ಬ್ಲಾಕ್‌ಮೇಲ್‌ ಮಾಡಿ ರೂಪಿಸದ ಬಜೆಟ್‌

| Published : Mar 15 2025, 01:00 AM IST

ಸಾರಾಂಶ

ಅಲ್ಪಸಂಖ್ಯಾತ ಸಮುದಾಯದವರನ್ನು ಓಲೈಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಎಂಎಲ್ಸಿ ನಸೀರ್ ಅಹ್ಮದ್, ಸಚಿವ ಜಮೀರ್ ಅಹ್ಮದ್, ಐವಾನ್ ಡಿಸೋಜ ಇವರುಗಳು ಸೇರಿಕೊಂಡು ದಿಕ್ಕುತಪ್ಪಿಸಿ ಬಜೆಟ್‌ನಲ್ಲಿ ತಾರತಮ್ಯ ಆಗುವಂತೆ ಮಾಡಿದ್ದಾರೆ, ಸಿದ್ದರಾಮಯ್ಯರನ್ನು ಬ್ಲಾಕ್‌ಮೇಲ್ ಮಾಡಿ ಬಜೆಟ್‌ನಲ್ಲಿ ಸೇರ್ಪಡೆ ಮಾಡಿ ಮಂಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ಅಲ್ಪಸಂಖ್ಯಾತರ ತುಷ್ಟೀಕರಣ ಬಜೆಟ್ ಆಗಿದೆ, ಚುನಾವಣೆಯ ಮತ ಬ್ಯಾಂಕ್ ಗಟ್ಟಿಗೊಳಿಸುವ ಪ್ರಯತ್ನದ ಬಜೆಟ್ ಆಗಿರುವುದನ್ನು ಸ್ಪಷ್ಟಪಡಿಸಿದೆ, ಅಲ್ಪಸಂಖ್ಯಾತರನ್ನು ಓಲೈಸಲು ಬಹುಸಂಖ್ಯಾತರ ಸೌಲಭ್ಯಗಳನ್ನು ಅಭಿವೃದ್ಧಿಗಳನ್ನು ಕಡೆಗಣಿಸಿದೆ ಎಂದು ಬಿಜೆಪಿ ಮಾಜಿ ಸಂಸದ ಎಸ್. ಮುನಿಸ್ವಾಮಿ ಆರೋಪಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿನ ಬಹುಸಂಖ್ಯಾತ ತೆರಿಗೆ ಹಣವನ್ನು ಅಲ್ಪಸಂಖ್ಯಾತರಿಗೆ ನೀಡುವ ಮೂಲಕ ಅನ್ಯಾಯ ಮಾಡಿದೆ, ದೇಶದಲ್ಲಿ ಅಲ್ಪಸಂಖ್ಯಾತರಿಗೂ ಎಲ್ಲ ಸೌಲಭ್ಯವನ್ನು ಕಲ್ಪಿಸಿ ಸಾಮಾಜಿಕ ನ್ಯಾಯ ದೊರಕಿಸಲಾಗಿದೆ ಎಂದರು.

ಮುಖ್ಯಮಂತ್ರಿಗೆ ಬ್ಲಾಕ್‌ಮೇಲ್‌

ಆದರೂ ಅಲ್ಪಸಂಖ್ಯಾತ ಸಮುದಾಯದವರನ್ನು ಓಲೈಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಎಂಎಲ್ಸಿ ನಸೀರ್ ಅಹ್ಮದ್, ಸಚಿವ ಜಮೀರ್ ಅಹ್ಮದ್, ಐವಾನ್ ಡಿಸೋಜ ಇವರುಗಳು ಸೇರಿಕೊಂಡು ದಿಕ್ಕುತಪ್ಪಿಸಿ ಬಜೆಟ್‌ನಲ್ಲಿ ತಾರತಮ್ಯ ಆಗುವಂತೆ ಮಾಡಿದ್ದಾರೆ, ಸಿದ್ದರಾಮಯ್ಯರನ್ನು ಬ್ಲಾಕ್‌ಮೇಲ್ ಮಾಡಿ ಬಜೆಟ್‌ನಲ್ಲಿ ಸೇರ್ಪಡೆ ಮಾಡಿ ಮಂಡಿಸಿದ್ದಾರೆ ಎಂದು ದೂರಿದರು.

ಮೂವರು ವಿದ್ಯಾರ್ಥಿಗಳಿರುವ ಉರ್ದು ಶಾಲೆಗಳ ಅಭಿವೃದ್ದಿಗೂ ಒಂದು ಕೋಟಿ ರು.ಗಳಂತೆ ೧೦೦ ಕೋಟಿ ರು.ಗಳು ವೆಚ್ಚ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ಶಾದಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಣ ನೀಡುತ್ತಿದ್ದಾರೆ, ಆದರೆ ಸರ್ಕಾರಿ ಶಾಲೆಗಳ ಮಕ್ಕಳ ಸ್ಕಾಲರ್‌ಶಿಪ್ ಹಣ ರದ್ದುಪಡಿಸಿದ್ದಾರೆ ಎಂದು ಕಿಡಿಕಾರಿದರು.ಪಕ್ಷಾತೀತ ಪ್ರತಿಭಟನೆ ಎಚ್ಚರಿಕೆ

ದಲಿತ ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವ ಸರ್ಕಾರದ ವಿರುದ್ಧ ದಲಿತರ ಮೀಸಲಾತಿ ಉಪಯೋಗಿಸಿಕೊಂಡು ಶಾಸಕರಾಗಿ ಆಯ್ಕೆಯಾಗಿರುವವರು ಇದರ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಇದನ್ನು ಖಂಡಿಸಲು ಪಕ್ಷಾತೀತವಾಗಿ ರಾಜ್ಯದಲ್ಲಿರುವ ೫೨ ದಲಿತ ಶಾಸಕರ ಮನೆ ಮುಂದೆ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ವೈ. ಸಂಪಂಗಿ, ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಜಿ.ಪಂ ಮಾಜಿ ಸದಸ್ಯ ಬಿ.ವಿ. ಮಹೇಶ್, ಮುಖಂಡರಾದ ಕೆಂಬೋಡಿ ನಾರಾಯಣ ಸ್ವಾಮಿ ಮತ್ತಿತರರು ಇದ್ದರು.