ಸಾರಾಂಶ
ದೋಟಿಹಾಳ: ಪಾಲಕರು ಅಂಗನವಾಡಿಗಳಿಗೆ ಬಂದು ಮಕ್ಕಳಿಗೆ ಮಾಡಿಸುವಂತಹ ಚಟುವಟಿಕೆಗಳನ್ನು ತಾವು ಮನೆಯಲ್ಲಿ ಮಾಡಿಸುವ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕು ಎಂದು ಮೇಲ್ವಿಚಾರಕಿ ಅನ್ನಪೂರ್ಣಾ ಪಾಟೀಲ ಹೇಳಿದರು.ಸಮೀಪದ ಕೆ. ಬೋದೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡೆದ ಪೋಷಕರ ನಡೆ ಅಂಗನವಾಡಿ ಕಡೆ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ದಿನಮಾನಗಳಲ್ಲಿ ಸ್ಪರ್ಧಾತ್ಮಕವಾಗಿಯೂ ಅಂಗನವಾಡಿ ಕೇಂದ್ರಗಳು ಸಜ್ಜುಗೊಂಡಿದೆ. ಪಾಲಕರು ಪೋಷಕರು ಮಕ್ಕಳನ್ನು ಅಂಗನವಾಡಿಗೆ ದಾಖಲಿಸಬೇಕು. ಖಾಸಗಿ ಸಂಸ್ಥೆಗಳಿಗೆ ಮಕ್ಕಳನ್ನು ಕಳುಹಿಸದೇ ಸರ್ಕಾರದ ಅಂಗನವಾಡಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ದಾಖಲು ಮಾಡಬೇಕು ಎಂದರು.ಪೂರ್ವ ಪ್ರಾಥಮಿಕ ಹಂತ ಮಕ್ಕಳ ಭವಿಷ್ಯವನ್ನು ಮತ್ತು ಅವರ ಬಾಲ್ಯವನ್ನು ಹಸನಾಗಿ ಮಾಡುವಲ್ಲಿ ಗ್ರಾಮದ ಅಂಗನವಾಡಿಗಳು ಅತ್ಯಂತ ಪ್ರಾಮುಖ್ಯ ಹೆಜ್ಜೆಯನ್ನಿಟ್ಟಿವೆ. ಗ್ರಾಮದ ಅಂಗನವಾಡಿಗಳಿಗೆ ಮಕ್ಕಳನ್ನು ತಪ್ಪದೇ ಕಳುಹಿಸಬೇಕು. ಅಂಗನವಾಡಿಯಲ್ಲಿ ಕಲಿಸುವಂತಹ ಚಟುವಟಿಕೆಗಳನ್ನು ಮನೆಯಲ್ಲಿಯೂ ಹೇಳಿಕೊಡಬೇಕು ಎಂದರು.ಮಕ್ಕಳ ಆರೋಗ್ಯ ಮತ್ತು ಬುದ್ಧಿ ವಿಕಸನಕ್ಕೆ ಅಂಗನವಾಡಿ ಕೇಂದ್ರಗಳ ಪಾತ್ರ ಮಹತ್ವದ್ದಾಗಿದೆ. ಆ ಹಿನ್ನೆಲೆಯಲ್ಲಿ ಮಕ್ಕಳು ಆರೋಗ್ಯವಂತರಾಗಿರಲು ಸರ್ಕಾರ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು. ಪಾಲಕರು ಕೂಡ ಅಂಗನವಾಡಿಯಲ್ಲಿ ನಡೆಯುವ ಪಾಲಕರ ನಡೆ ಅಂಗನವಾಡಿ ಕಡೆ ಸಭೆಯಲ್ಲಿ ಭಾಗಿಯಾಗಿ ಕೇಂದ್ರದಲ್ಲಿ ನಡೆಯುವ ಮುಕ್ತ ಆಟ ಹವಾಮಾನ ಕ್ಯಾಂಲೆಂಡರ್, ನಿಯಮಗಳು, ಕತೆ ಹೇಳುವುದು, ಚಿಕ್ಕದು-ದೊಡ್ಡದು, ಹಗುರ-ಭಾರ ಮುಂತಾದ ಚಟುವಟಿಕೆಯಲ್ಲಿ ಭಾಗಿಯಾಗಿ ಮಕ್ಕಳಿಗೆ ಕಲಿಸಿಕೊಡಬೇಕು ಎಂದರು.ಈ ಸಂದರ್ಭದಲ್ಲಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಕಂಟ್ಲಿ, ಅಂಗನವಾಡಿ ಕಾರ್ಯಕರ್ತೆಯರಾದ ಸಿದ್ದಮ್ಮ ಗುರಿಕಾರ, ಮುತ್ತಮ್ಮ ಗೋನಾಳ, ಭೀಮವ್ವ, ರೇಣುಕಾ ಗೊರೆಬಾಳ, ಮಂಜುಳಾ ಕೊಡಗಲಿ, ವಿದ್ಯಾಶ್ರೀ, ಭಾಗ್ಯಶ್ರೀ ಗೌಡರ, ಕಸ್ತೂರಿ ವಣಗೇರಿ, ಸುಧಾ ಪೂಜಾರಿ ಇದ್ದರು.