ಸಾರಾಂಶ
ಮಾರಣಾಂತಿಕ ಥಲಸ್ಸೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದ ಏಳು ವರ್ಷದ ಬಾಲಕನಿಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಯಶಸ್ವಿಯಾಗಿ ಅಸ್ತಿಮಜ್ಜೆ ಕಸಿ ನಡೆಸಿದ್ದು, ಇದೇ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಈ ಸಾಧನೆ ಮಾಡಿದಂತಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಪರೂಪದ ಹಾಗೂ ಮಾರಣಾಂತಿಕ ಥಲಸ್ಸೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದ ಏಳು ವರ್ಷದ ಬಾಲಕನಿಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಯಶಸ್ವಿಯಾಗಿ ಅಸ್ತಿಮಜ್ಜೆ ಕಸಿ ನಡೆಸಿದ್ದು, ಇದೇ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಈ ಸಾಧನೆ ಮಾಡಿದಂತಾಗಿದೆ.ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಅಸ್ತಿಮಜ್ಜೆ ಕಸಿ ಘಟಕ (ಬೋನ್‌ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಘಟಕ - ಬಿಎಂಟಿ)ಯಲ್ಲಿ ಥಲಸ್ಸೇಮಿಯಾಗಿ ಯಶಸ್ಸಿ ಅಸ್ತಿಮಜ್ಜೆ ಕಸಿ ನಡೆಸುವ ಮೂಲಕ ಬಾಲಕನಿಗೆ ಮರುಜೀವ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಆಸ್ಪತ್ರೆ ಭೇಟಿ ನೀಡಿ ಬಾಲಕನ ಆರೋಗ್ಯ ವಿಚಾರಿಸಿದರು. ಜತೆಗೆ ಕಸಿ ಮಾಡಿದ ಹೆಮಟಾಲಜಿಸ್ಟ್ ಹಾಗೂ ಬಿಎಂಟಿ ವೈದ್ಯರಾದ ಡಾ. ವಸುಂಧರಾ ಕೈಲಾಸನಾಥ್ ಹಾಗೂ ಆಸ್ಪತ್ರೆ ಆಡಳಿತ ಮಂಡಳಿಗೆ ಅಭಿನಂದಿಸಿದರು.ಕಿದ್ವಾಯಿ ಆಸ್ಪತ್ರೆ ಆಡಳಿತಾಧಿಕಾರಿ ಡಾ। ನವೀನ್ ಭಟ್ ಮಾತನಾಡಿ, ಇದೇ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಥಲಸ್ಸೇಮಿಯಾ ಅಸ್ತಿಮಜ್ಜೆ ಕಸಿ ಮಾಡಿದ್ದು, ಇನ್ನೂ 25 ರೋಗಿಗಳು ನೋಂದಣಿಯಾಗಿದ್ದಾರೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 10,000 ರಿಂದ 15,000 ಮಕ್ಕಳು ಥಲಸ್ಸೆಮಿಯಾ ರೋಗವುಳ್ಳ ಮಕ್ಕಳಾಗಿ ಜನಿಸುತ್ತಿದ್ದಾರೆ. ಇಂತಹ ಅಪರೂಪದ ಕಾಯಿಲೆಗೆ ಯಶಸ್ವಿಯಾಗಿ ಅಸ್ತಿಮಜ್ಜೆ ಕಸಿ ಮಾಡಲು ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ ಎಂದರು.