ಸಾರಾಂಶ
ಬಹಿರ್ದೆಸೆಗೆ ತೆರಳಿದ್ದ ಬಾಲಕನೊರ್ವ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಪೋಲೇನಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ಮಧುಗಿರಿ: ಬಹಿರ್ದೆಸೆಗೆ ತೆರಳಿದ್ದ ಬಾಲಕನೊರ್ವ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಪೋಲೇನಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಪೋಲೇನಹಳ್ಳಿ ಗ್ರಾಮದ ನಿವಾಸಿ ನರಸಿಂಹಮೂರ್ತಿ ಪುತ್ರ ರವಿಕುಮಾರ್ (15) ಮೃತ ದುರ್ದೈವಿ. ಈತ ಇದೇ ಗ್ರಾಮದ ವಿವೇಕಾನಂದ ಗ್ರಾಮಾಂತರ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ರವಿಕುಮಾರ್ ಶಾಲೆ ಬಿಟ್ಟ ನಂತರ ಸೋಮವಾರ ಸಂಜೆ 6ಗಂಟೆಗೆ ಬಹಿರ್ದೆಸೆಗಾಗಿ ಗ್ರಾಮದ ಬಳಿಯಿದ್ದ ಕೆರೆಯ ಕಡೆ ಹೋಗಿದ್ದಾನೆ. ಅಲ್ಲಿ ನೀರು ಮುಟ್ಟಲು ಹೋಗಿ ಆಕಸ್ಮಿಕ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ. ಮಗ ಬರದಿದ್ದಾಗ ಹುಡುಕಾಡಿದ ಪೋಷಕರು ನಿಮ್ಮ ಮಗ ಕೆರೆ ಕಡೆ ಹೋದನೆಂದು ಪರಿಚಯಸ್ಥರು ತಿಳಿಸಿದ್ದಾರೆ. ತಕ್ಷಣ ಕೆರೆ ಸಮೀಪ ಹೋಗಿ ನೋಡಿದಾಗ ನೀರಿನಲ್ಲಿ ಮಗನ ದೇಹ ತೇಲುತ್ತಿರುವುದು ಕಂಡು ಬಂದಿದೆ. ಇದರಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕೋಡಿಗನೆಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.