ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ ಗಡಿ ಭಾಗದ 52 ತಾಲೂಕುಗಳು ಹಾಗೂ ಗಡಿಗೆ ಹೊಂದಿಕೊಂಡಂತೆ ಹೊರ ರಾಜ್ಯಗಳಲ್ಲಿ ಕನ್ನಡ ಮಾತನಾಡುವ ಅನೇಕ ಪ್ರದೇಶಗಳಿವೆ. ಅಲ್ಲಿನ ಕನ್ನಡಿಗರಿಗೆ ಶಿಕ್ಷಣದ ಎಲ್ಲ ಸವಲತ್ತು ದೊರೆಯಲು ರಾಜ್ಯ ಸರ್ಕಾರ ಗಡಿನಾಡು ಶಿಕ್ಷಣ ನಿರ್ದೇಶನಾಲಯದ ರಚಿಸುವ ಅಗತ್ಯತೆ ಇದೆ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.ಬುಧವಾರ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕರ್ನಾಟಕ ಸ್ವಾಭಿಮಾನಿ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅವರಿಗೆ ‘ಚಂಪಾ ಸಿರಿಗನ್ನಡ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಅಲಕ್ಷಿತ ಪ್ರದೇಶದ ಸಾಹಿತಿಗಳಿಗೆ ಚಂದ್ರಶೇಖರ್ ಪಾಟೀಲ್ (ಚಂಪಾ) ಅವರು ಸಂಕ್ರಮಣ ಸಾಹಿತ್ಯ ಪತ್ರಿಕೆ ಮೂಲಕ ವೇದಿಕೆ ಕಲ್ಪಿಸಿದವರು. ಅಶೋಕ್ ಚಂದರಗಿ ಅವರು ಗಡಿನಾಡಿನ ಗರಡಿ ಮನೆಯ ಕನ್ನಡದ ಕುಸ್ತಿ ಪಟು. ಗಡಿನಾಡಿನಲ್ಲಿ ಅನೇಕ ಸಮಸ್ಯೆಗಳಿವೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಗಡಿನಾಡಿನಲ್ಲಿ ಯಾವಾಗಲೂ ಭೌಗೋಳಿಕ ವಿವಾದ ಮತ್ತು ಭಾಷಾ ವಿವಾದ ನಡೆಯುತ್ತಿರುತ್ತದೆ. ಭೌಗೋಳಿಕ ವಿವಾದವನ್ನು ಭಾವನಾತ್ಮಕ ವಿವಾದವನ್ನಾಗಿಸುವ ಅನೇಕ ಶಕ್ತಿಗಳಿವೆ ಎಂದರು.ಕನ್ನಡಿಗರ ಬದುಕು ರೂಪಿಸಿದರೆ, ಕನ್ನಡ ತನಗೆ ತಾನಾಗಿಯೇ ರೂಪುಗೊಳ್ಳುತ್ತದೆ. ಗಡಿನಾಡಿನಲ್ಲಿ ಭಾಷೆಯ ಸಮಸ್ಯೆ ಮಾತ್ರ ಇಲ್ಲ. ಬದುಕಿನ ಸಮಸ್ಯೆಯೂ ಇದೆ. ಬದುಕಿನ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು, ಭಾಷಾ ಚಳವಳಿಗಳು ಬದುಕಿನ ಚಳವಳಿಯಾಗಬೇಕು. ಗಡಿನಾಡಿನ ಜನರು ಪರಕೀಯ ಪ್ರಜ್ಞೆಯಿಂದ ನರಳದೇ ಅವರೂ ಕರ್ನಾಟಕದವರು ಎಂದುಕೊಳ್ಳಲು ಅವರಿಗೆ ಉತ್ತಮ ಶಿಕ್ಷಣ, ಉದ್ಯೋಗ, ನೀಡಿ ಅಭಿವೃದ್ಧಿಗೊಳಿಸಬೇಕು ಎಂದು ಹೇಳಿದರು.
ಮರಾಠಿಗರು ಏನು ಮಾಡಿದರೂ ಬೆಳಗಾವಿಯನ್ನು ಕಿತ್ತುಕೊಳ್ಳಲು ಆಗುವುದಿಲ್ಲ. ಬೆಳಗಾವಿ ನಮ್ಮದೇ. ಬೆಳಗಾವಿ ಸೇರಿ ಗಡಿನಾಡಿನಲ್ಲಿ ಕನ್ನಡಪರ ವಾತಾವರಣ ನಿರ್ಮಾಣವಾಗಬೇಕು. ಕನ್ನಡವನ್ನು ಶಿಕ್ಷಣದ ಮೂಲಕ ನೆಲೆಯೂರಿಸಬೇಕು. ಗಡಿನಾಡಿಗೆ ರಾಜ್ಯ ಸರ್ಕಾರ ವಿಶೇಷ ಗಮನ ನೀಡಬೇಕು ಎಂದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿ, ಬೆಂಗಳೂರಿನ ವಸತಿ ಸಮುಚ್ಚಯ ಹಾಗೂ ಸಂಸ್ಥೆಗಳಲ್ಲಿ ಕನಿಷ್ಠ 20 ಜನ ಕನ್ನಡ ಬಾರದಿದ್ದವರು ಇದ್ದರೆ ಅವರಿಗಾಗಿ ಕನ್ನಡ ಕಲಿಕಾ ಕೇಂದ್ರ ಪ್ರಾರಂಭಿಸಿ ಕನ್ನಡ ಕಲಿಸುವ ಕಾರ್ಯವನ್ನು ಪ್ರಾಧಿಕಾರ ಮಾಡಲಿದೆ. ಈಗಾಗಲೇ ಬೆಂಗಳೂರಿನಲ್ಲಿ 20 ಕಲಿಕಾ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
ಕನ್ನಡ ಜನಶಕ್ತಿ ಕಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ, ಕಾರ್ಮಿಕ ಇಲಾಖೆ ಉಪ ಆಯುಕ್ತೆ ಮೀನಾ ಪಾಟೀಲ (ಚಂಪಾ ಪುತ್ರಿ), ಕರ್ನಾಟಕ ಸ್ವಾಭಿಮಾನಿ ವೇದಿಕೆ ಅಧ್ಯಕ್ಷ ಶಂಕರ್ ಹೂಗಾರ ಉಪಸ್ಥಿತರಿದ್ದರು.