ಸಾರಾಂಶ
ಕೂಡ್ಲಿಗಿ: ಗದುಗಿನಿಂದ ಶಬರಿಮಲೆ ಕಡೆಗೆ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಕೂಡ್ಲಿಗಿ ಸಮೀಪದ ಚಿಕ್ಕಜೋಗಿಹಳ್ಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 50ರ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವಿಗೀಡಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ನಸುಕಿನ ಜಾವ ನಡೆದಿದೆ.
ಗದುಗಿನ ಯುವರಾಜ ಕಾಶಪ್ಪ ಹೂಗಾರ್(22) ಹಾಗೂ ಗದಗ ಜಿಲ್ಲೆ ಲಕ್ಕುಂಡಿಯ ಚನ್ನವೀರಗೌಡ ಹೊಳಿಯಪ್ಪ ಪಾಟೀಲ್(32) ಎಂಬವರೇ ಮೃತಪಟ್ಟ ದುರ್ದೈವಿಗಳು.
ವೀರಣ್ಣ ಸಂಗಳದ್, ಮಂಜುನಾಥ ತಳವಾರ ಹಾಗೂ ಚಾಲಕ ಚಿದಂಬರ ಕುಲಕರ್ಣಿ ಎಂಬವರು ಗಾಯಗೊಂಡಿದ್ದು, ಅವರನ್ನು ಜಗಳೂರು ಆಸ್ಪತ್ರೆಗೆ ಸೇರಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ: ಗದಗ ಕಡೆಯಿಂದ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಐವರು ಮಾಲಾಧಾರಿಗಳು ಶಬರಿಮಲೆಗೆ ಹೋಗುತ್ತಿರುವಾಗ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾ ಕ್ರಾಸ್‌ನ ಓಂಕಾರ ನಾಯ್ಕ ಅವರ ತೋಟದ ಸಮೀಪ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮಂಗಳವಾರ ನಸುಕಿನ ಜಾವ 1.15 ಗಂಟೆ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಡಿಕ್ಕಿಯಾಗಿದೆ. ಪರಿಣಾಮ ಕಾರು ನುಜ್ಜುನುಜ್ಜಾಗಿ ರಸ್ತೆಯ ಪಕ್ಕಕ್ಕೆ ಬಿದ್ದಿದೆ. ಘಟನೆಯಲ್ಲಿ ಇಬ್ಬರು ಸಾವಿಗೀಡಾಗಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಅಪಘಾತದ ಮಾಹಿತಿ ತಿಳಿದ ತಕ್ಷಣ ಹೊಸಹಳ್ಳಿ ಪೊಲೀಸರು ಹಾಗೂ ಹೈವೇ ಪೊಲೀಸ್ ಮತ್ತು ಸಿಬ್ಬಂದಿ ಸೇರಿ ಕಾರಿನಲ್ಲಿದ್ದ ಗಾಯಾಳುಗಳನ್ನು ಜಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಯುವರಾಜ ಹಾಗೂ ಚನ್ನವೀರಗೌಡ ಪಾಟೀಲ್ ಮಾರ್ಗಮಧ್ಯೆ ಸಾವಿಗೀಡಾಗಿದ್ದಾರೆ. ತಾಲೂಕಿನ ಹೊಸಹಳ್ಳಿ ಠಾಣಾ ಪಿಎಸ್ಐ ಎರಿಯಪ್ಪ ಅಂಗಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.