ಚಳಿಗಾಲದಲ್ಲಿ ಆರೋಗ್ಯಕ್ಕೆ ಪೂರಕವಾದ, ದೇಹಕ್ಕೆ ಚೈತನ್ಯ ಕೊಡುವಂಥ ಕಾಳುಗಳ ಬಳಕೆ ಬಹು ಮುಖ್ಯ
ಕನ್ನಡಪ್ರಭ ವಾರ್ತೆ ಮೈಸೂರು
ಮಾಗಿ ಕಾಲದಲ್ಲಿ ಸಿಗುವ ಕಾಳು ಮತ್ತು ಗೆಡ್ಡೆ ಗೆಣಸುಗಳು ನಮ್ಮ ಅನ್ನದ ತಟ್ಟೆಗೆ ಬರಲಿ ಎಂದು ಜೆಎಸ್ಎಸ್ ಆರ್ಯುವೇದ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲ ಡಾ. ಶಿವಪ್ರಸಾದ್ ಹುಡೇದ್ ಕರೆ ನೀಡಿದರು.ನಗರದ ನಂಜರಾಜ ಬಹದ್ದೂರು ಛತ್ರದಲ್ಲಿ ಸಹಜ ಸಮೃದ್ಧ ಹಾಗೂ ಸಹಜ ಸೀಡ್ಸ್ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ಮಾಗಿ ಸಂಭ್ರಮ ಮೇಳವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಚಳಿಗಾಲದಲ್ಲಿ ಆರೋಗ್ಯಕ್ಕೆ ಪೂರಕವಾದ, ದೇಹಕ್ಕೆ ಚೈತನ್ಯ ಕೊಡುವಂಥ ಕಾಳುಗಳ ಬಳಕೆ ಬಹು ಮುಖ್ಯ. ಸಾಂಪ್ರದಾಯಿಕವಾಗಿ ಬೆಳೆದ ಅವರೆ, ಹಲಸಂದೆ, ತೊಗರಿ ಕಾಯಿಗಳ ಆಹಾರವನ್ನು ಹೆಚ್ಚೆಚ್ಚು ಸೇವಿಸುವುದು ಬಹುಮುಖ್ಯ. ಇವುಗಳ ಬಳಕೆಯಿಂದ ಬಹುಬೆಳೆ ಪದ್ಧತಿಯನ್ನು ಅನುಸರಿಸುತ್ತಿರುವ ರೈತರಿಗೆ ಆದಾಯ ಮತ್ತು ಇದನ್ನು ಬಳಸುವ ಗ್ರಾಹಕರ ಆರೋಗ್ಯ ಎರಡೂ ಉತ್ತಮವಾಗುತ್ತದೆ ಎಂದು ಹೇಳಿದರು.
ಮಾಗಿ ಕಾಲದಲ್ಲಿ ಸಿಗುವ ಅವರೆ, ತೊಗರಿಯ ಸೊಗಡು, ಸ್ವಾದ ವಿಶೇಷವಾದದ್ದು. ಅಗ್ಗವಾಗಿ ಸಿಗುವ ಪ್ರೋಟೀನ್ ಸಮೃದ್ಧ ಆಹಾರವಿದು. ನಗರವಾಸಿಗಳಿಗೆ ಸಾಂಪ್ರದಾಯಿಕ ಆಹಾರ, ಅಡುಗೆಗಳನ್ನು ಪರಿಚಯಿಸುವ ಮಾಗಿ ಸಂಭ್ರಮ ಮೇಳ ಎಲ್ಲೆಡೆ ನಡೆಯುವಂತಾಗಬೇಕು ಎಂದರು.ಪಿರಿಯಾಪಟ್ಟಣ ತಾಲೂಕು ಹಿಟ್ನೆಹೆಬ್ಬಾಗಿಲಿನ ಸಾವಯವ ಕೃಷಿಕ ಕಾಳಪ್ಪ ಮಾತನಾಡಿ, ಹೆಚ್ಚು ಆರೈಕೆ ಕೇಳದೆ ಬೆಳೆಯುವ ಕಡಲೆಕಾಯಿ, ಮರ ತೊಗರಿ, ಸಿಹಿ ಗೆಣಸಿನಂಥ ಸಾಂಪ್ರದಾಯಿಕ ಬೆಳೆಗಳು ಅಪರೂಪವಾಗುತ್ತಿವೆ. ತಂಬಾಕು ಮತ್ತು ಮುಸುಕಿನ ಜೋಳದಂಥ ವಾಣಿಜ್ಯ ಬೆಳೆಗಳಿಗೆ ಮಾರುಹೋಗಿರುವ ರೈತರು ಅವರೆ, ಹಲಸಂದೆ, ಗೆಡ್ಡೆ ಗೆಣಸುಗಳನ್ನು ಮರೆತು ಅಂಗಡಿಯ ದಿನಸಿಗಳಿಗೆ ದಾಸರಾಗಿದ್ದಾರೆ. ಮನೆ ಬಳಕೆಗಾದರೂ ಬೇಳೆ ಕಾಳು, ಗೆಡ್ಡೆ ಗೆಣಸು ಬೆಳೆಯಬೇಕು ಎಂದು ಸಲಹೆ ನೀಡಿದರು.
ಎಚ್.ಡಿ. ಕೋಟೆಯ ನೂರಲಕುಪ್ಪೆಯ ನಾಗಮ್ಮ ಮಾತನಾಡಿ, ಮಾಗಿ ಕಾಲದಲ್ಲಿ ಬರುವ ಶೂನ್ಯ ಮಾಸ, ಗಿಡ ಮೂಲಿಕೆಗಳನ್ನು ಮಣ್ಣಿನಿಂದ ಹೊರತೆಗೆಯಲು ಸಕಾಲ. ಕುಟುಂಬದ ಆರೋಗ್ಯ ಕಾಪಾಡಲು ಈ ಮೂಲಿಕೆಗಳು ಸಹಾಯ ಮಾಡುತ್ತವೆ ಎಂದರು.ಸಿ.ಎನ್. ಕೇಶವಮೂರ್ತಿ ನಿರೂಪಿಸಿದರು.
----ಬಾಕ್ಸ್...
ಮಾಗಿ ಬೆಳೆಗಳ ಸಂಭ್ರಮಎರಡು ದಿನಗಳ ಮೇಳದಲ್ಲಿ ಹಸಿ ಕಡಲೆಕಾಯಿ, ಅವರೆ, ಹಲಸಂದೆ, ಗೆಡ್ಡೆ ಗೆಣಸು, ಕೆಂಪು ಮುಸುಕಿನ ಜೋಳ, ತೊಗರಿ ಮೊದಲಾದ ಚಳಿಗಾಲದ ಬೆಳೆಗಳು ಮಾರಾಟಕ್ಕೆ ಬಂದಿವೆ.
ಎಚ್.ಡಿ. ಕೋಟೆ, ಪಿರಿಯಾಪಟ್ಟಣ, ತುಮಕೂರು, ಧಾರವಾಡ, ಬೆಂಗಳೂರು ಜಿಲ್ಲೆಗಳಿಂದ ಚಿನುಗಲು, ದಬ್ಬೆ, ಕೆಂಪು, ಮಣಿ, ಹಿತ್ತಲ ಅವರೆ ಮಾರಾಟಕ್ಕೆ ಬಂದಿದೆ. ಹಿಚುಕಿದ ಅವರೆ ಕೊಳ್ಳಲು ಸಿಗುತ್ತಿದೆ. ಅವರೆ ಕಾಯಿಯ ಜೊತೆಗೆ, ಅವರೆಕಾಳು ಉಪ್ಪಿಟ್ಟು, ಅವರೆಕಾಳು ದೋಸೆ, ಮುದ್ದೆ- ಹಿಚುಕಿದ ಅವರೆಕಾಳು ಸಾರು, ಅವರೆಕಾಳು ಬಾತ್, ಅವರೆಕಾಳಿನ ಜಾಮೂನು ಬಾಯಿ ಚಪ್ಪರಿಸಲು ಸಿಗುತ್ತಿವೆ. ಉತ್ತರ ಕರ್ನಾಟಕದ ಜೋಳದ ರೊಟ್ಟಿ- ಕಾಳು ಪಲ್ಯದ ಅಡುಗೆಗಳನ್ನು ಸವಿಯಬಹುದು.ದೇವಧಾನ್ಯ ರೈತ ಉತ್ಪಾದಕರ ಕಂಪನಿಯು ಸಿರಿಧಾನ್ಯ, ಜವಾರಿ ಬೇಳೆಕಾಳುಗಳು ಹಾಗೂ ದೊಡ್ಯಗ ಕೆಂಪಕ್ಕಿ, ಉದುರು ಸಾಳಿ ಮೊದಲಾದ ದೇಸಿ ಅಕ್ಕಿಗಳನ್ನು ಮಾರಾಟಕ್ಕೆ ತಂದಿದ್ದಾರೆ.
ಪ್ರದರ್ಶನಕ್ಕೆ ಬಂದಿರುವ ವಿವಿಧ ಗಾತ್ರ ಮತ್ತು ಆಕಾರದ ವೈವಿಧ್ಯಮಯ ಸೋರೆಗಳು ನೋಡುಗರನ್ನು ಆಕರ್ಷಿಸುತ್ತಿವೆ. ಕೃಷಿಕಲ, ಕ್ರಿಸ್ಮಸ್ ಹಬ್ಬಕ್ಕೆ ಆಕರ್ಷಕ ಬೊಂಬೆಗಳು ಹಾಗೂ ವೈವಿಧ್ಯಮಯ ಸೋರೆ ಕಲಾಕೃತಿಗಳನ್ನು ಮಾರಾಟ ಮಾಡುತ್ತಿದೆ.ಬೇರು ನ್ಯಾಚುರಲ್ಸ್ ಎಳ್ಳುಂಡೆ ಹಾಗೂ ಶಾವಿಗೆ ಪರಿಚಯಿಸಿದೆ. ಧಾರವಾಡದ ಮಹಿಳಾ ಸ್ವಸಹಾಯ ಸಂಘ ಬ್ಯಾಡಗಿ ಮೆಣಸಿನಕಾಯಿಯ ಕಾರದಪುಡಿ, ಮಸಾಲ ಪುಡಿ ಮಾರಾಟ ಮಾಡುತ್ತಿವೆ. ನಿರ್ಲಕ್ಷಿತ ಹಣ್ಣಿನ ಬೇಲದ ಜ್ಯೂಸ್, ಹುಣಸೇ ಜ್ಯೂಸ್ ಸಿಗುತ್ತಿವೆ.
ಮೈಸೂರಿನ ದೇಸಿ ಸ್ಪೀಡ್ ಪ್ರೊಡ್ಯೂಸರ್ ಕಂಪನಿಯು ಚಳಿಗಾಲದ ತರಕಾರಿ ಬೀಜ, ಬಳ್ಳಿ ಆಲೂಗಡ್ಡೆ, ಪರ್ಪಲ್ ಯಾಮ್, ಬಿಳಿ ಕಾಚಲ್, ಬಿತ್ತನೆಯ ಬೇಸಿಗೆ ಭತ್ತ ಮತ್ತು ರಾಗಿಯನ್ನು ಮಾರಾಟಕ್ಕೆ ತಂದಿದೆ. ಮರ ತೊಗರಿ ಮತ್ತು ಬೀಟ್ರೂಟ್ ಗೆಣಸು ಕೊಳ್ಳಲು ಜನ ಮುಗಿ ಬಿದ್ದರು.ಎಚ್.ಡಿ. ಕೋಟೆಯ ಹುಲಿಕಾಡು ರೈತ ಉತ್ಪಾದಕರ ಕಂಪನಿಯು ನಾಡ ತೊಗರಿ, ಅವರೆ, ಗೆಡ್ಡೆ ಗೆಣಸು, ರಾಗಿ ಮತ್ತು ದಿನನಿತ್ಯದ ಅಕ್ಕಿಗಳನ್ನು ಮೇಳಕ್ಕೆ ತಂದಿದ್ದಾರೆ.
ಸಿರಿಧಾನ್ಯ ಮತ್ರು ಸಾವಯವ ಪದಾರ್ಥಗಳು, ಮೌಲ್ಯವರ್ಧಿತ ಉತ್ಪನ್ನಗಳು, ಶೃಂಗಾರ ವರ್ಧಕಗಳು, ಕೋತಿ ಓಡಿಸುವ ಬಂದೂಕು, ಬಿದಿರಿನ ಉತ್ಪನ್ನಗಳು ಮತ್ತು ದೇಸಿ ಅಕ್ಕಿಗಳು ಮೇಳದಲ್ಲಿ ಮಾರಾಟಕ್ಕಿವೆ.