ಸಂಪೂರ್ಣ ಸ್ವಚ್ಛತೆ ಸಾಧಿಸುವತ್ತ ದಿಟ್ಟ ಹೆಜ್ಜೆ

| Published : Oct 28 2024, 01:10 AM IST

ಸಾರಾಂಶ

ಪ್ರತಿಯೊಂದು ಗ್ರಾಮದಲ್ಲಿ ಸಂಪೂರ್ಣ ಸ್ವಚ್ಛತೆ ಸಾಧಿಸುವ ಮೂಲಕ ಆರೋಗ್ಯಕರ ವಾತಾವರಣ ಸೃಷ್ಟಿಸುವ ಸದುದ್ದೇಶದಿಂದ ಹುಕ್ಕೇರಿ ತಾಲೂಕು ಪಂಚಾಯತಿ ಪ್ರತಿ ಗ್ರಾಮ ಪಂಚಾಯತಿಯಲ್ಲೂ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲು ದಿಟ್ಟ ಹೆಜ್ಜೆ ಇಟ್ಟಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಪ್ರತಿಯೊಂದು ಗ್ರಾಮದಲ್ಲಿ ಸಂಪೂರ್ಣ ಸ್ವಚ್ಛತೆ ಸಾಧಿಸುವ ಮೂಲಕ ಆರೋಗ್ಯಕರ ವಾತಾವರಣ ಸೃಷ್ಟಿಸುವ ಸದುದ್ದೇಶದಿಂದ ಹುಕ್ಕೇರಿ ತಾಲೂಕು ಪಂಚಾಯತಿ ಪ್ರತಿ ಗ್ರಾಮ ಪಂಚಾಯತಿಯಲ್ಲೂ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲು ದಿಟ್ಟ ಹೆಜ್ಜೆ ಇಟ್ಟಿದೆ.

ಪ್ರತಿಯೊಂದು ಗ್ರಾಮ ಸಂಪೂರ್ಣ ಸ್ವಚ್ಛತೆಯಿಂದ ಕೂಡಿರಬೇಕೆಂಬ ಉದ್ದೇಶ ಹೊಂದಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಈ ನಿಟ್ಟಿನಲ್ಲಿ ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕಾಗಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಮತ್ತು ಸ್ವಚ್ಛ ಭಾರತ್ ಮಿಷನ್ (ಎಸ್‌ಬಿಎಂ) ಅನುದಾನ ಬಳಸಿಕೊಳ್ಳಲಾಗಿದೆ.

ಸ್ಥಳ ಲಭ್ಯತೆಗೆ ಅನುಗುಣವಾಗಿ ಈಗಾಗಲೇ ತಾಲೂಕಿನ 52 ಗ್ರಾಪಂಗಳ ಪೈಕಿ 30 ಗ್ರಾಪಂಗಳಲ್ಲಿ ಘಟಕಗಳ ನಿರ್ಮಾಣ ಪೂರ್ಣಗೊಂಡಿದ್ದು 3 ಗ್ರಾಪಂಗಳಲ್ಲಿ ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ. ಇದರೊಂದಿಗೆ ಉದ್ದೇಶಿತ ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಾಣ ಮಾಡುವ ಮೂಲಕ ತ್ಯಾಜ್ಯ ವಿಲೇವಾರಿಯಲ್ಲಿ ಆರ್‌ಡಿಪಿಆರ್ ಇಲಾಖೆ ಪ್ರಗತಿಯ ಹೆಜ್ಜೆ ಇಟ್ಟಿದೆ.

ನರೇಗಾ ಯೋಜನೆಯಡಿ ತಲಾ ಒಂದು ಘಟಕ ನಿರ್ಮಾಣಕ್ಕೆ ₹20 ಲಕ್ಷ ವೆಚ್ಚ ಮಾಡಲಾಗಿದೆ. ಸಾಮಗ್ರಿ ಮತ್ತು ಕೂಲಿ 80:20 ಅನುಪಾತದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಸಾರಾಪುರ, ಬೆಳವಿ, ಹಿಟ್ನಿ, ಕೋಟಬಾಗಿ, ಮತ್ತಿವಾಡೆ, ಬುಗಟೆ ಆಲೂರ, ಹರಗಾಪುರ, ಸೊಲ್ಲಾಪುರ, ಬೆಣಿವಾಡ, ಹೊಸೂರ, ಪಾಶ್ಚಾಪುರ, ಬೋರಗಲ್, ಕಣಗಲಾ, ಮಣಗುತ್ತಿ, ಹಂಚಿನಾಳ, ಕೇಸ್ತಿ, ನೇರ್ಲಿ, ಬಾಡ, ಅಮ್ಮಣಗಿ, ಎಲಿಮುನ್ನೋಳಿ, ಮಾವನೂರ, ಸುಲ್ತಾನಪುರ ಗ್ರಾಪಂಗಳಲ್ಲಿ ಪೂರ್ಣಗೊಂಡಿದ್ದು, ಹೊಸಪೇಟ, ಗುಡಸ, ಕೋಣನಕೇರಿ ಗ್ರಾಪಂಗಳಲ್ಲಿ ಘಟಕಗಳ ನಿರ್ಮಾಣ ಕಾರ್ಯ ಪ್ರಗತಿ ಹಂತದಲ್ಲಿವೆ.

ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ತಲಾ ಒಂದು ಘಟಕ ನಿರ್ಮಾಣಕ್ಕೆ ₹10 ಲಕ್ಷ ವ್ಯಯಿಸಲಾಗಿದೆ. ಬೆಲ್ಲದ ಬಾಗೇವಾಡಿ, ಘೋಡಗೇರಿ, ಹೆಬ್ಬಾಳ, ದಡ್ಡಿ, ಸಲಾಮವಾಡಿ, ಉಳ್ಳಾಗಡ್ಡಿ ಖಾನಾಪುರ, ನಿಡಸೋಸಿ, ಯಾದಗೂಡ ಗ್ರಾಪಂಗಳಲ್ಲಿ ಕಾಮಗಾರಿ ಪೂರ್ಣಗೊಂಡಿವೆ.

ಘಟಕಗಳನ್ನು ನಿರ್ಮಾಣ ಮಾಡಲು ಅಗತ್ಯ ಭೂಮಿ ಮಂಜೂರಾತಿಗೆ ತಾಲೂಕು ಆಡಳಿತ ಸ್ಪಂದಿಸಿದ್ದರಿಂದ ತಾಲೂಕಿನಲ್ಲಿ ಉತ್ತಮ ಸಾಧನೆ ಸಾಧ್ಯವಾಗಿದೆ. ಘಟಕ ನಿರ್ಮಾಣಕ್ಕೆ ಜಾಗದ ಕೊರತೆ ಎದುರಿಸುತ್ತಿರುವ ಗ್ರಾಪಂಗಳ ಕೋರಿಕೆ ಮೇರೆಗೆ ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಿ ಗೋಮಾಳ, ಖರಾಬ ಇತ್ಯಾದಿ ಕಡೆ ಜಮೀನು ಮಂಜೂರು ಮಾಡುತ್ತಿದೆ. ಬಹುತೇಕ ಕಡೆ ಸರ್ಕಾರಿ ಗೋಮಾಳ ಜಮೀನು ಒತ್ತುವರಿಯಾಗಿದೆ. ಒತ್ತುವರಿ ಸ್ಥಳೀಯ ಅಧಿಕಾರಿಗಳಿಗೆ ತಲೆನೋವಾಗಿದೆ. ತೆರವಿಗೆ ಮುಂದಾಗಿರುವ ಅಧಿಕಾರಿಗಳ ಮೇಲೆ ಒತ್ತುವರಿದಾರರು ರಾಜಕೀಯ ಪ್ರಭಾವ ಬಳಸಿ ತಡೆಯುತ್ತಿರುವುದು ಕೆಲವೆಡೆ ಘಟಕಗಳ ನಿರ್ಮಾಣ ವಿಳಂಬ ಆಗುತ್ತಿದೆ ಎಂಬ ಆರೋಪಗಳಿವೆ.

ಫೀಲ್ಡಿಗೆ ಇಳಿದ ಅಧಿಕಾರಿಗಳು:

ಘಟಕಗಳ ನಿರ್ಮಾಣಕ್ಕೆ ಜಮೀನು ಸಮಸ್ಯೆ ಇರುವ ಕಡೆಗಳಲ್ಲಿ ಹುಕ್ಕೇರಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್. ಮಲ್ಲಾಡದ, ನರೇಗಾ ಸಹಾಯಕ ನಿರ್ದೇಶಕ ಪಿ.ಲಕ್ಷ್ಮೀನಾರಾಯಣ, ತಾಂತ್ರಿಕ ಸಂಯೋಜಕ ಅರ್ಷದ ನೇರ್ಲಿ ಮತ್ತು ಆಯಾ ಗ್ರಾಪಂಗಳ ಪಿಡಿಒಗಳು ಭೇಟಿ ನೀಡಿ, ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿದ್ದಾರೆ. ಜಾಗದ ಕಿರಿಕಿರಿ ನಿವಾರಿಸಿ ಘಟಕ ನಿರ್ಮಾಣಕ್ಕೆ ವೇಗ ನೀಡಿದ್ದಾರೆ.

ಹುಕ್ಕೇರಿ ತಾಲೂಕಿನ ಪ್ರತಿ ಗ್ರಾಪಂಗಳಲ್ಲಿ ಸಂಪೂರ್ಣ ಸ್ವಚ್ಛತೆ ಸಾಧಿಸುವ ಮೂಲಕ ಆರೋಗ್ಯಕರ ವಾತಾವರಣ ಸೃಷ್ಟಿಸುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ನರೇಗಾ ಮತ್ತು ಎಸ್‌ಬಿಎಂ ಯೋಜನೆಯಡಿ ಘನತ್ಯಾಜ್ಯ ವಿಲೇವಾರಿ ನಿರ್ವಹಣಾ ಘಟಕ ನಿರ್ಮಿಸಲಾಗುತ್ತಿದೆ.

- ಟಿ.ಆರ್.ಮಲ್ಲಾಡದ, ಇಒ ತಾಪಂ

ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಮಂಜೂರಾಗಿರುವ ಜಮೀನು ಒತ್ತುವರಿಯಾಗಿರುವ ಕಡೆ ಸ್ಥಳೀಯ ಆಡಳಿತ, ಕಂದಾಯ, ಪೊಲೀಸ್ ಇಲಾಖೆ ಸಹಾಯದೊಂದಿಗೆ ತೆರವು ಮಾಡಿಸಲಾಗುತ್ತಿದೆ. ಪ್ರತಿ ಗ್ರಾಪಂಗಳಲ್ಲಿ ಘಟಕ ನಿರ್ಮಿಸಿ ಶೇ.100ರಷ್ಟು ಪ್ರಗತಿ ಸಾಧಿಸಲಾಗುವುದು.

- ಪಿ.ಲಕ್ಷ್ಮೀನಾರಾಯಣ, ನರೇಗಾ ಸಹಾಯಕ ನಿರ್ದೇಶಕರು