ಸಾರಾಂಶ
ಮರಿಯಮ್ಮನಹಳ್ಳಿ: ಯುವಕರಲ್ಲಿ ಅಡಗಿರುವ ಕಲಾಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದೆ ಮಾತಾ ಮಂಜಮ್ಮ ಜೋಗತಿ ಹೇಳಿದರು.
ಇಲ್ಲಿನ ದುರ್ಗಾದಾಸ್ ರಂಗಮಂದಿರದಲ್ಲಿ ಮರಿಯಮ್ಮನಹಳ್ಳಿಯ ರಂಗಬಿಂಬ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ಕಾರ್ಯಕ್ರಮದಡಿ ರಂಗಬಿಂಬ 2ನೇ ವಾರ್ಷಿಕೋತ್ಸವದ ಶ್ರಾವಣ ರಂಗ ಸಂಭ್ರಮದಲ್ಲಿ ಕೆ. ಮಲ್ಲನಗೌಡ ಮತ್ತು ತಂಡದವರಿಂದ ಸುಗಮ ಸಂಗೀತ ಹಾಗೂ ಅಂಬಿಕಾ ಮತ್ತು ತಂಡದವರಿಂದ ಸಮೂಹ ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರಿಗೆ ಕಾರ್ಯಕ್ರಮ ನೀಡುವ ಮೂಲಕ, ಕಲೆಯನ್ನು ಉಳಿಸುತ್ತಾ ಕಲಾವಿದರಿಗೆ ಸ್ಫೂರ್ತಿಯಾಗಿ ಕೆಲಸ ನಿರ್ವವಹಿಸುತ್ತಿದೆ. ಕಲಾವಿದರು ಇದರ ಸದುಪಯೋಗ ಪಡೆದು ಕಲೆಯನ್ನು ಉಳಿಸಿ-ಬೆಳೆಸಲು ಮುಂದಾಗಬೇಕು ಎಂದರು.ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗ ನಿರ್ದೇಶಕ ಬಿ.ಎಂ.ಎಸ್. ಪ್ರಭು ಸನ್ಮಾನ ಸ್ವೀಕರಿಸಿ ಮಾತನಾಡಿ, ಕಲೆ ಹಾಗೂ ಕಲಾವಿದರಿಗೆ ನೀಡುವ ಗೌರವದಿಂದ ಕಲೆಯ ಬೆಳವಣಿಗೆಗೆ ಸಹಾಯವಾಗುತ್ತದೆ. ಪ್ರೇಕ್ಷಕರು ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ನಾಟಕ ಇತರ ಕಲೆಗಳನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಪಪಂ ಸದಸ್ಯೆ ಪೂಜಾ ಅಶ್ವಿನಿ ನಾಗರಾಜ ಮಾತನಾಡಿ, ಸಾಂಸ್ಕೃತಿಕ ಕಲೆ ಹಾಗೂ ಕಲಾವಿದರು ಉಳಿಯಬೇಕಾದರೆ ಪ್ರೇಕ್ಷಕರ ಪ್ರೋತ್ಸಾಹ, ಬೆಂಬಲ ಅಗತ್ಯವಾಗಿದೆ ಎಂದು ಹೇಳಿದರು.ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಹಿರಿಯ ರಂಗಕಲಾವಿದೆ ಡಾ. ಕೆ. ನಾಗರತ್ನಮ್ಮ ಮಾತನಾಡಿ, ಕಲೆ, ಸಾಹಿತ್ಯ, ಸಂಗೀತ, ನಾಟಕ ಇತರ ಸಾಂಸ್ಕೃತಿಕ ಚಟುವಟಿಕೆ ರಕ್ಷಣೆಯಲ್ಲಿ ಕಲಾವಿದರ ಸಾಧನೆ ಅಪಾರವಾಗಿದೆ. ನೋವನ್ನು ಮರೆಸುವ ಶಕ್ತಿ ಸಂಗೀತಕ್ಕಿದೆ. ಸಂಗೀತ ಕೇಳುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ಹೇಳಿದರು.
ಸ್ಥಳೀಯ ಪಪಂ ಸದಸ್ಯ ಕೆ. ಮಂಜುನಾಥ, ಗುಂಡಾ ಗ್ರಾಪಂ ಸದಸ್ಯ ಗುಂಡಾ ಕೃಷ್ಣ, ಕಲಾವಿದರಾದ ಕೆ. ಮಲ್ಲನಗೌಡ, ಅಂಬಿಕಾ ಭಾಗವಹಿಸಿದ್ದರು.ರಂಗಬಿಂಬ ಟ್ರಸ್ಟ್‌ನ ಅಧ್ಯಕ್ಷೆ ಎಂ. ಗಾಯಿತ್ರಿದೇವಿ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಾದ ಕೆ. ಮಲ್ಲನಗೌಡ ಮತ್ತು ತಂಡದವಾದ ಜಿ. ಮಲ್ಲಪ್ಪ, ಬಿ.ಎಂ.ಎಸ್. ಅಮೂಲ್ಯಾ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅಂಬಿಕಾ ಮತ್ತು ತಂಡದವರು ಸಮೂಹ ನೃತ್ಯ ಪ್ರದರ್ಶಿಸಿದರು.
ಗೊಲ್ಲರಹಳ್ಳಿ ತಿಪ್ಪಣ್ಣ ಹಾರ್ಮೋನಿಯಂ, ಜಿ.ಕೆ. ಮೌನೇಶ್ ತಬಲಾ ಸಾಥ್ ನೀಡಿದರು. ಜಿ. ಮಲ್ಲಪ್ಪ ಪ್ರಾರ್ಥಿಸಿದರು. ರಂಗಬಿಂಬ ಸದಸ್ಯೆ ಪ್ರಕೃತಿ ಎನ್. ದೇವನಕೊಂಡ ಸ್ವಾಗತಿಸಿದರು. ರಂಗಬಿಂಬ ಕಾರ್ಯದರ್ಶಿ ಸಿ.ಕೆ. ನಾಗರಾಜ ವಂದಿಸಿದರು. ಕೆ. ನಾಗೇಶ ಕಾರ್ಯಕ್ರಮ ನಿರೂಪಿಸಿದರು.