ಸಾರಾಂಶ
ದೊಡ್ಡಬಳ್ಳಾಪುರ: ಬೆಂಗಳೂರು-ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ಮಾರಸಂದ್ರ ಅಪಾರ್ಟ್‌ಮೆಂಟ್ ಬಳಿ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಕಾರೊಂದು ಹೊತ್ತಿ ಉರಿದಿದ್ದು ವಾಹನದ ಒಳಗಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ದೊಡ್ಡಬಳ್ಳಾಪುರ: ಬೆಂಗಳೂರು-ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ಮಾರಸಂದ್ರ ಅಪಾರ್ಟ್‌ಮೆಂಟ್ ಬಳಿ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಕಾರೊಂದು ಹೊತ್ತಿ ಉರಿದಿದ್ದು ವಾಹನದ ಒಳಗಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಗೌರಿಬಿದನೂರು ತಾಲೂಕಿನ ವಕೀಲರೊಬ್ಬರು ಕುಟುಂಬ ಸಮೇತ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಮಾರ್ಗ ಮಧ್ಯ ಮಾರಸಂದ್ರ ಬಳಿ ಏಕಾಏಕಿ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ಪ್ರಯಾಣಿಕರು ಕಾರಿನಿಂದ ಕೆಳಗೆ ಇಳಿದಿದ್ದಾರೆ. ನೋಡನೋಡುತ್ತಿದ್ದಂತೆ ಕಾರು ಹೊತ್ತಿ ಉರಿದಿದ್ದು, ಇಂಜಿನ್‌ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿರುವ ಶಂಕೆ ವ್ಯಕ್ತವಾಗಿದೆ. ಸಾರ್ವಜನಿಕರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದು, ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಘಟನೆ ನಡೆದ ಸ್ಥಳ ಬೆಂಗಳೂರು-ಹಿಂದೂಪುರ ರಾಜ್ಯ ಹೆದ್ದಾರಿಯಾದ ಕಾರಣ ಸ್ಥಳದಲ್ಲಿ 1 ಕಿ.ಮೀ.ವರೆಗೂ ರಸ್ತೆ ಸಂಚಾರ ಬಂದ್ ಆಗಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ರಸ್ತೆ ಸಂಚಾರವನ್ನು ಸುಗಮಗೊಳಿಸಿದರೆನ್ನಲಾಗಿದೆ.