ಕರಾವಳಿಯಲ್ಲಿ ತಗ್ಗದ ಮಳೆಯ ಅಬ್ಬರ

| Published : Aug 03 2024, 12:35 AM IST

ಸಾರಾಂಶ

ಜೋಯಿಡಾದಲ್ಲಿ ಮಳೆಯ ಅಬ್ಬರ ಹೆಚ್ಚಿದೆ. ಒಂದು ಮನೆ ಕುಸಿದಿದೆ. ಸುಪಾ ಹಿನ್ನೀರಿನ ಹೆಚ್ಚಳದಿಂದ ಕೆಲವು ಊರುಗಳಿಗೆ ಸಂಪರ್ಕ ಕಡಿತಗೊಂಡಿದೆ.

ಕಾರವಾರ: ಕರಾವಳಿಯಾದ್ಯಂತ ಭಾರಿ ಮಳೆ ಮುಂದುವರಿದಿದೆ. ಇದರ ಜತೆಗೆ ಜೋಯಿಡಾದಲ್ಲಿ ಮಳೆಯ ಅಬ್ಬರ ಹೆಚ್ಚಿದೆ. ನಾಲ್ಕು ಮನೆಗಳಿಗೆ ಭಾಗಶಃ ಹಾನಿಯಾಗಿದೆ. 503 ಜನರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಅಂಕೋಲಾದಲ್ಲಿ ಎಡೆಬಿಡದೆ ಬುಧವಾರ ರಾತ್ರಿಯಿಂದಲೆ ಭಾರಿ ಮಳೆ ಸುರಿಯುತ್ತಿದೆ. ಕೇಣಿ ಹಳ್ಳ ತುಂಬಿ ಹರಿಯುತ್ತಿದ್ದು, ಜಲಾವೃತವಾದ ಗಾಂವಕರವಾಡ ಮನೆಗಳ 46 ಸಂತ್ರಸ್ತರು ಕಾಳಜಿ ಕೇಂದ್ರದಲ್ಲೇ ವಾಸವಾಗಿದ್ದಾರೆ.ಜೋಯಿಡಾದಲ್ಲಿ ಮಳೆಯ ಅಬ್ಬರ ಹೆಚ್ಚಿದೆ. ಒಂದು ಮನೆ ಕುಸಿದಿದೆ. ಸುಪಾ ಹಿನ್ನೀರಿನ ಹೆಚ್ಚಳದಿಂದ ಕೆಲವು ಊರುಗಳಿಗೆ ಸಂಪರ್ಕ ಕಡಿತಗೊಂಡಿದೆ. ಹೊನ್ನಾವರದ ಗುಂಡಬಾಳ, ಭಾಸ್ಕೇರಿ ಹೊಳೆಗಳ ನೀರಿನ ಪ್ರಮಾಣ ಸ್ವಲ್ಪ ಇಳಿಮುಖವಾಗಿದೆ. ಆದರೆ ಜಲಾವೃತವಾದ ಮನೆಗಳ ಜನತೆ ಕಾಳಜಿ ಕೇಂದ್ರಗಳಲ್ಲಿ ತಂಗಿದ್ದಾರೆ. ಭಟ್ಕಳದಲ್ಲಿ ಆಗಾಗ ಭಾರಿ ಮಳೆಯಾಗುತ್ತಿದೆ. ಕಾರವಾರದಲ್ಲೂ ಆಗಾಗ ಬಿರುಸಿನಿಂದ ಮಳೆಯಾಗುತ್ತಿದೆ. ಕಾರವಾರದ ಈಡೂರು, ಅರಗಾ, ಚೆಂಡಿಯಾದ ತಗ್ಗು ಪ್ರದೇಶ ಜಲಾವೃತವಾಗಿಯೇ ಇದೆ. ಕದ್ರಾ ಜಲಾಶಯದಿಂದ 60 ಸಾವಿರ ಕ್ಯುಸೆಕ್ ನಿರಂತರವಾಗಿ ಹೊರಬಿಡಲಾಗುತ್ತಿದೆ. ತಗ್ಗು ಪ್ರದೇಶ ಜಲಾವೃತವಾಗಿದೆ. ಮನೆಗಳ ಸಮೀಪ ನೀರು ಬಂದಿದೆಯೇ ಹೊರತೂ ಮನೆಗಳು ಜಲಾವೃತವಾಗಿಲ್ಲ.

ನೀರು ಬಿಡುಗಡೆಯ ಎಚ್ಚರಿಕೆ: ಸುಪಾ ಜಲಾಶಯ ಭರ್ತಿಯಾಗುತ್ತಿದೆ. ಜಲಾಶಯದಿಂದ ನೀರನ್ನು ಹೊರಬಿಡುವ ಎರಡನೇ ಎಚ್ಚರಿಕೆ ನೀಡಲಾಗಿದೆ. ಸುಪಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯ ಶೀಘ್ರದಲ್ಲಿ ಭರ್ತಿಯಾಗುವ ಸಾಧ್ಯತೆ ಇದೆ. ಸುಪಾ ಜಲಾಶಯದಿಂದ ಹೆಚ್ಚು ಪ್ರಮಾಣದಲ್ಲಿ ನೀರನ್ನು ಹೊರಬಿಟ್ಟಲ್ಲಿ ಕಾಳಿ ನದಿಯಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ.

ನೀರು ಬಿಡುಗಡೆ: ಲಿಂಗನಮಕ್ಕಿ ಅಣೆಕಟ್ಟು ಭರ್ತಿಯಾಗಲು ಕೇವಲ 3 ಅಡಿ ಬಾಕಿ ಇದ್ದು, 11 ಗೇಟ್ ಮೂಲಕ ನೀರು ಹೊರಬಿಡಲಾಗಿದೆ. ಗೇರುಸೊಪ್ಪ ಜಲಾಶಯದಿಂದ 51835 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ಶರಾವತಿ ನದಿ ತೀರದ 130 ಕುಟುಂಬಗಳನ್ನು ಸುರಕ್ಷಿತ ಪ್ರದೇಶದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಜಲಾಶಯದಿಂದ ಮತ್ತೂ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಟ್ಟಲ್ಲಿ ಪ್ರವಾಹದ ಪರಿಸ್ಥಿತಿ ಹೆಚ್ಚಲಿದೆ. ಜಿಲ್ಲೆಯಲ್ಲಿ ಶುಕ್ರವಾರ 4 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಕಾರವಾರದ 2, ಅಂಕೋಲಾದ 1, ಹೊನ್ನಾವರ ದ 9 ಮತ್ತು ಕುಮಟಾದ 2 ಸೇರಿದಂತೆ ಒಟ್ಟು 14 ಕಾಳಜಿ ಕೇಂದ್ರಗಳಲ್ಲಿ 503 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ.

ಇಂದು 9 ತಾಲೂಕಿನ ಶಾಲಾ- ಕಾಲೇಜುಗಳಿಗೆ ರಜೆ

ಕಾರವಾರ: ಜಿಲ್ಲೆಯ ಬಹುತೇಕ ಕಡೆ ವ್ಯಾಪಕ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ 9 ತಾಲೂಕಿನ ಶಾಲೆ- ಕಾಲೇಜುಗಳಿಗೆ ಶನಿವಾರ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಅವರು ಆದೇಶ ಹೊರಡಿಸಿದ್ದಾರೆ.ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಜೋಯಿಡಾ, ದಾಂಡೇಲಿ, ಶಿರಸಿ ಹಾಗೂ ಸಿದ್ಧಾಪುರಗಳ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ, ಐಟಿಐ, ಡಿಪ್ಲೊಮಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.