ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ದ ಕ್ಯಾಂಟರ್ ಹಿಂದೆ ಸರಿಯುವ ಬರದಲ್ಲಿ ರಸ್ತೆ ಬದಿ ಇದ್ದ ವಿದ್ಯುತ್ ಕಂಬಕ್ಕೆ ಗುದ್ದಿದ್ದು, ಬಾರೀ ಅನಾಹುತ ತಪ್ಪಿರುವ ಘಟನೆ ತಾಲೂಕಿನ ಬೀರವಳ್ಳಿಯ ಶಕ್ತಿ ದೇವತೆ ಚಂದುಗೋನಹಳ್ಳಿ ಅಮ್ಮನವರ ದೇವಾಲಯದ ರಸ್ತೆಯಲ್ಲಿ ನಡೆದಿದೆ.ಕ್ಯಾಂಟರ್ ಗುದಿದ್ದ ರಭಸಕ್ಕೆ ವಿದ್ಯುತ್ ಕಂಬ ವಾಲಿದ್ದು, ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಪರದಾಡುತ್ತಿದ್ದ ವಾಹನ ಚಾಲಕರು ಗಾಭರಿಗೊಂಡು ವಾಹನಗಳನ್ನು ಬಿಟ್ಟು ದಿಕ್ಕಾಪಾಲದರು. ಅದೃಷ್ಟವಶಾತ್ ಯಾವುದೇ ಕಾಲ್ತುಳಿತ ಸಂಭವಿಸದೆ ಅಥವಾ ವಾಲಿದ ವಿದ್ಯುತ್ ಕಂಬ ಕೆಳಗೆ ಬೀಳದೆ ಭಾರೀ ಅನಾಹುತವೊಂದು ತಪ್ಪಿತು.
ತಾಲೂಕಿನ ಬಂಡೀಹೊಳೆ, ನಾಟನಹಳ್ಳಿ ಮತ್ತು ಬೀರವಳ್ಳಿ ಗ್ರಾಮಗಳಿಗೆ ಹೊಂದಿಕೊಂಡಂತೆ ಶಕ್ತಿ ದೇವತೆ ಚಂದುಗೋನಹಳ್ಳಿ ಅಮ್ಮನವರ ದೇವಾಲಯವಿದೆ. ಪ್ರತಿ ಮಂಗಳವಾರ, ಶುಕ್ರವಾರ, ಭಾನುವಾರ ಸೇರಿದಂತೆ ಅಮಾವಾಸ್ಯೆ, ಹುಣ್ಣಿಮೆ ಮತ್ತಿತರ ದಿನಗಳಲ್ಲಿ ಕನಿಷ್ಠ 10 ಸಾವಿರಕ್ಕೂ ಅಧಿಕ ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ.ಚಂದುಗೋನಹಳ್ಳಿ ಅಮ್ಮನವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ದೇವಿಗೆ ರಕ್ತ ಬಲಿ ಅರ್ಪಿಸುವವರು, ತಡೆ, ಮೊಟ್ಟೆ ಹೊಡೆಯುವವರು ಮತ್ತಿತರ ಪೂಜೆ ಸಲ್ಲಿಸುವವರ ಸಂಖ್ಯೆ ಅಧಿಕವಾಗುತ್ತಲೇ ಇದೆ. ಅಲ್ಲದೇ, ಸನ್ನಿಧಿಯಲ್ಲಿ ಬೀಗರ ಔತಣ, ನಾಮಕರಣ, ಹುಟ್ಟುಹಬ್ಬಗಳ ಆಚರಣೆಗಳು ಹೆಚ್ಚಾಗಿ ನಡೆಯುತ್ತಿವೆ. ದೇಗುಲದ ಸುತ್ತಾಮುತ್ತ ಇದ್ದ ಕೃಷಿ ಜಮೀನು ಸಮುದಾಯ ಭವನಗಳಾಗಿ ಪರಿವರ್ತನೆಗೊಂಡಿದ್ದು ಹತ್ತಾರು ಸಮುದಾಯ ಭವನಗಳು ತಲೆ ಎತ್ತಿ ನಿಂತಿವೆ. ಆದರೆ, ದೇವಿ ಸನ್ನಿಧಿಯಲ್ಲಿ ಭಕ್ತರಿಗೆ ಮೂಲ ಸೌಲಭ್ಯಗಳು ಮಾತ್ರ ಹೆಚ್ಚುತ್ತಿಲ್ಲ.
ಹೇಮಾವತಿ ನದಿಯ ತಟದಲ್ಲಿ ಚಂದುಗೋನಹಳ್ಳಿ ಅಮ್ಮನವರ ಸನ್ನಿಧಿಯಿದೆ. ಪಕ್ಕದಲ್ಲಿಯೇ ಮಂದಗೆರೆ ಎಡದಂಡೆ ನಾಲೆಯಿದೆ. ಸಹಸ್ರಾರು ಭಕ್ತರು ದೇಗುಲಕ್ಕೆ ಬರುತ್ತಿದ್ದರು ನೀರಾವರಿ ಇಲಾಖೆ ಕಾಲುವೆ ಏರಿ ಮೇಲೆ ರಕ್ಷಣಾ ತಡೆಗೋಡೆ ಅಳವಡಿಸಿಲ್ಲ. ಕಿರಿದಾದ ರಸ್ತೆಯಲ್ಲಿ ದೇವಿ ಸನ್ನಿಧಿಗೆ ಆಗಮಿಸುವ ಭಕ್ತರ ವಾಹನಗಳು ಸಂಚರಿಸಲಾರದೆ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗುತ್ತಿದೆ.ಚಂದುಗೋನಹಳ್ಳಿ ಅಮ್ಮನವರ ಸನ್ನಿಧಿಯಲ್ಲಿನ ಟ್ರಾಫಿಕ್ ಜಾಮ್ ಸಮಸ್ಯೆ ಮತ್ತು ಭಕ್ತರಿಗೆ ಸೌಲಭ್ಯಗಳ ಕೊರತೆ ಕುರಿತು ‘ಕನ್ನಡ ಪ್ರಭ’ 2024ರ ಜುಲೈ 4 ರಂದು ವರದಿ ಮಾಡಿತ್ತು. ಆದರೆ, ಯಾವುದೇ ಪ್ರತಿಫಲ ಸಿಕ್ಕಿಲ್ಲ.