ಸಾರಾಂಶ
ವಿದ್ಯಾರ್ಥಿ ವೇತನ ವಿತರಣಾ ಕಾಯಕ್ರಮದಲ್ಲಿ ಸುಧೀರ್ ಕುಮಾರ್ ಮುರೊಳ್ಳಿ
ಕನ್ನಡಪ್ರಭ ವಾರ್ತೆ, ಕೊಪ್ಪಶ್ರೀರಾಮ್ ಫೈನಾನ್ಸ್ ನಂತಹ ಸಂಸ್ಥೆಗಳು ಎತ್ತರಕ್ಕೆ ಬೆಳೆದಷ್ಟು ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ ಎಂದು ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಕೊಪ್ಪ ಇವರ ಆಶ್ರಯದಲ್ಲಿ ತ್ಯಾಗರಾಜ ರಸ್ತೆಯ ಲಯನ್ಸ್ ಸೇವಾ ಮಂದಿರದಲ್ಲಿ ಬುಧವಾರ ಆಯೋಜನೆಗೊಂಡ ವಿದ್ಯಾರ್ಥಿ ವೇತನ ವಿತರಣಾ ಕಾಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಯಾವುದೇ ಜಾತಿ, ಧರ್ಮ ನೋಡದೆ ಲಿಂಗಭೇಧವಿಲ್ಲದೆ ಶೈಕ್ಷಣಿಕ ಪ್ರಗತಿಯೊಂದನ್ನೇ ಮಾನದಂಡವಾಗಿಟ್ಟುಕೊಂಡು ಶೃಂಗೇರಿ, ಕೊಪ್ಪ, ನ.ರಾ.ಪುರ ತಾಲೂಕುಗಳ ಎಲ್ಲಾ ಶಾಲೆಗಳಲ್ಲಿ 8,9,10ನೇ ತರಗತಿಯಲ್ಲಿ ಕಲಿಯುವ 60 ಶೇಕಡಕ್ಕಿಂತ ಹೆಚ್ಚು ಅಂಕ ಪಡೆದ ಸುಮಾರು 340 ಜನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ತಲಾ 3000 ರು.ಗಳಂತೆ ಒಟ್ಟು 10,20,000 ರು. ಗಳನ್ನು ವಿತರಣೆ ಮಾಡಿರುವುದು ಶೈಕ್ಷಣಿಕ ಪ್ರಗತಿಗೆ ನೀಡಿದ ಕೊಡುಗೆಯಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಇದೊಂದು ಸ್ವಾಗತಾರ್ಹ ಕಾರ್ಯಕ್ರಮ ಎಂದರು.
ಕೊಪ್ಪ ಠಾಣೆ ಪಿಎಸ್‌ಐ ಬಸವರಾಜ್ ಮಾತನಾಡಿ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಯಶಸ್ವಿ ಕಾರ್ಯಕ್ರಮ ವಾಗಿದೆ. ಮಕ್ಕಳು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಇಂತಹ ಕಾರ್ಯಕ್ರಮ ಪೂರಕ. ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಕಾಲಹರಣ ಮಾಡುವ ಬದಲು ಶಿಕ್ಷಣ, ದೈಹಿಕ ಶಿಕ್ಷಣ ಒದಗಿಸುವ ಕ್ರೀಡಾ- ಸಾಂಸ್ಕೃತಿಕ ಚಟುವಟಿಕೆಗಳತ್ತ ಗಮನ ಹರಿಸಬೇಕು. ಅಪ್ರಾಪ್ತರ ಕೈಯಲ್ಲಿ ದ್ವಿಚಕ್ರ ವಾಹನ, ಕಾರುಗಳನ್ನು ಚಾಲನೆಗೆ ನೀಡಿದ್ದಲ್ಲಿ ಮಕ್ಕಳ ಕೈಯಲ್ಲಿ ವಾಹನ ನೀಡಿದ ಪೋಷಕರಿಗೆ 25 ಸಾವಿರದವರೆಗೂ ದಂಡ ಮತ್ತು ಜೈಲು ಶಿಕ್ಷೆ ವಿಧಿಸುವ ಅವಕಾಶ ಕಾನೂನಿನಲ್ಲಿದ್ದು ಈಗಾಗಲೇ ಅನೇಕ ಕಡೆ ಕೆಲವರು ದಂಡ ಪಾವತಿಸಿದ್ದಾರೆ.ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಸವಾರಿ ಅಪಘಾತಕ್ಕೆ ಕಾರಣವಾಗಲಿದ್ದು ಇಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮವಹಿಸಲಾಗುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಲ್ಲಿ ಆರೋಗ್ಯ, ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಉಡುಪಿ ಶ್ರೀರಾಮ್ ಪ್ರೈವೇಟ್ ಲಿಮಿಟೆಡ್‌ನ ಸೈಟ್ ಹೆಡ್ ಸದಾಶಿವ ಆಮಿನ್ ಮಾತನಾಡಿ ಶ್ರೀರಾಮ್ ಫೈನಾನ್ಸ್ನ ಯೋಜನೆ, ಕಾರ್ಯಕ್ರಮಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಲ್.ಅಂಜನಪ್ಪ, ಶೃಂಗೇರಿ ಕ್ಷೇತ್ರ ಆಟೋ ಚಾಲಕರ ಸಂಘದ ಗೌರವ ಉಪಾಧ್ಯಕ್ಷ ಹೆಚ್.ಆರ್. ಜಗದೀಶ್, ಶ್ರೀರಾಮ್ ಪ್ರೈವೇಟ್ ಲಿಮಿಟೆಡ್‌ನ ರೀಜನಲ್ ಬ್ಯುಸಿನೆಸ್ ಹೆಡ್ ಶ್ರವಣ್ ಕುಮಾರ್ ಜಾದವ್, ಮುಂತಾದವರು ಮಾತನಾಡಿದರು.
ಕೊಪ್ಪ ಶಾಖಾ ವ್ಯವಸ್ಥಾಪಕ ಪ್ರಭಾಕರ್ ಎಸ್., ಬ್ರಾಂಚ್ ಕಲೆಕ್ಞನ್ ಹೆಡ್ ರಂಜನ್ ಕೆ.ಆರ್, ರೀಜನಲ್ ಕಲೆಕ್ಷನ್ ಹೆಡ್ ಸಂತೃಪ್ತಿ , ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಇದ್ದರು.