ಸಾರಾಂಶ
ಮರಿಯಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿಯಲ್ಲಿ ಸುಮಾರು ₹50 ಲಕ್ಷ ವೆಚ್ಚದಲ್ಲಿ ಮಹಿರ್ಷಿ ವಾಲ್ಮೀಕಿ ಕಂಚಿನ ಪುತ್ಥಳಿಯನ್ನು 2025ರಲ್ಲಿ ನಿರ್ಮಿಸಲಾಗುತ್ತದೆ ಎಂದು ಶಾಸಕ ಕೆ. ನೇಮಿರಾಜ್ ನಾಯ್ಕ ಹೇಳಿದರು.
ಇಲ್ಲಿಗೆ ಸಮೀಪದ ದೇವಲಾಪುರದಲ್ಲಿ ಮಂಗಳವಾರ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮರಿಯಮ್ಮನಹಳ್ಳಿ ಹೋಬಳಿ ಮತ್ತು ದೇವಲಾಪುರ ಘಟಕ ಸಂಯುಕ್ತಾಶ್ರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಹಾಗೂ ವಾಲ್ಮೀಕಿ ನಾಯಕ ಮಹಾಸಭಾದ ನೂತನ ಘಟಕ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಹರ್ಷಿ ವಾಲ್ಮೀಕಿ ಕಂಚಿನ ಪುತ್ಥಳಿಯ ಜೊತೆಗೆ ಮುಂದಿನ ವರ್ಷ ಕಿತ್ತೂರು ರಾಣಿ ಚೆನ್ನಮ್ಮ, ಕನಕದಾಸರ ಕಂಚಿನ ಪುತ್ಥಳಿಯನ್ನು ಹಗರಿಬೊಮ್ಮನಹಳ್ಳಿಯಲ್ಲಿ ನಿರ್ಮಿಸಲಾಗುವುದು ಎಂದು ಹೇಳಿದರು.ಕೇವಲ ಚುನಾವಣೆಯ ಸಂದರ್ಭದಲ್ಲಿ ರಾಜಕಾರಣ ಮಾಡೋಣ. ಚುನಾವಣೆಯ ನಂತರ ಗ್ರಾಮಗಳ ಮತ್ತು ಸಮಾಜದ ಅಭಿವೃದ್ಧಿಗಾಗಿ ಎಲ್ಲರೂ ಒಂದಾಗಿ ಶ್ರಮಿಸೋಣ ಎಂದು ಹೇಳಿದರು.ವಾಲ್ಮೀಕಿ ಗುರು ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಗಳು ಪಾದಯಾತ್ರೆ ನಡೆಸಿ ಸರ್ಕಾರದ ಕಣ್ಣು ತೆರೆಯಿಸಿ ಸಮಾಜಕ್ಕೆ ಮೀಸಲಾತಿ ದೊರಕಿಸಿಕೊಟ್ಟಿದ್ದಾರೆ. ಇಂಥ ಸ್ವಾಮೀಜಿಗಳನ್ನು ಪಡೆದ ನಾವೆಲ್ಲರೂ ಧನ್ಯರು ಎಂದು ಹೇಳಿದರು.
ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು ಮಾತನಾಡಿ, ಆಯಾ ಸಮಾಜಗಳು ಜಾಗೃತರಾಗಬೇಕು ಎನ್ನುವ ದೃಷ್ಟಿಯಿಂದ ಜಯಂತಿಗಳನ್ನು ಮತ್ತು ಜಾತ್ರೆಗಳನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.ವಾಲ್ಮೀಕಿ ಸಮಾಜಕ್ಕೆ ದೊಡ್ಡ ಇತಿಹಾಸ ಇದೆ. ವಾಲ್ಮೀಕಿ ಮಹರ್ಷಿಯವರು ಮಹಾತಪಸ್ವಿಗಳು, ಲೋಕ ಕಲ್ಯಾಣಾರ್ಥವಾಗಿ ರಾಮಾಯಣ ಮಹಾಕಾವ್ಯ ರಚನೆ ಮಾಡಿದ ಅವರು ಈ ದೇಶದ ಪ್ರಥಮ ದಾರ್ಶನಿಕರಾಗಿದ್ದಾರೆ. ತ್ಯಾಗವೇ ನಿಜವಾದ ಧರ್ಮ ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟ ರಾಮಾಯಣ ಮಹಾಕಾವ್ಯ ಜಗತ್ತಿಗೆ ಶ್ರೇಷ್ಠ ಗ್ರಂಥವಾಗಿದೆ. ಇಂತಹ ಗ್ರಂಥವನ್ನು ಬರೆದವರು ವಾಲ್ಮೀಕಿ ಎಂಬುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಜಿ.ನಾಗಲಾಪುರದಮಠದ ನಿರಂಜನಪ್ರಭು ಮಹಾಸ್ವಾಮಿಗಳು ಮಾತನಾಡಿ, ರಾಮಾಯಣ ಮಹಾಕಾವ್ಯದ ಮೂಲಕ ಭಾರತದ ಚರಿತ್ರೆಯನ್ನು ಜಗತ್ತಿಗೆ ಕಟ್ಟಿಕೊಟ್ಟ ಕೀರ್ತಿ ವಾಲ್ಮೀಕಿ ಮಹರ್ಷಿಗಳಿಗೆ ಸಲ್ಲುತ್ತದೆ ಎಂದು ಹೇಳಿದರು.ವಾಲ್ಮೀಕಿ ಗುರುಪೀಠದ ಬಳ್ಳಾರಿ ಜಿಲ್ಲಾ ಧರ್ಮದರ್ಶಿ ಬಿ.ಎಸ್. ಜಂಬಯ್ಯ ನಾಯಕ ಮಾತನಾಡಿದರು. ಹೊಸಪೇಟೆ ತಾಲೂಕು ನಾಯಕ ಸಮಾಜದ ಅಧ್ಯಕ್ಷ ಗುಜ್ಜಲ್ ಶ್ರೀನಾಥ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಹೋಬಳಿ ಘಟಕದ ಅಧ್ಯಕ್ಷ ಮರಡಿ ಹನುಮಂತ, ಮರಿಯಮ್ಮನಹಳ್ಳಿ ಘಟಕದ ಅಧ್ಯಕ್ಷ ರೋಗಾಣ್ಣನವರ ಮಂಜುನಾಥ, ದೇವಲಾಪುರ ಘಟಕ ಅಧ್ಯಕ್ಷ ಅಳ್ಳಳ್ಳಿ ಶಿವರಾಜ, ಸ್ಥಳೀಯ ಮುಖಂಡರಾದ ಎನ್. ಸತ್ಯನಾರಾಯಣ, ಗೋವಿಂದರ ಪರಶುರಾಮ, ಗರಗ ಪ್ರಕಾಶ್ ಪೂಜಾರ್, ಕುರಿ ಶಿವಮೂರ್ತಿ, ಗುಂಡಾ ಸೋಮಣ್ಣ, ಪಿ. ಓಬಪ್ಪ, ವ್ಯಾಸನಕೆರೆ ಶ್ರೀನಿವಾಸ, ಸಿ.ಎ. ಗಾಳೆಪ್ಪ, ಡಾ. ಕೆ. ನಾಗರತ್ನಮ್ಮ, ಕೆ. ಹನುಮಂತಪ್ಪ, ತಳವಾರ ಹನುಮಂತಪ್ಪ ಬಿ. ಮಂಜುನಾಥ, ಈಡಿಗರ ನಾಗರಾಜ, ಬಿ.ಎಸ್. ರಾಜಪ್ಪ, ಎಚ್. ಪರಶುರಾಮ, ತಳವಾರ್ ಹುಲುಗಪ್ಪ, ಕಲ್ಲಾಳ್ ಪರಶುರಾಮಪ್ಪ, ಪ್ರಕಾಶ್, ಎಸ್. ನವೀನ್, ರಾಮಪ್ಪ, ಗುಂಡಾಕೃಷ್ಣ, ಭೀಮಪ್ಪ, ಮುರಾರಿ, ಎಚ್. ನಾಗಪ್ಪ, ಮಂಜುನಾಥ, ಜಾತಪ್ಪ, ಕೆ. ಚಿನ್ನಾಪ್ರಪ್ಪ, ಹನುಮಂತಪ್ಪ, ಯಮನೂರಪ್ಪ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಬೆಳ್ಳಿರಥದ ಮೂಲಕ ಪಟ್ಟಣದಿಂದ ದೇವಲಾಪುರ ದವರೆಗೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಮಹಾಸ್ವಾಮಿಗಳು, ನಿರಂಜನಪ್ರಭು ಮಹಾಸ್ವಾಮಿಗಳ ಮೆರವಣಿಗೆ ನಡೆಯಿತು.
ಮರಿಯಮ್ಮನಹಳ್ಳಿ ಸಮೀಪದ ದೇವಲಾಪುರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವವನ್ನು ಶಾಸಕ ಕೆ. ನೇಮಿರಾಜ್ ನಾಯ್ಕ ಉದ್ಘಾಟಿಸಿದರು.