ಪೇದೆ ಮೇಲೆ ಹಲ್ಲೆ ಪ್ರಕರಣ; ಧರಣಿ ಕುಳಿತ ಶಾಸಕಿ ಕರೆಮ್ಮ ಜಿ.ನಾಯಕ

| Published : Feb 13 2024, 12:45 AM IST

ಸಾರಾಂಶ

ದೇವದುರ್ಗ ಪೊಲೀಸ್‌ ಠಾಣೆ ಆವರಣದಲ್ಲಿ ಶಾಸಕಿ ಕರೆಮ್ಮ ಜಿ.ನಾಯಕ ಅಹೋರಾತ್ರಿ ಧರಣಿ ನಡೆಸಿದರು.

ಕನ್ನಡಪ್ರಭ ವಾರ್ತೆ ದೇವದುರ್ಗ

ತಾಲೂಕಿನಲ್ಲಿ ಅಕ್ರಮ ಮರಳು ದಂಧೆ, ಇಸ್ಪೀಟ್ ಹಾಗೂ ಮಟ್ಕಾ ಹಾವಳಿ ತಡೆಯುವಂತೆ ಹೋರಾಟ ಮಾಡಿರುವ ಫಲವೇ ಈ ಸುಳ್ಳು ಪ್ರಕರಣ ದಾಖಲಿಗೆ ಕಾರಣವಾಗಿದ್ದು, ಉದ್ದೇಶಪೂರ್ವಕ ನನ್ನ ಹಾಗೂ ಪಕ್ಷದ ಮುಖಂಡರ ಮೇಲೆ ತೇಜೋವಧೆ ಮಾಡಲಾಗುತ್ತದೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ ದೂರಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ರಾತ್ರಿ ದಿಢೀರ ಧರಣಿಗೆ ಕುಳಿತ ಶಾಸಕಿ ವಿಡೀಯೋ ತುಣುಕು ಸರಿಯಾಗಿ ಪರಿಶೀಲಿಸಿ. ಮಗ ಸಂತೋಷ ಮೇಲೆ ಸುಳ್ಳು ಅಪಾದನೆ ಮಾಡಲಾಗಿದೆ. ತನಿಖೆ ನಡೆಸದೇ ಏಕಾಎಕಿ ಕುಡಿದು ಅಳುತ್ತಿರುವ ಪೇದೆ ಮಾತು ಕೇಳಿ, ಸುಳ್ಳು ಪ್ರಕರಣ ದಾಖಲಿಸಿದ್ದೀರಿ ಎಂದು ರೇಗಾಡಿದರು.

ಅಮಾಯಕ ಆಪ್ತ ಸಹಾಯಕನನ್ನು ಠಾಣೆಯಲ್ಲಿ ಕೂಡಿಸಲಾಗಿದೆ. ನಾಳೆಯೇ ಅಧಿವೇಶನ ನಡೆಯಲಿದ್ದು ತಯಾರಿಗಳನ್ನು ಮಾಡಿಕೊಳ್ಳಲು ಪಿಎ ಬೇಕು. ಉದ್ದೇಶಪೂರ್ವಕ ಇಂಥ ಸಮಸ್ಯೆ ಸೃಷ್ಠಿಸಲಾಗುತ್ತಿದೆ. ಕಳೆದ ಅಧಿವೇಶನದಲ್ಲಿ ಸ್ಪೀಕರಿಗೆ ನನ್ನ ಕ್ಷೇತ್ರದ ಸಮಸ್ಯೆಗಳ ಕುರಿತು ಗಮನ ಸೆಳೆದಿದ್ದೆ. ಗೃಹಮಂತ್ರಿ ನೀಡಿರುವ ಸೂಚನೆಗಳೇ ಪಾಲನೆಯಾಗಿಲ್ಲ. ಈ ಕುರಿತು ಮತ್ತೊಮ್ಮೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ. ಕೆಲ ಪೋಲಿಸರು ದಂಧೆಗಳಿಂದ ವಸೂಲಿಗೆ ಇಳಿದಿದ್ದಾರೆ. ಕೂಡಲೇ ಅವರನ್ನು ಅಮಾನತುಗೊಳಿಸಬೇಕು ಹಾಗೂ ಪಿಐ ಅಶೋಕ ಸದಲಗಿರನ್ನು ವರ್ಗಾವಣೆ ಮಾಡಬೇಕೆಂದು ಪಟ್ಟು ಹಿಡಿದರು.

ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ನಿಖಿಲ್ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ವೇಳೆ ಡಿವೈಎಸ್ಪಿ ದತ್ತಾತ್ರೇಯ, ಜೆಡಿಎಸ್ ಮುಖಂಡರಾದ ಸಿದ್ದನಗೌಡ ಮೂಡಲಗುಂಡ, ಬಸವರಾಜ ನಾಯಕ ಮಸ್ಕಿ, ರಮೇಶ ರಾಮನಾಳ, ಈಶಪ್ಪ ಸಾಹುಕಾರ, ಇಸಾಕ್ಸಾಬ್ ಮೇಸ್ತ್ರಿ, ಹನುಮಂತ್ರಾಯನಾಯಕ ಚಿಂತಲಕುಂಟಿ, ಗೋವಿಂದರಾಜ್ ನಾಯಕ ಹಾಗೂ ಇತರರು ಇದ್ದರು.