ಅಂಗವಿಕಲರಿಗೆ ಅಗತ್ಯ ನೆರವು ನೀಡಲು ಕರೆ

| Published : May 26 2024, 01:31 AM IST

ಸಾರಾಂಶ

ಅಂಗವೈಕಲ್ಯದ ಸ್ಥಿತಿಯು ಹುಟ್ಟಿನಿಂದ ಅಥವಾ ಆಕಸ್ಮಿಕವಾಗಿ ಉದ್ಭವಿಸಬಹುದು. ಆದರೆ ದೈಹಿಕವಾಗಿ ಅಸಮರ್ಥರಾದ ವ್ಯಕ್ತಿಗಳು ದಿನಗಳಂತೆ ಬದುಕಿನಲ್ಲಿಯೂ ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಮಾನೆ ಕ್ಯಾನಕೋರ್ ವ್ಯವಸ್ಥಾಪಕ ಕಿಶನ್ ಕುಮಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ಅಂಗವೈಕಲ್ಯದ ಸ್ಥಿತಿಯು ಹುಟ್ಟಿನಿಂದ ಅಥವಾ ಆಕಸ್ಮಿಕವಾಗಿ ಉದ್ಭವಿಸಬಹುದು. ಆದರೆ ದೈಹಿಕವಾಗಿ ಅಸಮರ್ಥರಾದ ವ್ಯಕ್ತಿಗಳು ದಿನಗಳಂತೆ ಬದುಕಿನಲ್ಲಿಯೂ ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಮಾನೆ ಕ್ಯಾನಕೋರ್ ವ್ಯವಸ್ಥಾಪಕ ಕಿಶನ್ ಕುಮಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಮೋಟೆಬೆನ್ನೂರಿನ ಮಾನೆ ಕ್ಯಾನಕೋರ್ ಇಂಗ್ರೀಡಿಯಂಟ್ಸ್ ಪ್ರೈ.ಲಿ.ವತಿಯಿಂದ ಅಂಗವಿಕಲರಿಗೆ ಸ್ವಯಂಚಾಲಿತ ಬೈಕ್ ವಿತರಿಸಿ ಅವರು ಮಾತನಾಡಿದರು. ದೈಹಿಕ ಅಥವಾ ಮಾನಸಿಕ ಸಾಮರ್ಥ್ಯ ಕಳೆದುಕೊಂಡವರನ್ನು ನಾವು ಎಲ್ಲರಿಗೂ ತೋರುವಂತೆ ಅಗತ್ಯವಿರುವ ಸಹಕಾರವನ್ನು ತೋರಿಸಬೇಕಾಗಿದೆ ಎಂದರು.

ದೈಹಿಕ, ಮಾನಸಿಕ, ಬೌದ್ಧಿಕ ಅಥವಾ ಸಂವೇದನಾ ದೌರ್ಬಲ್ಯ ಇನ್ನಿತರ ದೀರ್ಘಾವಧಿ ತೊಂದರೆಗಳನ್ನು ಅನುಭವಿಸುತ್ತಿರುವ ವ್ಯಕ್ತಿಗಳನ್ನು ಗುರ್ತಿಸುವುದರ ಜೊತೆಗೆ ಸಮಾಜದಲ್ಲಿ ಇತರರಂತೆ ಸಮಾನವಾದ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನದಲ್ಲಿ ಕಂಪನಿಯು ನಿರತವಾಗಿದ್ದು ಅಂತಹದ್ದೊಂದು ಪ್ರಯತ್ನದ ಫಲವಾಗಿ ಇಂದು ಸ್ವಯಂಚಾಲಿತ ಬೈಕ್ ಗಳನ್ನು ವಿತರಿಸಲಾಗುತ್ತಿದೆ ಎಂದರು.

ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಅಸಾಮರ್ಥ್ಯ ವ್ಯಕ್ತಿಗಳಿಗೆ ಸೂಕ್ತ ಅವಕಾಶ ಹಾಗೂ ತರಬೇತಿಗಳನ್ನು ಕಲ್ಪಿಸಿದ್ದೇ ಆದಲ್ಲಿ ಅವರಿಂದ ಐತಿಹಾಸಿಕ ಸಾಧನೆ ನಿರೀಕ್ಷಿಸಬಹುದು, ದೃಷ್ಟಿ ಕಳೆದುಕೊಂಡ ಪಂಚಾಕ್ಷರಿ ಗವಾಯಿಗಳು ಗದುಗಿನಲ್ಲಿ ವೀರೇಶ್ವರ ಪುಣ್ಯಾಶ್ರಮ ನಿರ್ಮಿಸುವ ಮೂಲಕ ಅಂಧರ ಬಾಳಿಗೆ ಬೆಳಕಾಗಿದ್ದು ಇದೂ ಕೂಡ ಐತಿಹಾಸಿಕ ಸಾಧನೆಯಾಗಿದೆ ಎಂದ ಅವರು ಕ್ಯಾನಕೋರ್ ಕಂಪನಿಯು ಇಂತಹದ್ದೊಂದು ನಿರ್ಣಯ ತೆಗೆದುಕೊಳ್ಳುವ ಮೂಲಕ ಸ್ವಯಂಚಾಲಿತ ಬೈಕ್‌ಗಳನ್ನು ವಿತರಿಸಿದ್ದು ಸ್ವಾಗತಾರ್ಹವೆಂದರು.

ಇದೇ ಸಂದರ್ಭದಲ್ಲಿ ಮೋಟೆಬೆನ್ನೂರಿನ ಧರ್ಮರಾಜ ವಡ್ಡಣ್ಣನವರ, ಹಾವೇರಿ ತಾಲೂಕು ಹೊಂಬರಡಿ ಗ್ರಾಮದ ರಸೂಲಿಲ್ಲಾ ಪಾಟೀಲ, ಯಲಗಚ್ಚ ಗ್ರಾಮದ ಮಹದ್ಮಲಿ ಮುಲ್ಲಾ, ರಾಣಿಬೆನ್ನೂರ ತಾಲೂಕು ಕುಮಾರಪಟ್ಟಣದ ಜಗದೀಶ, ಬೆನಕನಕೊಂಡ ಗ್ರಾಮದ ಎಂ.ಕವಿತಾ ಅವರಿಗೆ 1 ಲಕ್ಷ ಮೌಲ್ಯದ 5 ಸ್ವಯಂಚಾಲಿತ ಬೈಕ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ಕ್ಯಾನಕೋರ್ ಕೆ.ಎಸ್. ಮೋಹನಕುಮಾರ, ಸಂಜಯಕುಮಾರ ಹಿರೇಮನಿ, ಮೌಲಾಸಾಬ್ ನದಾಫ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.