ರಾಣಿಬೆನ್ನೂರು: ಯುವಕರು ಮತ್ತು ಮಕ್ಕಳಲ್ಲಿ ಹೆಚ್ಚುತ್ತಿರುವ ಅತಿಯಾದ ಮೊಬೈಲ್ ಬಳಕೆಯಿಂದ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ದೇಶದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತಿದೆ. ಈ ಕಾರಣದಿಂದ ಅವರುಗಳಿಗೆ ಮೊಬೈಲ್ ಬಿಡಿಸಿ ಪುಸ್ತಕ ನೀಡುವ ಅಭಿಯಾನ ತುರ್ತಾಗಿ ಆರಂಭವಾಗಬೇಕಾಗಿದೆ ಎಂದು ನಿವೃತ್ತ ಪಿಎಸ್ಐ ಕೆ.ಸಿ. ಕೋಮಲಾಚಾರ್ ಹೇಳಿದರು.
ಇಲ್ಲಿನ ಗೌರಿಶಂಕರ ನಗರದ ಸುನಿಲ್ ಲಿಂಗಾರೆಡ್ಡಿ ಅವರ ನಿವಾಸದಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಿಲ್ಲಾ ಜಾಗೃತಿ ಸಮಿತಿಯ ಆಶ್ರಯದಲ್ಲಿ ಏರ್ಪಡಿಸಿದ್ದ ಮನೆಗೊಂದು ಗ್ರಂಥಾಲಯಗಳ ಅನುಷ್ಠಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಇಂದಿನ ವ್ಯವಸ್ಥೆಯಲ್ಲಿ ಟಿವಿ ಮತ್ತು ಮೊಬೈಲ್ ಇಲ್ಲದೆ ಪ್ರಪಂಚವೇ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಖೇದಕರ ಸಂಗತಿ. ಇದರಿಂದ ಹೊರಬರಲು ಪುಸ್ತಕಗಳೇ ದಾರಿದೀಪವಾಗಬೇಕಾಗಿದೆ. ಅದಕ್ಕಾಗಿ ಜಾಗೃತಿ ಅಭಿಯಾನ ಒಂದೇ ದಾರಿ ಆಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪರಿಸರ ನಗರ ಹಾಗೂ ಗ್ರಾಮೀಣಾಭಿವೃದ್ದಿ ಸೇವಾ ಸಂಸ್ಥೆಯ ಅಧ್ಯಕ್ಷೆ ಡಾ. ಪದ್ಮಾವತಿ ಯೋಗಿ ಮಾತನಾಡಿ, ಮಕ್ಕಳಲ್ಲಿ ಪುಸ್ತಕದ ಓದಿನ ಅಭಿರುಚಿ ಮೂಡಿಸಲು ಮನೆಯಲ್ಲಿರುವ ಹೆಣ್ಣು ಮಕ್ಕಳ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಮೊಬೈಲ್ನಲ್ಲಿ ಸುಳ್ಳು ಸತ್ಯಗಳ ಮಾಹಿತಿ ಇರಬಹುದು. ಆದರೆ ಪುಸ್ತಕಗಳಲ್ಲಿ ಸತ್ಯ, ನ್ಯಾಯ, ನೀತಿ, ಧರ್ಮದ ಆದರ್ಶಗಳೇ ಹೆಚ್ಚು ಲಭಿಸುತ್ತವೆ. ಅಂತಹ ಪುಸ್ತಕಗಳಿಂದ ಮಕ್ಕಳ ಮನಸ್ಸನ್ನು ಬದಲಾಯಿಸಿ ಪುಸ್ತಕ ಹಿಡಿಯಲು ಪ್ರೇರೇಪಿಸಬೇಕು ಎಂದರು.ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಸುನೀಲ ಲಿಂಗಾರೆಡ್ಡಿ, ಎಂ.ಚಿರಂಜೀವಿ, ಜಿ.ಜಿ. ಹೊಟ್ಟಿಗೌಡ್ರ, ರಾಮಸಿಂಗ ರಾಠೋಡ, ಪ್ರಿಯದರ್ಶಿನಿ ಲಿಂಗಾರೆಡ್ಡಿ, ಈರಣ್ಣ ಬೆಳವಡಿ, ಪ್ರಭಾಕರ ಶಿಗ್ಲಿ, ಎಸ್.ಆರ್. ಹಿರೇಮಠ, ವೀರೇಶ ಜಂಬಗಿ, ರಾಜೇಂದ್ರ ಹೆಗಡೆ, ಬಿ.ಜೆ. ಯಲಿಗಾರ, ಸಂತೋಷ, ರಾಜೇಶ್ವರಿ ಉದಗಟ್ಟಿ, ಎಂ.ಬಿ. ಮೋಟಳ್ಳಿ, ರೇವಣ್ಣ ಮಾಗನೂರ, ಅನೂಷ್ಕಾ, ತನೂಷ್ಕಾ, ಪ್ರಶಾಂತ ಮತ್ತಿತರರಿದ್ದರು.