ಸಮೃದ್ಧ ಮಳೆ ಬೆಳೆಗಾಗಿ ವೃತಾಚರಣೆ

| Published : May 23 2024, 01:05 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಗ್ರಾಮದೊಳಗೆ ರೋಗ ರುಜಿನಗಳು ಬರದಿರಲಿ, ಉತ್ತಮ ಮಳೆಯಾಗಿ ಚೆನ್ನಾಗಿ ಬೆಳೆಗಳು ಬಂದು ಲೋಕವೆಲ್ಲ ಸಮೃದ್ಧವಾಗಿರಲಿ ಎಂದು ಪ್ರಾರ್ಥಿಸಿ ಬಾಗಲಕೋಟೆ ತಾಲೂಕಿನ ಹೊಸ ಮುರನಾಳದಲ್ಲಿ ಶ್ರೀ ಗ್ರಾಮದೇವಿಗೆ ಉಡಿ ತುಂಬಿ ಗ್ರಾಮಸ್ಥರಿಂದ ಪ್ರಾರ್ಥನೆ ಸಲ್ಲಿಸಲಾಯಿತು. ಕಡೆವಾರದ ನಿಮಿತ್ತ ಗ್ರಾಮ ದೇವಿಗೆ ಗ್ರಾಮದ ಹಿರಿಯರು ವಿಶೇಷ ಪೂಜೆಯ ಮೂಲಕ ಉಡಿ ತುಂಬುವ ಕಾರ್ಯ ಅದ್ಧೂರಿಯಾಗಿ ನಡೆಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಗ್ರಾಮದೊಳಗೆ ರೋಗ ರುಜಿನಗಳು ಬರದಿರಲಿ, ಉತ್ತಮ ಮಳೆಯಾಗಿ ಚೆನ್ನಾಗಿ ಬೆಳೆಗಳು ಬಂದು ಲೋಕವೆಲ್ಲ ಸಮೃದ್ಧವಾಗಿರಲಿ ಎಂದು ಪ್ರಾರ್ಥಿಸಿ ಬಾಗಲಕೋಟೆ ತಾಲೂಕಿನ ಹೊಸ ಮುರನಾಳದಲ್ಲಿ ಶ್ರೀ ಗ್ರಾಮದೇವಿಗೆ ಉಡಿ ತುಂಬಿ ಗ್ರಾಮಸ್ಥರಿಂದ ಪ್ರಾರ್ಥನೆ ಸಲ್ಲಿಸಲಾಯಿತು. ಕಡೆವಾರದ ನಿಮಿತ್ತ ಗ್ರಾಮ ದೇವಿಗೆ ಗ್ರಾಮದ ಹಿರಿಯರು ವಿಶೇಷ ಪೂಜೆಯ ಮೂಲಕ ಉಡಿ ತುಂಬುವ ಕಾರ್ಯ ಅದ್ಧೂರಿಯಾಗಿ ನಡೆಸಿದರು.

ಮಳೆಗಾಗಿ ವೃತ ಆಚರಣೆ:

ಅಲ್ಲದೇ, ಉತ್ತಮ ಮಳೆಯಾಗಿ ಗ್ರಾಮದಲ್ಲಿ ವಾರದ ವೃತವನ್ನು ಹಿಡಿಯಲಾಗಿತ್ತು. ಮಂಗಳವಾರ ಕೊನೆಯ ಐದನೇ ವಾರ ಆಗಿದ್ದರಿಂದ ಚಿಕ್ಕಮಕ್ಕಳು ಗ್ರಾಮದೇವತೆ ದೇವಸ್ಥಾನ ಸೇರಿದಂತೆ ಎಲ್ಲ ದೇವಸ್ಥಾನಗಳಿಗೆ ತೆರಳಿ ನೀರು ನೇವೇದ್ಯ ಸರ್ಮಸಿದರು. ಬೆಳಗಿನ ಜಾವ ಬ್ರಾಹ್ಮಿ ಮಹೂರ್ತದಲ್ಲಿ ಶ್ರೀ ಮಳೆರಾಜೇಂದ್ರ ಸ್ವಾಮಿಮಠದ ಪೂಜ್ಯರಾದ ಮೌನೇಶ್ವರ ಸ್ವಾಮಿಗಳು ಹಾಗೂ ಗುರುನಾಥಸ್ವಾಮಿಗಳ ನೇತೃತ್ವದಲ್ಲಿ ಶ್ರೀ ಗ್ರಾಮ ದೇವಿಗೆ ಪಂಚಾಮೃತ ಅಭಿಷೇಕ, ಶ್ರೀ ಸೂಕ್ತ, ಪುರುಷಸೂಕ್ತ, ನಂತರ ಶ್ತೀ ಚಕ್ರಕ್ಕೆ ಸಹಸ್ರ ನಾಮಾವಳಿ, ರಾಜರಾಜೇಶ್ವರಿ ಅಷ್ಟೋತ್ತರ ಶತನಾಮಾವಳಿ ಮೂಲಕ ಕುಂಕುಮಾರ್ಚನೆ, ಎಲೆಪೂಜೆ, ಪುಷ್ಪಾಲಂಕಾರ, ಮಹಾಮಂಗಳಾರುತಿ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ಸಂಜೆ ಶ್ರೀ ಮಾರುತೇಶ್ವರ ದೇವಸ್ಥಾನದಿಂದ ಶ್ರೀ ಗ್ರಾಮದೇವಿ ಘಳಿಗೆಯನ್ನು ಮೆರವಣಿಗೆ ಮೂಲಕ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗ್ರಾಮದೇವಿ ದೇವಸ್ಥಾನಕ್ಕೆ ತಲುಪಿದರು. ಮೆರವಣಿಗೆಯಲ್ಲಿ ಡೊಳ್ಳು ವಾದ್ಯಗಳ ಮೂಲಕ ಛತ್ರಿ ಚಾಮರಗಳು. ಸುಮಂಗಲೆಯರು ಆರತಿ ಹಿಡಿದು ದೇವಿ ಘಳಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆ ಬರುವ ದಾರಿಯುದ್ದಕ್ಕೂ ಜನರು ನೀರು ಹಾಕಿ ಮಡಿ ಮಾಡಿ ಸ್ವಾಗತಿಸಿ, ಪೂಜೆ ಪುನಸ್ಕಾರ ನಡೆಸಿದರು.

ಇರಗಾರ್ಕಿ ರೋಮಾಂಚನ

ಪ್ರತಿವರ್ಷದಂತೆ ಈ ವರ್ಷವೂ ಮೆರವಣಿಗೆಯಲ್ಲಿ ಇರಗಾರ್ಕಿ ವಿಶೇಷವಾಗಿತ್ತು. ಇರಗಾರ್ಕಿ, ಕಬ್ಬಿಣದ ಗುಂಡುಗಳಿರುವ ಗೊಂಚಲುಗಳನ್ನು ಕೈಯಲ್ಲಿ ಹಿಡಿದು, ಡೊಳ್ಳಿನ ರಣ ಹಲಗೆಯ ಶಬ್ಧದ ವೇಗಕ್ಕೆ ಹೋಗಿ, ತನ್ನೊಳಗಿನ ಪೌರುಷಗಳಿಂದ ಆ ಕಬ್ಬಿಣ ಗುಂಡುಗಳಿಂದ ದೇಹದ ಹಿಂಭಾಗಕ್ಕೆ ಬಡಿದುಕೊಳ್ಳುವುದು. ಇದು ನೋಡುಗರನ್ನು ರೋಮಾಂಚನಗೊಳಿಸಿತು.

ಮೆರವಣಿಗೆ ದೇವಸ್ಥಾನ ತಲುಪಿದ ನಂತರ ಮುಂದಿನ ವರ್ಷಗಳ ಆಗುಹೋಗುಗಳ ಮುನ್ಸೂಚನೆಗಳನ್ನು ಅನೇಕರು ತಿಳಿದುಕೊಂಡು, ನಂತರ ಗ್ರಾಮದೇವಿಗೆ ಗಳಿಗೆಯನ್ನು ಉಡಿಸಿ ಪೂಜ್ಯರೂ ಹಾಗೂ ಗ್ರಾಮದ ಹಿರಿಯರು ಉಡಿ ತುಂಬಿ ಮಹಾ ಮಂಗಳಾರುತಿ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ದೇವಿಗೆ ಉಡಿ ತುಂಬಿ ಮಳೆ ಬೆಳೆ ಚೆನ್ನಾಗಿ ಬರಲಿ ರೈತ ಸಮುದಾಯ ಸಮೃದ್ಧಿಯಿಂದ ಇರಲಿ. ಗ್ರಾಮದಲ್ಲಿ ಯಾವುದೇ ರೋಗ ರುಜಿನಗಳು ಬಾರದಿರಲಿ, ಎಲ್ಲರೂ ಸುಖ ಸಮೃದ್ಧಿಯಿಂದ ಬಾಳುವಂತಾಗಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಪೂಜ್ಯರಾದ ಮೌನೇಶ್ವರ ಸ್ವಾಮಿಗಳು, ಜಗನ್ನಾಥಸ್ವಾಮಿಗಳು, ಗ್ರಾಮದ ಗುರು ಹಿರಿಯರು, ಮುಖಂಡರು ಉಪಸ್ಥಿತರಿದ್ದರು.