ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಿ.ವಿ.ವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 2024-25ನೇ ಸಾಲಿನ ಎಮ್‌ಬಿಬಿಎಸ್ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಕಾಲೇಜಿನ ಶತಾಬ್ಧಿ ಸಭಾಭವನದಲ್ಲಿ ನಡೆಯಿತು.ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮಕ್ಕೆ ಹಾಸ್ಟೆಲ್ ಕಮಿಟಿ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ ಮತ್ತು ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ ಅತಿಥಿಗಳಾಗಿ ಆಗಮಿಸಿದ್ದರು. ವಿದ್ಯಾರ್ಥಿನಿಯರ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಉಪಸ್ಥಿತರನ್ನು ಸ್ವಾಗತಿಸಿದ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ ಕಾಲೇಜಿನ ಬೆಳವಣಿಗೆ ಮತ್ತು ಇಲ್ಲಿನ ಸೌಲಭ್ಯಗಳನ್ನು ಕುರಿತು ಪ್ರಾಸ್ತಾವಿಕ ಮಾತನಾಡಿದರು.ಎಮ್‌ಬಿಬಿಎಸ್ ಪ್ರಥಮ ವರ್ಷದ ಎಲ್ಲ ವಿಭಾಗಗಳ ಮುಖ್ಯಸ್ಥರಿಂದ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದ ವಿಭಾಗಗಳ ಪರಿಚಯ ಮಾಡಿಕೊಡಲಾಯಿತು. ಕುಮಾರಸ್ವಾಮಿ ಅವರು, ವಸತಿ ಗೃಹಗಳಲ್ಲಿನ ಸೌಲಭ್ಯಗಳು, ಪಾಲಿಸಬೇಕಾದ ನಿಯಮಗಳು ಮತ್ತು ಇಲ್ಲಿನ ಕ್ರೀಡಾ ಸೌಲಭ್ಯಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಶೋಕ ಸಜ್ಜನ ಅವರು, ಬಿ.ವಿ.ವಿ.ಸಂಘದ ಸ್ಥಾಪನೆ, ಸಾಧನೆ ಮತ್ತು ಅದರ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಕಡಿಮೆ ಕಾಲಾವಧಿಯಲ್ಲಿ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ರಾಜ್ಯದ ಅತ್ಯುತ್ತಮ ವೈದ್ಯಕೀಯ ಮಹಾವಿದ್ಯಾಲಯವಾಗಿ ಬೆಳೆದು ನಿಂತಿರುವುದನ್ನು ಬಣ್ಣಿಸಿದರು. ಈ ಬೆಳವಣಿಗೆಯಲ್ಲಿ ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರ ಅವಿಶ್ರಾಂತ ಪ್ರಯತ್ನ ಸ್ಮರಿಸಿಕೊಂಡರು.ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಹತ್ತು ವಿದ್ಯಾರ್ಥಿಗಳಿಗೆ ಕಾರ್ಯಾಧ್ಯಕ್ಷರು ಏಪ್ರನ್ ವಿತರಿಸಿದರು. ಡಾ.ಸಂಜೀವ ಕೊಳಗಿ ವಿದ್ಯಾರ್ಥಿಗಳಿಗೆ ಚರಕಶಪಥ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಪಾಲಕ ಡಾ.ಬಸವರಜ ಕೋಟಿನತೋಟರವರು ಕಾಲೇಜಿನ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ನಿರೂಪಣೆ ಡಾ.ನಿರಂಜನ ಮಾಡಿದರು. ಡಾ.ಮಂಜುಳಾ ಪಾಟೀಲ ವಂದನಾರ್ಪಣೆಯೊಂದಿಗೆ ಸಮಾರಂಭ ಮುಕ್ತಾಯಗೊಂಡಿತು. ಕಾಲೇಜಿ ಎಲ್ಲ ವಿಭಾಗಗಳ ಮುಖ್ಯಸ್ಥರು, ಇತರೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಪ್ರಥಮ ವರ್ಷದ ವಿದ್ಯಾರ್ಥಿಗಳು ಮತ್ತು ಪಾಲಕರು ಪಾಲ್ಗೊಂಡಿದ್ದರು.