ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಪರಿಸರ ಎಂಬುದು ಜೀವಸಂಕುಲಕ್ಕೆ ದೊರೆತ ಬಹುದೊಡ್ಡ ವರದಾನವಾಗಿದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಎಂಬ ಹೆಸರಿನಲ್ಲಿ ಪರಿಸರವನ್ನು ನಾಶಪಡಿಸುತ್ತಿದ್ದೇವೆ ಎಂದು ಉಮಾಪ್ರಗತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕೆಂಪರಾಜ್ ಕೊಡಿಯಾಲ ತಿಳಿಸಿದರು.ನಗರದ ಕ್ಯಾತ್ಸಂದ್ರದ ಉಮಾಪ್ರಗತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಪಂಚಕ್ಕೆ, ಅಭಿವೃದ್ಧಿ, ತಂತ್ರಜ್ಞಾನ ಅಷ್ಟೇ ಮುಖ್ಯವಲ್ಲ, ಪರಿಸರವೇ ಬಹಳ ಮುಖ್ಯವಾಗಿದೆ. ಜನರು ಮುಂದಾದರು ಎಚ್ಚೆತ್ತುಕೊಂಡು ಪರಿಸರ ರಕ್ಷಿಸುವ ಕಾರ್ಯದಲ್ಲಿ ತೊಡಗಬೇಕು. ಪ್ರಕೃತಿ ಇಲ್ಲದೆ ಮನುಷ್ಯ, ಸಮಾಜ ಇರಲು ಸಾಧ್ಯವಿಲ್ಲ. ಪರಿಸರವನ್ನು ಸ್ವಚ್ಛವಾಗಿರಿಸುವುದು, ಸ್ವಚ್ಛತೆ ಕಾಪಾಡುವುದು, ಮರಗಿಡಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಶೇಖರ್ ಸಿ. ಮಾತನಾಡಿ, ತಾಪಮಾನ ಏರಿಕೆಯಿಂದ ಆಗುವ ತೊಂದರೆ ನಿವಾರಿಸಲು ಪರಿಸರ ಸಮತೋಲನ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಪ್ಲಾಸ್ಟಿಕ್‌ನಿಂದ ಉಂಟಾಗುವ ಸಮಸ್ಯೆಗಳ ಕುರಿತು ತಿಳಿದುಕೊಳ್ಳಬೇಕು. ಸ್ವಚ್ಛಗಾಳಿ ಸೇವನೆಯಿಂದ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ ಎಂದರು.ಪರಿಸರ ಬೆಳೆಸಿ-ಉಳಿಸಿ, ಮರಗಿಡಗಳ ನಾಶದಿಂದ ಮನುಷ್ಯನ ನಾಶ, ಮರಗಳು ಪರಿಸರಕ್ಕೆ ಬಹಳ ಮುಖ್ಯ ಎಂಬ ವಾಕ್ಯಗಳೊಂದಿಗೆ ಜೀವಸಂಕುಲಕ್ಕೆ ಪರಿಸರ ಎಷ್ಟು ಮುಖ್ಯ ಎಂಬುದನ್ನು ಕಾಲೇಜಿನ ವಿದ್ಯಾರ್ಥಿಗಳಾದ ಚಂದ್ರಶೇಖರ್ ಕೆ.ವೈ. ಮತ್ತು ಬಸವರಾಜ್ ತಿಳಿಸಿಕೊಟ್ಟರು. ದೈಹಿಕ ನಿರ್ದೇಶಕ ಪಾಂಡಿಯನ್, ಕಾಲೇಜಿನ ಗ್ರಂಥಪಾಲಕಿ ತನುಜಾ ಇದ್ದರು.