ಸಾರಾಂಶ
ಗದಗ/ಮುಂಡರಗಿ: ವ್ಯಕ್ತಿಯೋರ್ವ ತನ್ನ ಮಕ್ಕಳು ಹಾಗೂ ಅಳಿಯನ ಮಗು ಸೇರಿದಂತೆ 3 ಮಕ್ಕಳನ್ನು ತುಂಗಭದ್ರಾ ನದಿಗೆ ಎಸೆದ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದು 24 ಗಂಟೆಯ ನಂತರ ವೇದಾಂತ ಡಂಬಳ ಎನ್ನುವ ಮಗುವಿನ ಶವ ಬುಧವಾರ ರಾತ್ರಿ ಪತ್ತೆಯಾಗಿದೆ. ಇನ್ನುಳಿದ ಶವಗಳಿಗಾಗಿ ಶೋಧ ಮುಂದುವರಿದಿದೆ.
ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿಯ ತುಂಗಭದ್ರಾ ನದಿಗೆ ಮೂವರು ಮಕ್ಕಳನ್ನು ಎಸೆದ ನಂತರ ತಾನು ನದಿಗೆ ಜಿಗಿದ ಮಕ್ತುಂಪುರ ಗ್ರಾಮದ ನಿವಾಸಿ ಮಂಜಪ್ಪ ಅರಕೇರಿ ಎನ್ನುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಗ್ರಾಮಸ್ಥರೆಲ್ಲ ಆತಂಕಕ್ಕೊಳಗಾಗಿ ಸ್ಥಳಕ್ಕೆ ಧಾವಿಸಿದರು. ಆದರೆ ಅದಾಗಲೇ ಸೂರ್ಯಾಸ್ತ ಸಮೀಪವಾದ ಹಿನ್ನೆಲೆಯಲ್ಲಿ ಶೋಧ ಕಾರ್ಯ ಸಾಧ್ಯವಾಗಲಿಲ್ಲ ಎನ್ನುತ್ತಾರೆ ಸ್ಥಳೀಯರು.ಬುಧವಾರ ಬೆಳಗ್ಗೆಯೇ ನದಿ ಪಾತ್ರದ ಗ್ರಾಮಗಳಲ್ಲಿನ ನುರಿತ ಈಜುಗಾರರು, ಮೀನು ಸಾಕಾಣಿಕೆ ಮಾಡುವವರು ತೆಪ್ಪಗಳ ಮೂಲಕ ಶೋಧ ಕಾರ್ಯ ಪ್ರಾರಂಭಿಸಿದ್ದರು. ಆ ನಂತರ ಮುಂಡರಗಿ ಮತ್ತು ಹಡಗಲಿ ತಾಲೂಕಿನ ಅಗ್ನಿಶಾಮಕ ಸಿಬ್ಬಂದಿ ಮತ್ತು ಮೀನುಗಾರರು ನದಿಯಲ್ಲಿ ಬೋಟ್ ಮೂಲಕ ನಾಪತ್ತೆಯಾದವರನ್ನು ಪತ್ತೆ ಹಚ್ಚುವ ಶೋಧ ಕಾರ್ಯ ಪ್ರಾರಂಭಿಸಿದರು.
ಬುಧವಾರ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಗೋವಿಂದರಡ್ಡಿ, ಎಸ್‌ಪಿ, ಬಿ.ಎಸ್.ನೇಮಗೌಡ, ಎಸಿ ಗಂಗಪ್ಪ, ತಹಸೀಲ್ದಾರ್ ಎರ್ರಿಸ್ವಾಮಿ, ಸಿಪಿಐ ಮಂಜುನಾಥ ಕುಸುಗಲ್, ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿಗಳು, ಕಂದಾಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಶೋಧನಾ ಕಾರ್ಯಕ್ಕೆ ಮಾರ್ಗದರ್ಶನ ನೀಡಿದರು.ಪ್ರಶ್ನೆಗಳಿಗೆ ಉತ್ತರವಿಲ್ಲ:ತಾಲೂಕಿನ ಮಕ್ತುಂಪುರ ಗ್ರಾಮದ ಮಂಜುನಾಥ ಅರಕೇರಿ (41) ಇಬ್ಬರು ಮಕ್ಕಳಾದ ಧನ್ಯಾ (5) ಪವನ್ (3) ಹಾಗೂ ಅಳಿಯ (ಮಂಜುನಾಥನ ಪತ್ನಿಯ ಅಣ್ಣನ ಮಗ) ವೇದಾಂತ್ (3) ಇವರೆಲ್ಲ ನದಿ ಪಾಲಾಗಿದ್ದರು. ಆದರೆ ಅದ್ಯಾವ ಕಾರಣಕ್ಕೆ ಮಂಜುನಾಥ ಇಷ್ಟೊಂದು ಕ್ರೂರ ನಿರ್ಧಾರ ತೆಗೆದುಕೊಂಡ, ಕೌಟುಂಬಿಕ ಕಲಹ ಘಟನೆಗೆ ಕಾರಣವೇ ಆಗಿದ್ದರೆ, ಏನೂ ಅರಿಯದ ಅಮಾಯಕ ಮಕ್ಕಳ ಜೀವ ಅದ್ಯಾಕೆ ತೆಗೆದು ನಂತರ ತಾನೂ ಹಾರಿದ ಎನ್ನುವ ಸಾಕಷ್ಟು ಪ್ರಶ್ನೆಗಳಿವೆ. ಗ್ರಾಮದ ತುಂಬೆಲ್ಲ ಕೇವಲ ಕಣ್ಣೀರು ಹರಿಯುತ್ತಿದ್ದು, ಪ್ರಶ್ನೆಗಳಿಗೆ ಮಾತ್ರ ಉತ್ತರವಿಲ್ಲ.
ತನಿಖೆಯಿಂದ ಸತ್ಯಾಂಶ:ಮಂಜುನಾಥ ಅರಕೇರಿ ಮಕ್ತುಂಪುರ ಗ್ರಾಮದಲ್ಲಿಯೇ ಇದ್ದ ತನ್ನ ತಾಯಿ ಅಣ್ಣನ ಮಗಳಾದ ಪಾರ್ವತಿಯನ್ನು ಮದುವೆಯಾಗಿದ್ದನು. ಚಾಲಕನಾಗಿದ್ದ ಮಂಜುನಾಥ ಪ್ರತಿ ದಿನ ಮದ್ಯ ಸೇವನೆ ಮಾಡಿಕೊಂಡು ಬಂದು ಮನೆಯಲ್ಲಿ ಜಗಳವಾಡುತ್ತಿದ್ದ, ಇವರ ಜಗಳದಿಂದ ಪೊಲೀಸ್ ಠಾಣೆ ಮೆಟ್ಟಿಲು ಸಹ ಏರಿದ್ದರು. ಆ ನಂತರ ಹೊಂದಾಣಿಕೆ ಮಾಡಿಕೊಂಡು ನಾಲ್ಕು ಜನ ಮಕ್ಕಳೊಂದಿಗೆ ಜೀವನ ನಡೆಸುತ್ತಾ ಬಂದಿದ್ದರು ಎನ್ನುವುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಆದರೆ ನೈಜತೆ ಘಟನೆಯ ಸಂಪೂರ್ಣ ತನಿಖೆಯಿಂದಲೇ ಆಚೆ ಬರಬೇಕಿದೆ.ದ್ವೇಷ, ಕುಡಿತವೇ ಕಾರಣ !: ಘಟನೆಯ ಕೇಂದ್ರ ಬಿಂದುವಾಗಿರುವ ಮಂಜುನಾಥ ಅರಕೇರಿ ವೃತ್ತಿಯಲ್ಲಿ ಟಿಪ್ಪರ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಆದರೆ, ಅತಿಯಾದ ಕುಡಿತದ ಚಟಕ್ಕೆ ದಾಸನಾಗಿ ಪತ್ನಿಯೊಂದಿಗೆ ಪದೇ ಪದೇ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯ ಮೇಲೆ ಕಲ್ಲು ಎತ್ತಿ ಹಾಕಿದ್ದು, ಇದರಿಂದ ತೀವ್ರ ಗಾಯಗೊಂಡಿದ್ದ ಪಾರ್ವತಿ ಕೆಲ ದಿನಗಳ ಕಾಲ ಪ್ರಜ್ಞಾಹೀನಳಾಗಿದ್ದಳು. ಚಿಕಿತ್ಸೆ ಪಡೆದು ಇತ್ತೀಚಿಗಷ್ಟೇ ಗುಣಮುಖವಾಗಿದ್ದರು. ಇದು ಅದೇ ಗ್ರಾಮದಲ್ಲಿರುವ ಪಾರ್ವತಿಯ ಸಹೋದರರನ್ನು ತೀವ್ರ ಕೆರಳಿಸಿತ್ತು, ಅವರೆಲ್ಲ ಮಂಜುನಾಥನನ್ನು ಥಳಿಸಿ ಬುದ್ದಿ ಹೇಳಿದ್ದರು ಎನ್ನಲಾಗಿದ್ದು. ಇದರಿಂದ ಕುಪಿತಗೊಂಡು ಪತ್ನಿ ಮತ್ತು ಪತ್ನಿ ಅಣ್ಣನ ಮೇಲೆ ನಿರಂತರ ದ್ವೇಷ ಕಾರುತ್ತಿದ್ದ. ಆ ದ್ವೇಷ ಮತ್ತು ಕುಡಿತದ ಅಮಲು ಮಂಜುನಾಥ ಮಂಗಳವಾರ ಪತ್ನಿಯ ಅಣ್ಣನ ಮಗನನ್ನು ತನ್ನ ಮಕ್ಕಳೊಂದಿಗೆ ಕರೆದುಕೊಂಡು ಹೋಗಿ ನದಿಗೆ ಎಸೆದು ತಾನು ಜಿಗಿಯಲು ಕಾರಣ ಎನ್ನುವ ಮಾತುಗಳು ಗ್ರಾಮದಲ್ಲಿ ಕೇಳಿ ಬರುತ್ತಿವೆ.
ಮಂಜುನಾಥನಿಗೆ ಒಟ್ಟು ನಾಲ್ಕು ಜನ ಮಕ್ಕಳಿದ್ದು, ಮೂವರು ಹೆಣ್ಣು ಮಕ್ಕಳು, ಒಬ್ಬ ಮಗ. ತನ್ನ ಮೊದಲ ಮತ್ತು ಎರಡನೇ ಮಗಳನ್ನು ಬಿಟ್ಟು ಮೂರನೇ ಮಗಳು ಮತ್ತು ಕೊನೆಯ ಮಗ ಹಾಗೂ ಅಳಿಯನ ಮಗನನ್ನು ನದಿಗೆ ಎಸೆದು ವಿಕೃತಿ ಮೆರೆದಿದ್ದಾನೆ. ಮಂಗಳವಾರ ಘಟನೆಯ ಪೂರ್ವದಲ್ಲಿ ತನ್ನ ಮಕ್ಕಳು ಕಲಿಯುತ್ತಿದ್ದ ಅಂಗನವಾಡಿಗೆ ಹೋಗಿ ಅಲ್ಲಿ ಕೆಲಕಾಲ ವಿಡಿಯೋ ಮಾಡಲು ಪ್ರಯತ್ನಿಸಿದ್ದಾನೆ. ಅಷ್ಟೇ ಅಲ್ಲದೇ ಅಂಗನವಾಡಿ ಮಕ್ಕಳಿಗೆ ಚಾಕಲೇಟ್ ಮತ್ತು ತಿನಿಸು ತಂದಿದ್ದೇನೆ ಅದನ್ನು ಅವರಿಗೆ ಕೊಡುತ್ತೇನೆ ಎಂದು ಅಲ್ಲಿನ ಸಿಬ್ಬಂದಿಯೊಂದಿಗೆ ಕೂಡಾ ವಾಗ್ವಾದ ಮಾಡಿದ್ದಾನೆ.ಹೊರಗಿನಿಂದ ತಂದ ವಸ್ತು ಎಲ್ಲರಿಗೂ ಕೊಡಲು ಅವಕಾಶವಿಲ್ಲ ಎಂದು ಸಿಬ್ಬಂದಿ ಹೇಳುತ್ತಿದ್ದಂತೆ, ಹಾಗಾದರೆ ನನ್ನ ಮಕ್ಕಳನ್ನು ಕಳಿಸಿ ಕೊಡಿ ಎಂದು ಕೇಳಿ, ಆ ಮಕ್ಕಳಿಗೆ ಚಾಕಲೇಟ್, ಹಣ್ಣು ತೊರಿಸಿ ಕರೆದುಕೊಂಡು ಬಂದು ಕೊರ್ಲಹಳ್ಳಿ ಬ್ರೀಜ್ ಸಮೀಪದಲ್ಲಿ ತಿನ್ನಿಸಿ ತಾನು ತಿಂದಿದ್ದಾನೆ. ಸಂಜೆ 5.30ರ ನಂತರ ನದಿ ಪಾತ್ರದಲ್ಲಿ ಮೀನುಗಾರಿಕೆ ಮಾಡುವವರೆಲ್ಲ ನದಿಯಿಂದ ಹೊರಗೆ ಬರುವುದು ಸಾಮಾನ್ಯ, ಹೀಗೆ ಮೀನುಗಾರೆಲ್ಲ ನದಿಯಿಂದ ಹೊರಗೆ ಬಂದ ನಂತರ ಮಕ್ಕಳನ್ನು ಎಸೆದು ನಂತರ ತಾನು ಕೂಡಾ ಜಿಗಿದಿದ್ದಾನೆ ಎನ್ನಲಾಗಿದೆ.
ಮಕ್ತುಂಪುರ ಗ್ರಾಮದ ಮಕ್ಕಳು, ವ್ಯಕ್ತಿಯು ಸೇತುವೆ ಮೇಲಿಂದ ನದಿಗೆ ಬಿದ್ದಿದ್ದಾರೆ. ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಇದೆ. ಹೆಚ್ಚಿನ ತನಿಖೆ ಮಾಡಿಸುತ್ತಿದ್ದೇವೆ. ಕೊರ್ಲಹಳ್ಳಿ ತುಂಗಭದ್ರಾ ಸೇತುವೆ ಮೇಲಿಂದ ಪದೇ ಪದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ತಡೆಯಲು ಪ್ಲ್ಯಾನ್ ಮಾಡಲಾಗುತ್ತಿದೆ. ಸೇತುವೆ ಬದಿಯಲ್ಲಿ ತಡೆಗೋಡೆ ಅಥವಾ ರಕ್ಷಣೆಗಾಗಿ ಕಬ್ಬಿಣ ಬೇಲಿ ಹಾಕಲು ಚಿಂತನೆ ನಡೆಸಲಾಗುತ್ತಿದೆ ಎಂದು ಎಸ್ಪಿ ಬಿ.ಎಸ್. ನೇಮಗೌಡ್ರ ತಿಳಿಸಿದ್ದಾರೆ.