ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು
ಡಿ. ದೇವರಾಜ ಅರಸು ಮತ್ತು ನಾರಾಯಣ ಗುರು ಇಬ್ಬರೂ ಮಹನೀಯರು ಸಹ ಸಮಾಜದಲ್ಲಿ ಸುಧಾರಣೆ ತರಲು ದಿಟ್ಟ ಹೋರಾಟ ನಡೆಸಿದವರು, ಇವರ ತತ್ವ ಆದರ್ಶಗಳು ಯುವಕರಿಗೆ ಪ್ರೇರಣೆಯಾಗಿವೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ಡಿ. ದೇವರಾಜ ಅರಸು ಮತ್ತು ನಾರಾಯಣ ಗುರು ಜಯಂತ್ಯುತ್ಸವದ ಉದ್ಘಾಟಿಸಿ ಅವರು ಮಾತನಾಡಿದರು.
ಡಿ. ದೇವರಾಜ ಅರಸು ಅವರು ತಮ್ಮ ದಿಟ್ಟ ಆಡಳಿದಿಂದ ರಾಜ್ಯದಲ್ಲಿ ಭೂ ಸುಧಾರಣೆ ಕಾಯ್ದೆ, ಉಳುವವನೇ ಭೂಮಿ ಒಡೆಯ, ಕಾಯ್ದೆಗಳನ್ನು ಜಾರಿಗೆ ತಂದಿದ್ದಲ್ಲದೆ, ರಾಜ್ಯದಲ್ಲಿ ಬಡತನ ನಿವಾರಣೆಗಾಗಿ ಇಂದಿರಾ ಗಾಂಧಿ ಅವರ 20 ಅಂಶಗಳ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಸಮಾಜದಲ್ಲಿ ಸುಧಾರಣೆ ತರಲು ಕಾರಣರಾದವರು. ಅವರ ಶಾಸನಗಳು, ಕಾರ್ಯಕ್ರಮಗಳು ಎಲ್ಲ ಯುವಕರಿಗೆ ಪ್ರೇರಣೆ ಎಂದರು.ನಾರಾಯಣ ಗುರುಗಳು ಸಮಾಜದಲ್ಲಿದ್ದ ಕೆಟ್ಟ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ತಮ್ಮ ಜೀಯವನ ಪರ್ಯಂತ ಹೋರಾಟ ನಡೆಸಿದವರು, ಅಲ್ಲದೆ ಮೇಲ್ವರ್ಗದ ಜನರ ಜೊತೆಗೆ ಸಂಘರ್ಷಕ್ಕೆ ಇಳಿಯದೆ ತಮ್ಮ ಸಮಾಜದವರಿಗೆ ವಿದ್ಯೆಗೆ ಹೆಚ್ಚು ಆದ್ಯತೆ ನೀಡುವಂತೆ ಅರಿವು ಮೂಡಿಸಿದವರು. ಇಬ್ಬರೂ ಮಹನೀಯರ ತತ್ವ ಆದರ್ಶಗಳು ಇಂದಿನ ಯುವಕ, ಯುವತಿಯರಿಗೆ ಪ್ರೇರಣದಾಯಕವಾಗಿದ್ದು, ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಅವರು ಹೇಳಿದರು.
ಪೃಥ್ವಿರಾಜ್ ಮಾತನಾಡಿ, ಡಿ. ದೇವರಾಜ ಅರಸು ಅವರು ಉಳುವವನೇ ಭೂಮಿ ಒಡೆಯ ಕಾನೂನು ಜಾರಿಗೆ ತರುವ ಮೂಲಕ ಮೌನ ಕ್ರಾಂತಿಯನ್ನು ನಡೆಸಿದವರು ಎಂದು ಅವರು ತಿಳಿಸಿದರು.ವಿದ್ಯಾಸಾಗರ್ ಕದಂಬ ಮಾತನಾಡಿ, ಮೇಲ್ವರ್ಗದ ಜನರು ಹಿಂದುಳಿದವರು, ಶೋಷಿತರಿಗೆ ದೇವಾಲಯ ಪ್ರವೇಶ ನಿರಾಕರಿಸುತ್ತಿದ್ದರು. ನಾರಾಯಣ ಗುರುಗಳು ಶೋಷಿತರಿಗಾಗಿಯೇ 300ಕ್ಕೂ ಹೆಚ್ಚು ದೇವಾಲಯ ನಿರ್ಮಿಸಿದವರು ಎಂದರು.
ಧಿಕ್ಕಾರದ ಘೋಷಣೆಮುಖ್ಯಭಾಷಣಕಾರರನ್ನು ಹಿಂಬದಿ ಆಸನದಲ್ಲಿ ಕುಳ್ಳಿರಿಸಿದ್ದರಿಂದಾಗಿ ದಸಂಸ ಒಕ್ಕೂಟದ ಸದಸ್ಯರು ತಾಲೂಕು ಆಡಳಿತ ಮತ್ತು ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿದ ಪ್ರಸಂಗವೂ ಜರುಗಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಸಿ.ಎಂ. ಶಂಕರ್, ಮುಖಂಡರಾದ ಎನ್.ಟಿ. ಗಿರೀಶ್, ಶೇಖರ್, ಪ್ರಕಾಶ್ ರಾಜೇ ಅರಸ್, ತಾಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್, ನಗರಸಭಾ ಸದಸ್ಯೆ ಗಾಯತ್ರಿ, ಸಿದ್ದಿಖ್, ಮಾಜಿ ನಗರಸಭೆ ಉಪಾಧ್ಯಕ್ಷ ದೊರೆಸ್ವಾಮಿ, ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ತಾಪಂ ಇಓ ಜೆರಾಲ್ಡ್ ರಾಜೇಶ್, ಡಿವೈಎಸ್ಪಿ ರಘು, ನಗರಸಭಾ ಆಯುಕ್ತ ನಂಜುಂಡಸ್ವಾಮಿ, ಹಿಂದುಳಿದ ವರ್ಗದ ಕಲ್ಯಾಣಾಧಿಕಾರಿ ಸ್ವರ್ಣಲತಾ ಇದ್ದರು.