ನಾದಬ್ರಹ್ಮ ಸಂಗೀತ ಸಭಾದಲ್ಲಿ ಚತುರ್ಭಾಷಾ ಗಾನಸಿರಿ ಸಂಭ್ರಮ

| Published : Sep 17 2025, 01:05 AM IST

ಸಾರಾಂಶ

ತೆಲುಗು ಸ್ವಾತಿ ಮುತ್ಯಮ್ ಚಿತ್ರದ ಸುವ್ವಿ ಸುವ್ವಿ ಗೀತೆಯನ್ನು ಡಾ.ಎ.ಡಿ. ಶ್ರೀನಿವಾಸನ್ ಹಾಗೂ ಇಂದ್ರಾಣಿ ಅನಂತರಾಮ್, ಅಪೂರ್ವ ಸಂಗಮ ಚಿತ್ರದ ಅರಳಿದೆ ತನುಮನ ಹಾಡನ್ನು ಹೆಚ್.ಅಶ್ವತ್‌ನಾರಾಯಣ್ ಹಾಗೂ ಶೀಲಾ ಗುರುದತ್ ಪ್ರಸ್ತುತಪಡಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಶ್ರೀ ಸ್ವರಮಾಧುರ್ಯ ಗಾನಬಳಗ ಹಾಗೂ ವಿದ್ಯುಲ್ಲಹರಿ ಜಂಟಿ ಸಂಸ್ಥೆಯಿಂದ ಗಾಯಕ ಡಾ.ಎ.ಡಿ. ಶ್ರೀನಿವಾಸನ್ ನೇತೃತ್ವದಲ್ಲಿ ಈ ಸಮಯ ಸಂಗೀತಮಯ ಎಂಬ ಶೀರ್ಷಿಕೆಯಡಿ ನೈಜ ವಾದ್ಯಗಳ (ಲೈವ್ ಮ್ಯೂಸಿಕ್) ಸಂಗೀತ ಸಂಜೆ ಕಾರ್ಯಕ್ರಮ ಇತ್ತೀಚೆಗೆ ನಾದಬ್ರಹ್ಮ ಸಂಗೀತ ಸಭಾದಲ್ಲಿ ಯಶಸ್ವಿಯಾಗಿ ನೆರವೇರಿತು.

ಕಲಾವಿದರು ಕನ್ನಡ, ಹಿಂದಿ, ತಮಿಳು ಹಾಗೂ ತೆಲುಗು ಚತುರ್ಭಾಷಾ ಚಲನಚಿತ್ರಗೀತೆಗಳನ್ನು ಹಾಡಿ ಪ್ರೇಕ್ಷಕರಿಗೆ ಪೂರ್ಣ ಪ್ರಮಾಣದ ಮನರಂಜನೆಯನ್ನು ನೀಡಿದರು.

ತಂಡದ ಕಲಾವಿದರಿಂದ ಹೊಸ ಬೆಳಕು ಚಿತ್ರದ ತೆರೆದಿದೆ ಮನೆ ಓ ಬಾ ಅತಿಥಿ ಹಾಡನ್ನು ಶೀಲಾ ಗುರುದತ್ ಹಾಗೂ ಇಂದ್ರಾಣಿ ಅನಂತರಾಮ್, ಶಂಕರ್ ಗುರು ಚಿತ್ರದ ಏನೇನೋ ಆಸೆ ಹಾಡನ್ನು ಡಾ.ಎ.ಡಿ. ಶ್ರೀನಿವಾಸನ್ ಹಾಗೂ ಡಾ. ಪದ್ಮಶ್ರೀ ದಂಪತಿ ಹಾಡಿದರು. ತದನಂತರ ಬಂಧನ ಚಿತ್ರದ ನೂರೊಂದು ನೆನಪು ಗೀತೆಯನ್ನು ಇಂಜಿನಿಯರ್ ಹಾಗೂ ಗಾಯಕ ಎಚ್. ಅಶ್ವತ್‌ ನಾರಾಯಣ್ ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಇದರ ತರುವಾಯ ಮಾಂಗಲ್ಯ ಭಾಗ್ಯ ಚಿತ್ರದ ಆಸೆಯ ಭಾವ ಹಾಡನ್ನು ಗುರುದತ್ ಹಾಡಿದರೆ, ವಿಜಯವಾಣಿ ಚಿತ್ರದ ಮಧುಮಾಸ ಚಂದ್ರಮ ಹಾಡನ್ನು ಶ್ವೇತಾ ಸೊಗಸಾಗಿ ಹಾಡಿದರು.

ಇದಾದ ನಂತರ ಲವ್ 360 ಚಿತ್ರದ ಜಗವೇ ನೀನು ಹಾಡನ್ನು ಡಾ.ಎ.ಡಿ. ಶ್ರೀನಿವಾಸನ್ ದಂಪತಿಯ ಪುತ್ರ ಶ್ರೀಹರಿ ಹಾಡಿ ಮೋಡಿ ಮಾಡಿದರು. ಹಿಂದಿ ಚಲನಚಿತ್ರ ಸತ್ಯಂ ಶಿವಂ ಸುಂದರಂ ಚಿತ್ರದ ಶೀರ್ಷಿಕೆ ಗೀತೆಯನ್ನು ಗಾಯಕಿ ಇಂದ್ರಾಣಿ ಅನಂತರಾಮ್ ಭಾವಪೂರ್ಣವಾಗಿ ಹಾಡಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.

ತೆಲುಗು ಸ್ವಾತಿ ಮುತ್ಯಮ್ ಚಿತ್ರದ ಸುವ್ವಿ ಸುವ್ವಿ ಗೀತೆಯನ್ನು ಡಾ.ಎ.ಡಿ. ಶ್ರೀನಿವಾಸನ್ ಹಾಗೂ ಇಂದ್ರಾಣಿ ಅನಂತರಾಮ್, ಅಪೂರ್ವ ಸಂಗಮ ಚಿತ್ರದ ಅರಳಿದೆ ತನುಮನ ಹಾಡನ್ನು ಹೆಚ್.ಅಶ್ವತ್‌ನಾರಾಯಣ್ ಹಾಗೂ ಶೀಲಾ ಗುರುದತ್ ಪ್ರಸ್ತುತಪಡಿಸಿದರು. ಇವರಿಗೆ ಕೀಬೋರ್ಡ್‌ನಲ್ಲಿ ಪುರುಷೋತ್ತಮ್ ಹಾಗೂ ಶರತ್, ರಿದಮ್ ಪ್ಯಾಡ್‌ ನಲ್ಲಿ ಗುರುದತ್, ತಬಲದಲ್ಲಿ ಇಂದುಶೇಖರ್ ಹಾಗೂ ಆತ್ಮರಾಮ್ ವಾದ್ಯ ಸಹಕಾರ ನೀಡಿದರು.

ಆರಂಭದಲ್ಲಿ ಡಾ.ಎ.ಡಿ. ಶ್ರೀನಿವಾಸನ್ ಅವರು ನಮ್ಮಮ್ಮ ಶಾರದೆ ಉಮಾಮಹೇಶ್ವರಿ ಎಂಬ ಸ್ತುತಿಯೊಂದಿಗೆ ಪ್ರಾರ್ಥನೆ ಸಲ್ಲಿಸಿದರೆ ಕರ್ನಾಟಕ ಸುಗಮ ಸಂಗೀತ ಪರಿಷತ್ ಮೈಸೂರು ಘಟಕದ ಅಧ್ಯಕ್ಷ ಡಾ. ನಾಗರಾಜ್ ವಿ.ಬೈರಿ ಚಾಲನೆ ನೀಡಿ ಶುಭ ಕೋರಿದರು. ಆಕಾಶವಾಣಿ ಉದ್ಘೋಷಕ ಮಂಜುನಾಥ್ ನಿರೂಪಿಸಿದರು.