ದಾವಣಗೆರೆ ನಗರದ ಮಟ್ಟಿಕಲ್ಲು ಪ್ರದೇಶದ ಶ್ರೀ ಗಣೇಶ ವಿಸರ್ಜನಾ ಮೆರವಣಿಗೆ, ಬೃಹತ್ ಶೋಭಾಯಾತ್ರೆಯು ಸೋಮವಾರ ಬಿಗಿ ಪೊಲೀಸ್‌ ಭದ್ರತೆ ನಡುವೆ ಶಾಂತಿ, ಸುವ್ಯವಸ್ಥಿತವಾಗಿ ನಡೆಯಿತು.

- ಶ್ರದ್ಧಾಭಕ್ತಿಯಿಂದ ಜಯಘೋಷ ಮೊಳಗಿಸಿದ ಭಕ್ತರು । ಪೊಲೀಸ್ ಬಿಗಿ ಭದ್ರತೆಯಲ್ಲಿ ಶೋಭಾಯಾತ್ರೆ: ಭಕ್ತರ ಹರ್ಷೋದ್ಗಾರ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರದ ಮಟ್ಟಿಕಲ್ಲು ಪ್ರದೇಶದ ಶ್ರೀ ಗಣೇಶ ವಿಸರ್ಜನಾ ಮೆರವಣಿಗೆ, ಬೃಹತ್ ಶೋಭಾಯಾತ್ರೆಯು ಸೋಮವಾರ ಬಿಗಿ ಪೊಲೀಸ್‌ ಭದ್ರತೆ ನಡುವೆ ಶಾಂತಿ, ಸುವ್ಯವಸ್ಥಿತವಾಗಿ ನಡೆಯಿತು.

ನಗರದ ಮಟ್ಟಿಕಲ್ಲು ಪ್ರದೇಶದ ಶ್ರೀ ಗಣೇಶ ಪ್ರತಿಷ್ಠಾಪನಾ ಸ್ಥಳದಿಂದ ಪೊಲೀಸ್ ಭದ್ರತೆಯಲ್ಲಿ ಆರಂಭವಾದ ಶ್ರೀ ಗಣೇಶ ವಿಸರ್ಜನಾ ಶೋಭಾಯಾತ್ರೆಯು ಶ್ರೀ ವೆಂಕಟೇಶ್ವರ ವೃತ್ತ, ಅರಳಿ ಮರ ವೃತ್ತ, ಜಗಳೂರು ಬಸ್ಸು ನಿಲ್ದಾಣ, ಬಂಬೂ ಬಜಾರ್ ರಸ್ತೆ, ಶ್ರೀ ಗಣೇಶ ಹೋಟೆಲ್‌, ಈರುಳ್ಳಿ ಮಾರುಕಟ್ಟೆ, ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಬಾತಿ ಕೆರೆಯತ್ತ ಸಂಜೆ ಹೊತ್ತಿಗೆ ಸಾಗಿ, ಬಾತಿಕೆರೆ ಬಳಿ ಶ್ರೀ ಗಣೇಶನ ವಿಸರ್ಜನೆ ನೆರವೇರಿತು.

ಮಕ್ಕಳು, ಯುವಕ-ಯುವತಿಯರು, ಮಹಿಳೆಯರು ಮಧ್ಯಾಹ್ನದಿಂದಲೇ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ಡಿಜೆ ಮ್ಯೂಸಿಕ್‌ ಸದ್ದಿಗೆ ಯುವಕರು, ಮಕ್ಕಳು ಭರ್ಜರಿ ಸ್ಟೆಪ್ಸ್ ಹಾಕಿ ಸಂಭ್ರಮಿಸಿದರು. 500ಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಭಗವಾಧ್ವಜಗಳ ವೈಭವ ಕಂಡುಬಂದಿತು. ಜಾನಪದ ಕಲಾ ತಂಡಗಳು, ಡಿಜೆ ಸೌಂಡ್ಸ್ ಅಬ್ಬರ, ಮಕ್ಕಳು, ಯುವಕ, ಯುವತಿಯರ, ಹಿರಿಯರು, ಮಹಿಳೆಯರ ಭಕ್ತಿ, ಉತ್ಸಾಹ ಗಮನ ಸೆಳೆಯಿತು.

ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್, ದಾವಣಗೆರೆ ಮಾಜಿ ಮೇಯರ್ ಎಸ್.ಟಿ.ವೀರೇಶ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

- - -

(ಬಾಕ್ಸ್‌)

* ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ಕಟ್ಟೆಚ್ಚರ

ಗಣೇಶೋತ್ಸವದ ಈ ಹಿಂದಿನ ವರ್ಷಗಳ ಘಟನೆಗಳ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗೆ ಈ ಸಲ ಅವಕಾಶ ಇಲ್ಲದಂತೆ ಜಿಲ್ಲಾ ಪೊಲೀಸ್ ಇಲಾಖೆ ಭಾರಿ ಭದ್ರತಾ ವ್ಯವಸ್ಥೆ ಕೈಗೊಂಡಿತ್ತು. ಶೋಭಾಯಾತ್ರೆಯ ಮಾರ್ಗದುದ್ದಕ್ಕೂ ಪೊಲೀಸ್ ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದರು.

ಜಿಲ್ಲಾ ಎಸ್‌ಪಿ ಡಾ. ಎಚ್.ಟಿ.ಶೇಖರ, ಎಎಸ್ಪಿ ಪರಮೇಶ್ವರ ಹೆಗಡೆ, ಡಿವೈಎಸ್ಪಿಗಳಾದ ಬಿ.ಶರಣ ಬಸವೇಶ್ವರ, ಬಸವರಾಜ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು ಭದ್ರತಾ ವ್ಯವಸ್ಥೆ ಮೇಲ್ವಿಚಾರಣೆ ಕೈಗೊಂಡರು. ಪಿಎಸ್‌ಐ, ಎಎಸ್‌ಐ, ಮುಖ್ಯ ಪೇದೆ ಸೇರಿದಂತೆ ಒಟ್ಟು 550 ಪೊಲೀಸ್ ಸಿಬ್ಬಂದಿ ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.

- - -

-12ಕೆಡಿವಿಜಿ8, 10: ದಾವಣಗೆರೆ ಅರಳಿ ಮರ ವೃತ್ತದಲ್ಲಿ ಸಾಗುತ್ತಿರುವ ಮಟ್ಟಿಕಲ್ಲು ಪ್ರದೇಶದ ಶ್ರೀ ಗಣೇಶನ ಶೋಭಾಯಾತ್ರೆ.