಯಲ್ಲಿ ಮಾತ್ರ ವಾಹನ ಮಾಲೀಕರು ಎಚ್ಚೆತ್ತುಕೊಂಡಿಲ್ಲ. ಜಿಲ್ಲೆಯಾದ್ಯಂತ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರ ಸೇರಿದಂತೆ ಎಲ್ಲಾ ಮಾದರಿ ಸೇರಿ 12ಲಕ್ಷದಷ್ಟು ವಾಹನಗಳಿವೆ. ಆದರೆ ಅದರಲ್ಲಿ ಇದುವರೆಗೂ ಕೇವಲ ಶೇ.2 ರಷ್ಟು ವಾಹನಗಳ ಮಾಲೀಕರು ಮಾತ್ರ ಎಚ್ಎಸ್‌ಆರ್‌ಪಿ ಬುಕ್ ಮಾಡಿ ಅಳವಡಿಸಿಕೊಂಡಿದ್ದಾರೆ. ತಕ್ಷಣದಲ್ಲೇ ಎಲ್ಲರೂ ಎಚ್ಎಸ್‌ಆರ್‌ಪಿ ಅಳವಡಿಸಿಕೊಳ್ಳುವ ಮೂಲಕ ದಂಡದಿಂದ ಪಾರಾಗಬೇಕಿದೆ.

ಅಂತಿಮ ಗಡುವಾದ ಮೇ 31ರ ಒಳಗೆ 2019ಕ್ಕೂ ಮುಂಚಿನ ವಾಹನಗಳಿಗೆ ಎಚ್ಎಸ್‌ಆರ್‌ಪಿ ಅಳವಡಿಸಿಕೊಳ್ಳದಿದ್ದರೆ ಅಟೊಮೇಟಿಕ್ ಆಗಿ ಆ ವಾಹನದ ಎಲ್ಲಾ ಪರವಾನಗಿ ಬ್ಲಾಕ್ ಆಗಲಿದೆ. ವಾಹನದ ಕುರಿತು ಯಾವುದೇ ಕೆಲಸಕ್ಕೆ ಆರ್‌ಟಿಒ ಕಚೇರಿಗೆ ಹೋದರೆ ಅದು ಆಗೋದಿಲ್ಲ. ಉದಾಹರಣೆಗಾಗಿ ವಾಹನ ಮಾಲೀಕರ ಬದವಾವಣೆ, ಪರವಾನಗಿ ನವೀಕರಣ, ಲೋನ್ ಕ್ಲಿಯರನ್ಸ್ ಅಪಡೇಟ್ ಮುಂತಾದ ಸೌಲಭ್ಯಗಳು ಸಿಗೋದಿಲ್ಲ.

ಎಲ್ಲರೂ ಬೇಗನೆ ತಮ್ಮ ತಮ್ಮ ವಾಹನಗಳಿಗೆ ಎಚ್ಎಸ್‌ಆರ್‌ಪಿ ಹಾಕಿಕೊಳ್ಳಬೇಕು, ಕೊನೆ ಕ್ಷಣದಲ್ಲಿ ಪರದಾಡುವಂತಾಗಬಾರದು. ಸರ್ಕಾರ ನೀಡಿದ ಅವಧಿ ಮುಗಿದ ಬಳಿಕ ಎಚ್ಎಸ್‌ಆರ್‌ಪಿ ಅಳವಡಿಸದ ವಾಹನಗಳ ಮಾಲೀಕರಿಗೆ ನೋಟಿಸ್‌ ನೀಡಲಾಗುವುದು. ಜೊತೆಗೆ ₹ 500 ರಿಂದ ₹ 1ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಈಗಲೇ ಆನಲೈನ್‌ನಲ್ಲಿ ಬುಕ್ ಮಾಡಿಕೊಂಡು ವಾಹನಗಳ ಮಾಲೀಕರು ದಂಡದಿಂದ ಪಾರಾಗಬೇಕು.

-ವಸಂತ ಚವ್ಹಾಣ, ಆರ್‌ಟಿಒ ಅಧಿಕಾರಿ, ವಿಜಯಪುರ.

----

ಸಾರಿಗೆ ಇಲಾಖೆಯ ಸೂಚನೆ ಬಂದ ಬಳಿಕ ಆರಂಭದಲ್ಲೇ ಆನಲೈನ್ ನಲ್ಲಿ ಬುಕ್ ಮಾಡಿ ನನ್ನ ಬೈಕ್ ಗೆ ಎಚ್ಎಸ್‌ಆರ್‌ಪಿ ಫಲಕ ಹಾಕಿಸಿದ್ದೇನೆ. ನನ್ನ ಸ್ನೇಹಿತ ತಡವಾಗಿ ಬುಕ್ ಮಾಡಿದ್ದರಿಂದ ನಂಬರ್ ಪ್ಲೇಟ್ ಹಾಕಿಸಿಕೊಳ್ಳಲು ಆರು ತಿಂಗಳು ಕಾಯಬೇಕಾಗಿದೆ.

-ಭೀಮರಾವ ಕುಲಕರ್ಣಿ, ಎಚ್ಎಸ್‌ಆರ್‌ಪಿ ಹಾಕಿಸಿಕೊಂಡ ವಾಹನ ಮಾಲೀಕ