ಸಾರಾಂಶ
ಕಾರವಾರ:
ಪ್ರತಿ ಬಾರಿ ಬಜೆಟ್ ಮಂಡನೆಗೆ ಮುನ್ನ ಜನತೆಯಲ್ಲಿ ಅದೇನೋ ನಿರೀಕ್ಷೆ, ಕುತೂಹಲ ಉಂಟಾಗುವುದು ಸಹಜ. ಈಗ ಫೆ. 16ರಂದು ರಾಜ್ಯದ ಬಜೆಟ್ ಹಿನ್ನೆಲೆಯಲ್ಲಿ ಹಿಂದೆಂದಿಗಿಂತ ಹೆಚ್ಚಿನ ನಿರೀಕ್ಷೆ ಗರಿಗೆದರಿದೆ.ಪ್ರತಿ ಬಜೆಟ್ ಬಂದಾಗಲೂ ಜಿಲ್ಲೆಯ ಜನತೆಯಲ್ಲಿ ಸಂಭ್ರಮ. ಇದುವರೆಗೆ ಆಗದೆ ಇರುವುದು ಕೈಗೂಡೀತು ಎಂಬ ನಿರೀಕ್ಷೆ. ಬಹುಕಾಲದ ಬೇಡಿಕೆಗೆ ಸರ್ಕಾರ ಮನ್ನಣೆ ನೀಡಲಿದೆ ಎಂಬ ಭರವಸೆ ಮೂಡುವುದು ಮಾಮೂಲು. ಆದರೆ ಈಚಿನ ವರ್ಷಗಳಲ್ಲಿ ಬಜೆಟ್ ಜಿಲ್ಲೆಯ ಜನತೆಯ ಪಾಲಿಗೆ ನಿರಾಸೆಯನ್ನೇ ಹೊತ್ತು ತರುತ್ತಿದೆ. ಬಜೆಟ್ ಮಂಡನೆಯಾಗುತ್ತಿದ್ದಂತೆ ಸಮಾಧಾನಕ್ಕಿಂತ ನಿರಾಸೆ, ಅಸಮಾಧಾನ, ಆಕ್ರೋಶವೇ ವ್ಯಕ್ತವಾಗುತ್ತಿದೆ. ಏಕೆಂದರೆ ಬಜೆಟ್ ಬಗ್ಗೆ ಕಟ್ಟಿಕೊಂಡ ನಿರೀಕ್ಷೆ, ಬಹುಕಾಲದ ಬೇಡಿಕೆ ಈಡೇರಿಕೆಯ ಆಸೆ ಎಲ್ಲವೂ ಈಡೇರದೆ ಇದ್ದಾಗ ಜನತೆ ಹಿಡಿಶಾಪ ಹಾಕುವುದು ಸಹಜ. ಮೇಲಾಗಿ ಬಜೆಟ್‌ನಲ್ಲಿ ಘೋಷಣೆಯಾದ ಯಾವ ಯೋಜನೆಗಳು, ಕಾರ್ಯಕ್ರಮಗಳು ಈಡೇರದೆ ಇರುವುದೂ ಜನತೆಯ ಬೇಸರಕ್ಕೆ ಮತ್ತೊಂದು ಪ್ರಮುಖ ಕಾರಣ. ಐದು ವರ್ಷಗಳ ಹಿಂದೆ ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳೂ ಈ ವರೆಗೂ ಜಾರಿಯಾಗಿಲ್ಲ. ಹೀಗಾದರೆ ಬಜೆಟ್ ಬಗ್ಗೆ ಭರವಸೆ ಮೂಡುವುದಾದರೂ ಹೇಗೆ ಎಂಬ ಪ್ರಶ್ನೆಯನ್ನು ಕೆಲ ಪ್ರಜ್ಞಾವಂತರು ಮುಂದಿಡುತ್ತಿದ್ದಾರೆ.ಕಳೆದ ಬಾರಿ ಚುನಾವಣೆ ಎದುರಿಗಿರುವಾಗ ಬಿಜೆಪಿ ಸರ್ಕಾರ ಬಜೆಟ್ ಮಂಡನೆ ಮಾಡಿತ್ತು. ಆ ಬಜೆಟ್‌ನಲ್ಲಿ ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆಯಾಗಿತ್ತು. ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ನೀಡಲು ಯೋಜನೆ ರೂಪಿಸಲಾಗಿತ್ತು. ಅಂಕೋಲಾದ ಕೇಣಿಯಲ್ಲಿ ಗ್ರೀನ್ ಫೀಲ್ಡ್ ಬಂದರು, ಮಾಜಾಳಿಯಲ್ಲಿ ಮೀನುಗಾರಿಕಾ ಬಂದರು, ಶಿರಸಿಯಲ್ಲಿ ಪರಿಸರ ವಿಶ್ವವಿದ್ಯಾಲಯ ಸೇರಿದಂತೆ ಕೆಲ ಯೋಜನೆಗಳನ್ನು ಘೋಷಿಸಲಾಗಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಹಣಕಾಸು ಸಚಿವರೂ ಆದ ಮಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಬಜೆಟ್ ಮಂಡಿಸಿದರು. ಆದರೆ ಆ ಬಜೆಟ್‌ನಲ್ಲಿ ಬಿಜೆಪಿ ಸರ್ಕಾರ ಕೊಟ್ಟಿದ್ದನ್ನೂ ಸಿದ್ದರಾಮಯ್ಯ ಕಸಿದುಕೊಂಡರು ಎಂದು ಆಕ್ರೋಶ ವ್ಯಕ್ತವಾಗಿತ್ತು. ಏಕೆಂದರೆ ಬಜೆಟ್‌ನಲ್ಲಿ ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಸ್ತಾಪವೇ ಇರಲಿಲ್ಲ. ಶಿರಸಿಯ ಪರಿಸರ ವಿಶ್ವವಿದ್ಯಾಲಯದ ಘೋಷಣೆಯೂ ಮಾಯವಾಗಿತ್ತು. ಕೇಣಿಯಲ್ಲಿ ಗ್ರೀನ್ ಫೀಲ್ಡ್ ಬಂದರು, ಮಾಜಾಳಿ ಮೀನುಗಾರಿಕೆ ಬಂದರು ಯೋಜನೆ ಹಾಗೆ ಮುಂದುವರಿಯಿತು. ಜತೆಗೆ ಹೊನ್ನಾವರ ತಾಲೂಕಿನ ಮಂಕಿಯಲ್ಲಿ ಮೀನುಗಾರಿಕಾ ಬಂದರು ಘೋಷಿಸಲಾಯಿತು. ಹೊನ್ನಾವರ ಹಾಗೂ ಜೋಯಿಡಾದಲ್ಲಿ ಅಗ್ನಿಶಾಮಕ ಠಾಣೆ ಘೋಷಿಸಲಾಗಿತ್ತು. ಕರಾವಳಿ ಬೀಚ್ ಟೂರಿಸಂಗೆ ಕಾರ್ಯಪಡೆ ರಚಿಸಲು ತೀರ್ಮಾನಿಸಲಾಗಿತ್ತು. ಇವಿಷ್ಟನ್ನು ಹೊರತುಪಡಿಸಿ ಉತ್ತರ ಕನ್ನಡ ಜಿಲ್ಲೆಗೆ ಪ್ರತ್ಯೇಕವಾಗಿ ಯಾವುದೇ ಗಮನಾರ್ಹವಾದ ಯೋಜನೆಗಳೂ ಬಜೆಟ್‌ನಲ್ಲಿ ಘೋಷಣೆಯಾಗಿರಲಿಲ್ಲ.