ಸಾರಾಂಶ
- ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನ: ಶಿಕ್ಷಕರ ದಿನಾಚರಣೆ । ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ನಿವೃತ್ತರಿಗೆ ಸನ್ಮಾನ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಮಕ್ಕಳು ಶಾಲೆಗೆ ಬರುವಾಗ ಖಾಲಿ ಹಾಳೆಯಂತೆ. ಅವರಿಗೆ ತಮ್ಮಲ್ಲಿನ ಜ್ಞಾನ ಧಾರೆ ಎರೆದು ಭವಿಷ್ಯದ ರೂವಾರಿಗಳಾಗಿ ರೂಪಿಸುವ ಶಿಕ್ಷಕ ವೃತ್ತಿ ಶ್ಲಾಘನೀಯ ಮತ್ತು ಅವಿಸ್ಮರಣೀಯ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.
ನಗರದ ಹದಡಿ ರಸ್ತೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಮತ್ತು ದಕ್ಷಿಣ ವಲಯದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳಿಗೆ ಬೋಧನೆ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನೂ ಕಲಿಸಬೇಕಿದೆ. ಅವರ ಪ್ರತಿಭೆಗಳನ್ನು ಗುರುತಿಸಿ ಶ್ರೇಯೋಭಿವೃದ್ಧಿಗೆ ಸಹಕರಿಸಬೇಕು. ಇಂದು ಸಾಮಾಜಿಕ ಜಾಲತಾಣ, ಕೃತಕ ಬುದ್ಧಿಮತ್ತೆ ಪ್ರಭಾವ ಹೆಚ್ಚಾಗಿದ್ದು, ಒತ್ತಡವೂ ಹೆಚ್ಚಿದೆ. ಜವಾಬ್ದಾರಿಯುತ ಶಿಕ್ಷಕರಾಗಿ ತಮ್ಮ ಕರ್ತವ್ಯ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ವಿದ್ಯಾರ್ಥಿಗಳಿಗೆ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಿ, ಗುಣಮಟ್ಟದ ಶಿಕ್ಷಣ ನೀಡಬೇಕು. ಹೀಗಾದಲ್ಲಿ ಉತ್ತಮ ನಾಗರೀಕ ವ್ಯಕ್ತಿಯಾಗಿ ರೂಪುಗೊಳ್ಳುವರು ಎಂದರು.
ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನರಹಿತ ಹಾಗೂ ವಿಶೇಷವಾಗಿ ಸರ್ಕಾರಿ ಅಂಧ ಮಕ್ಕಳ ಶಾಲೆ ಸೇರಿದಂತೆ ವಿವಿಧ ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ನೀಡಿದ 14 ಶಾಲೆಳು ಅಭಿನಂದನೀಯ. ಯಾವ ಶಾಲೆ ಪ್ರತಿಶತ ನೂರು ಫಲಿತಾಂಶ ನೀಡಿವೆಯೋ, ಆ ಶಾಲೆಯಲ್ಲಿ ಕೈಗೊಂಡ ಕಾರ್ಯ ಬೋಧನಾ ಕೌಶಲ್ಯಗಳನ್ನು ಅಳವಡಿಸಿಕೊಂಡು ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು.ರಾಜ್ಯದಲ್ಲಿಯೇ ಜಿಲ್ಲೆಗೆ ಶೈಕ್ಷಣಿಕ ವಲಯಕ್ಕೆ ಶಿಕ್ಷಣದ ಮಹತ್ವವನ್ನರಿತು ಸಾರ್ವಜನಿಕರಿಂದ ಸುಮಾರು ₹1.5 ಕೋಟಿ ದೇಣಿಗೆ ನೀಡಿ, ಶೈಕ್ಷಣಿಕ ಅಭಿವೃದ್ಧಿಗೆ ಸಾಕ್ಷಿಯಾಗಿದ್ದಾರೆ. ಹಾಗೆಯೇ ಸಿಎಸ್‌ಆರ್ ನಿಧಿಯಿಂದ ಸುಮಾರು ₹2.18 ಕೋಟಿ ಶಿಕ್ಷಣ ಇಲಾಖೆಗೆ ವಿವಿಧ ಅಭಿವೃದ್ಧಿಗೆ ಬಳಸಲಾಗಿದೆ ಎಂದರು.
ಶಿಕ್ಷಕಿ ನಾಗವೇಣಿ ಕಾರ್ಯಕ್ಕೆ ಮೆಚ್ಚುಗೆ:ಈಎಚ್‌ಆರ್‌ಎಸ್ ಶ್ರೀರಾಮ್ ಬಡಾವಣೆಯ ಶಿಕ್ಷಕಿ ನಾಗವೇಣಿ ಕ್ಯಾನ್ಸರ್ ಕಾಯಿಲೆ ಇದ್ದರೂ, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಲೇ ಮಕ್ಕಳೊಂದಿಗೆ ಅವಿನಾಭಾವ ಸಂಬಂಧ, ಪ್ರೀತಿ- ಸಹಬಾಳ್ವೆಯಿಂದ ಬದುಕುವುದರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಸರ್ಕಾರದ ಯೋಜನೆಗಳನ್ನು ಸಮರ್ಪಕ ಅನುಷ್ಠಾನಗೊಳಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಕಳೆದ ವರ್ಷ ಶೇ.85ರಷ್ಟು ಫಲಿತಾಂಶ ಗುರಿ ಹೊಂದಿದ್ದೆವು. ಆದರೆ, ನಿರೀಕ್ಷಿಸಿದಂತೆ ಫಲಿತಾಂಶ ನೀಡಲು ಸಾಧ್ಯವಾಗಲಿಲ್ಲ. ಒಂದೇ ಬಾರಿ ಸಾಧ್ಯವಾಗದೇ ಇದ್ದರೂ ಈ ಬಾರಿ ಉತ್ತಮ ಫಲಿತಾಂಶ ನೀಡಲು ಕ್ರಮ ವಹಿಸಲಾಗವುದು. ಇದಕ್ಕೆ ಕೆಲವು ಕಾರಣಗಳು ಇವೆ. ಜಿಲ್ಲೆಯಲ್ಲಿ ಸುಮಾರು 2 ಸಾವಿರ ಮಕ್ಕಳು ಗೈರಾಗಿದ್ದಾರೆ. ಮಕ್ಕಳು ಶಾಲೆಗೆ ಬಾರದೇ ಇದ್ದರೂ ಪ್ರತಿದಿನ ಹಾಜರಾತಿ ನೀಡಿ, ಬೋಗಸ್ ಲೆಕ್ಕ ಕೊಡುತ್ತಿದ್ದಾರೆ. ಈ ರೀತಿಯ ನಡೆ ಶಿಕ್ಷಕರಿಗೆ ಶೋಭೆ ತರುವಂತದ್ದಲ್ಲ. ಮುಂದಿನ ದಿನಗಳಲ್ಲಿ ನಿರಂತರ ಗೈರಾದ ಮಕ್ಕಳಿಗೆ ಹಾಜರಾತಿ ನೀಡದೇ ತೆಗೆದು ಹಾಕಬೇಕು. ಶೀಘ್ರದಲ್ಲೇ ಪರಿಶೀಲನೆಗೆ ಬರಲಿದ್ದೇವೆ. ಅಂತಹ ಸಂದರ್ಭದಲ್ಲಿ ಈ ರೀತಿಯ ಪ್ರಕರಣಗಳು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿದರು. ನಿವೃತ್ತ ಉಪನ್ಯಾಸಕ ಕೆ.ವಿ.ರಾಮಚಂದ್ರಪ್ಪ ಉಪನ್ಯಾಸ ನೀಡಿದರು. ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಭಾಜನರಾದ ಶಿಕ್ಷಕರಿಗೆ ಹಾಗೂ ದಾವಣಗೆರೆ ಉತ್ತರ ಮತ್ತು ದಕ್ಷಿಣ ವಲಯದ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಸಾ.ಶಿ.ಇ. ಉಪನಿರ್ದೇಶಕ ಜಿ.ಕೊಟ್ರೇಶ್ ಸ್ವಾಗತಿಸಿದರು.
ಸಭೆಯಲ್ಲಿ ಶಾಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಅಭಿವೃದ್ಧಿ) ಉಪನಿರ್ದೇಶಕಿ ಎಸ್.ಗೀತಾ, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ, ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ವಿಶಾಲಾಕ್ಷಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಇದ್ದರು.- - -
(ಬಾಕ್ಸ್)* ಗುಣಮಟ್ಟದ ಶಿಕ್ಷಣ ನೀಡಬೇಕು: ಜಿಪಂ ಸಿಇಒ ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್ ಮಾತನಾಡಿ, ಶಿಕ್ಷಣ ಕ್ರಾಂತಿಯಲ್ಲಿ ರಾಧಾಕೃಷ್ಣನ್ ಮತು ಸಾವಿತ್ರಿ ಬಾಯಿ ಫುಲೆ ಅವರ ಪಾತ್ರ ಬಹಳ ಮುಖ್ಯ. ಅಸಮಾನತೆ, ಮಹಿಳೆಯರು ಸಬಲೀಕರಣ ಆಗಬೇಕು ಎಂದು ಶಿಕ್ಷಣ ಪಡೆದು ರಾತ್ರಿ ಶಾಲೆ ಆರಂಭಿಸಿದರು. ನಮ್ಮ ಜೀವನದ ಮೊದಲು ಶಿಕ್ಷಕ ತಾಯಿಯಾದರೆ, ನಂತರ ಎರಡನೇ ಸ್ಥಾನದಲ್ಲಿ ಬರುವವರೇ ಶಿಕ್ಷಕರು. ಶಿಕ್ಷಕರ ಪಾತ್ರ ಎಷ್ಟು ದೊಡ್ಡದು ಎಂದು ಹೇಳಲು ಸಾಧ್ಯವಿಲ್ಲ. ಮಕ್ಕಳಿಗೆ ಸದಾಚಾರ, ಸಂಸ್ಕೃತಿ, ಸಂಸ್ಕಾರದ ಕಲಿಸಬೇಕು. ಶಿಕ್ಷಕರು ಎಲ್ಲ ಮಕ್ಕಳನ್ನು ಸಮಾನ ರೀತಿಯಲ್ಲಿ ಕಾಣಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೂ ಗಮನಹರಿಸಿ ಗುಣಮಟ್ಟದ ಶಿಕ್ಷಣ ನೀಡಬೇಕು. ಇಂದು ನಾವು ಅಧಿಕಾರಿಗಳಾಗಿ ನಿಂತಿರುವುದಕ್ಕೆ ಶಿಕ್ಷಕರೇ ಕಾರಣ. ಆದ್ದರಿಂದ ಮಕ್ಕಳಲ್ಲಿನ ನ್ಯೂನತೆ ಸರಿಪಡಿಸಿ, ಒಳ್ಳೆಯ ನಾಗರೀಕ ವ್ಯಕ್ತಿಯಾಗಿಸುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ ಎಂದು ಆಶಯ ವ್ಯಕ್ತಪಡಿಸಿದರು.
- - -(ಟಾಪ್ ಕೋಟ್)
ಇಂದಿನ ಮಕ್ಕಳಲ್ಲಿ ಪಠ್ಯ ಹೊರುತುಪಡಿಸಿ ಬಾಹ್ಯಾಕಾಶ, ಸ್ಯಾಟಲೈಟ್, ಹಣಕಾಸು, ಬ್ಯಾಂಕಿಂಗ್ ಎಂದರೇನು ಎಂಬ ಹಲವಾರು ವಿಷಯಗಳ ಬಗ್ಗೆ ಕೌತುಕತೆ ಇದೆ. ರಾಜ್ಯದಲ್ಲಿ ಪ್ರಸ್ತುತ ವೈದ್ಯರು ಮತ್ತು ಎಂಜಿನಿಯರ್‌ಗಳಾಗಿ ಹೆಚ್ಚಿನದಾಗಿ ಹೊರಹೊಮ್ಮುತ್ತಿದ್ದಾರೆ. ಅದನ್ನು ಹೊರತುಪಡಿಸಿ ಇತರೇ ಕ್ಷೇತ್ರಗಳಲ್ಲಿಯೂ ವಿಫುಲ ಅವಕಾಶಗಳಿವೆ. ಶಿಕ್ಷಣದ ಜೊತೆಗೆ ಈ ಕೌತುಕತೆಯ ವಿಷಯಾಧಾರಿತ ನುರಿತ ಮತ್ತು ನಿವೃತ್ತ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು. ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ದೇಶ ಕಟ್ಟುವ ಕೆಲಸ ಮಾಡಬಹುದು.
- ಜಿ.ಎಂ. ಗಂಗಾಧರ ಮೂರ್ತಿ, ಡಿಸಿ, ದಾವಣಗೆರೆ.- - -
-5ಕೆಡಿವಿಜಿ34: ದಾವಣಗೆರೆಯಲ್ಲಿ ಜಿಲ್ಲಾಡಳಿತ, ಜಿಪಂ, ಸಾಶಿಇ ಸಹಯೋಗದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು.-5ಕೆಡಿವಿಜಿ35: ದಾವಣಗೆರೆಯಲ್ಲಿ ಜಿಲ್ಲಾಡಳಿತ, ಜಿಪಂ, ಸಾಶಿಇ ಸಹಯೋಗದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಇತರೆ ಗಣ್ಯರು ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಸಾವಿತ್ರಿ ಬಾಯಿ ಪುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
-5ಕೆಡಿವಿಜಿ36: ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಕರ ಸಂಘದಿಂದ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನ ವೀಕ್ಷಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮೆಚ್ಚುಗೆ ವ್ಯಕ್ತಪಡಿಸಿದರು.