ಸಾರಾಂಶ
ನಗರದ ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ಮೊಬೈಲ್ ಬಳಸಿ ವಿಡಿಯೋ ಮಾಡಿ ಜ.27ರಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ ಕೈದಿಯ ವಿರುದ್ಧ ಆದರ್ಶನಗರ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.
ವಿಜಯಪುರ: ನಗರದ ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ಮೊಬೈಲ್ ಬಳಸಿ ವಿಡಿಯೋ ಮಾಡಿ ಜ.27ರಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ ಕೈದಿಯ ವಿರುದ್ಧ ಆದರ್ಶನಗರ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ. ದರ್ಗಾ ಜೈಲಿನಲ್ಲಿ ಅಕ್ರಮವಾಗಿ ಮೊಬೈಲ್ ಬಳಕೆ ಮಾಡಿರುವ ಕೈದಿ ಪರಮೇಶ್ವರ ಜಾಧವ್ ವಿರುದ್ಧ ಜೈಲು ಅಧೀಕ್ಷಕ ಡಾ.ಐ.ಜಿ.ಮ್ಯಾಗೇರಿ ಪ್ರಕರಣ ದಾಖಲಿಸಿದ್ದಾರೆ. ದೂರು ದಾಖಲೆಯ ಪ್ರತಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ.
ಘಟನೆ ವಿವರ:ಜ.22ರಂದು ಜೈಲಿನಲ್ಲಿ ರಾಮನ ಫೋಟೊ ಪೂಜೆ ಮಾಡಿದ್ದಕ್ಕೆ ಜ.23 ರಂದು ಜೈಲಿನಲ್ಲಿನ ಅಧಿಕಾರಿ ಹಾಗೂ ಅನ್ಯಕೋಮಿನ ಕೈದಿಗಳ ತಂಡ ನಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಮೂರು ನಿಮಿಷದ ವಿಡಿಯೋ ಮಾಡಿ ಆರೋಪಿಸಿದ್ದ ಕೈದಿ ಪರಮೇಶ್ವರ ಜಾಧವ. ಈ ಕುರಿತು ಪ್ರಧಾನಿ ಮೋದಿ, ಸಿಎಂ ಯೋಗಿ ಆದಿತ್ಯನಾಥ್ ಅವರು ನಮಗೆ ನ್ಯಾಯ ಕೊಡಿಸಬೇಕು ಎಂದು ವಿಡಿಯೋದಲ್ಲಿ ಕೇಳಿಕೊಂಡಿದ್ದ.
ಹೀಗಾಗಿ ದುರುದ್ಧೇಶದಿಂದ ಎಲ್ಲಿಂದಲೋ ಮೊಬೈಲ್ ತಂದು ಸುಳ್ಳು ಆರೋಪ ಮಾಡಿ ವಿಡಿಯೋ ಚಿತ್ರಿಕರಣ ಮಾಡಿದ್ದರಿಂದ ಪರಮೇಶ್ವರ ಜಾಧವ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕಾರಾಗೃಹದ ನಿಯಮಾವಳಿ ಪ್ರಕಾರ ನಿಷೇಧಿತ ವಸ್ತುವಾದ ಮೊಬೈಲ್ ಅನ್ನು ಕಾನೂನು ಬಾಹಿರವಾಗಿ ಬಳಸಿರುವುದರಿಂದ ಈತನ ವಿರುದ್ಧ ಕಲಂ 186ಐಪಿಸಿ ಹಾಗೂ ಕರ್ನಾಟಕ ಕಾರಾಗೃಹಗಳ ಅಧಿನಿಯಮ 2022 ನಿಯಮ 42ರಂತೆ ಕಾನೂನು ಕ್ರಮ ಜರುಗಿಸಬೇಕು ಎಂದು ಅಧಿಕಾರಿಯು ಕೋರಿದ್ದಾರೆ.