12 ನೇ ಶತಮಾನದ ಶರಣರ ರಚಸಿರುವ ವಚನ ಸಾಹಿತ್ಯವನ್ನು ಸರಿಯಾಗಿ ಅಭ್ಯಾಸ ಮಾಡುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ ಹುಣಶ್ಯಾಳ ಪಿಬಿ ಆದರ್ಶ ವಿದ್ಯಾಲಯದ ಶಿಕ್ಷಕ ಶ್ರೀಕಾಂತ ಗುರೂಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

12 ನೇ ಶತಮಾನದ ಶರಣರ ರಚಸಿರುವ ವಚನ ಸಾಹಿತ್ಯವನ್ನು ಸರಿಯಾಗಿ ಅಭ್ಯಾಸ ಮಾಡುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ ಹುಣಶ್ಯಾಳ ಪಿಬಿ ಆದರ್ಶ ವಿದ್ಯಾಲಯದ ಶಿಕ್ಷಕ ಶ್ರೀಕಾಂತ ಗುರೂಜಿ ಹೇಳಿದರು.

ಪಟ್ಟಣದ ಜ್ಞಾನಭಾರತಿ ವಿದ್ಯಾ ಸಂಸ್ಥೆಯ ಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆ ಲಿಂ.ಭೀಮಪ್ಪ ಮುಳವಾಡ, ಲಿಂ. ಶಾಂತಾಬಾಯಿ ಕೊಟ್ಲಿ, ಲಿಂ.ಮಲ್ಲಪ್ಪ ಕೊಟ್ಲಿ ಸ್ಮರಣಾರ್ಥ ಶುಕ್ರವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮನುಷ್ಯನಲ್ಲಿ ಸ್ಪಷ್ಟ ಉದ್ದೇಶ ಇದ್ದರೆ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ. ಬಸವಣ್ಣನವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಹಾಗೂ ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ಕ್ರಾಂತಿ ಗಂಗೋತ್ರಿ ಅಕ್ಕ ನಾಗಮ್ಮನವರು ವಹಿಸಿದ್ದರು ಎಂದರು.

ಡಾ. ಸೌಭಾಗ್ಯ ಗುಬ್ಬಾ ಅವರು ವಚನ ಸಾಹಿತ್ಯಕ್ಕೆ ಅಕ್ಕನಾಗಮ್ಮನವರ ಕೊಡುಗೆ ಕುರಿತು ಮಾತನಾಡಿ, ಬಸವಣ್ಣನವರ ತಾಯಿಯ ಸ್ಥಾನದಲ್ಲಿ ನಿಂತು ಬಸವಣ್ಣವರ ಪ್ರತಿಯೊಂದು ಆಗುಹೋಗುಗಳಿಗೆ ಬೆನ್ನೆಲುಬಾಗಿ ನಿಂತಿದ್ದರು. ಬಸವಣ್ಣನ ವ್ಯಕ್ತಿತ್ವವನ್ನು ರೂಪಿಸುವದರ ಜೊತೆಗೆ ಚನ್ನಬಸವಣ್ಣನಂತಹ ವ್ಯಕ್ತಿಯನ್ನು ನೀಡಿದ ಕೀರ್ತಿ ಅಕ್ಕನಾಗಮ್ಮನಿಗೆ ಸಲ್ಲುತ್ತದೆ. ವಚನ ಸಾಹಿತ್ಯವನ್ನು ಹೋರಾಟ ಮಾಡಿ ಉಳಿಸಿದ ಕೀರ್ತಿ ಅಕ್ಕನಾಗಮ್ಮಗೆ ಸಲ್ಲುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮರ್ತುರ ಮಾತನಾಡಿ, ಶರಣರ ವಿಚಾರಗಳನ್ನು ಮನೆ ಮನಗಳಿಗೆ ಮುಟ್ಟಿಸುವ ಕೆಲಸವನ್ನು ಶರಣ ಸಾಹಿತ್ಯ ಪರಿಷತ್ತು ಸದಾ ಮಾಡುತ್ತಾ ಬಂದಿದೆ ಎಂದು ಹೇಳಿದರು.

ಕದಳಿ ವೇದಿಕೆ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನಲ್ಲಿ ಶರಣ ಸಾಹಿತ್ಯ ಪರಿಷತ್ತು ವಿನೂತನ ಕಾರ್ಯಕ್ರಮಗಳನ್ನು ಮಾಡುವ ಮೂಲಕ ರಾಜ್ಯದಲ್ಲಿಯೇ ಹೆಸರು ವಾಸಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷೆ ನೀಲಮ್ಮ ಹೂಗಾರ ಉದ್ಘಾಟಿಸಿದರು. ವೇದಿಕೆಯಲ್ಲಿ ಪದ್ಮಾವತಿ ಮಹಿಳಾ ಮಂಡಳದ ಅಧ್ಯಕ್ಷೆ ಸುರೇಖಾ ಉಪಾಧ್ಯಾಯ, ಬಸವರಾಜ ಕೊಟ್ಲಿ, ಗೀತಾ ಮುಳವಾಡ ಇದ್ದರು. ಸಂಸ್ಥೆಯ ಕಾರ್ಯದರ್ಶಿ ನೀಲಕಂಠ ಹೂಗಾರ ಸ್ವಾಗತಿಸಿದರು. ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಆರ್‌.ಜಿ. ಅಳ್ಳಗಿ ನಿರೂಪಿಸಿ, ವಂದಿಸಿದರು.