ಸಾರಾಂಶ
-ಗಣೇಶನ ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಿದ ಸಚಿವ ಈಶ್ವರ ಖಂಡ್ರೆ
-----ಕನ್ನಡಪ್ರಭ ವಾರ್ತೆ ಭಾಲ್ಕಿ: ವಿಘ್ನ ನಿವಾರಕ ವಿನಾಯಕನಿಗೆ ಸಂಭ್ರಮದಿಂದ ವಿದಾಯ ಹೇಳಿ ವಿಸರ್ಜನೆ ಮಾಡಲಾಯಿತು.
ಗಣೇಶ ಚತುರ್ಥಿ ಹಿನ್ನೆಲೆ ಕಳೆದ ಸೆ. 7ರಂದು ಪಟ್ಟಣದ ವಿವಿಧ ಕಡೆಗಳಲ್ಲಿ ವಿವಿಧ ಗಣೇಶ ಮಂಡಳ ವತಿಯಿಂದ ನೂರಕ್ಕೂ ಅಧಿಕ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಕಳೆದ ಹನ್ನೊಂದು ದಿನಗಳಿಂದ ಪಟ್ಟಣದಲ್ಲಿ ಭಕ್ತಿಯ ವಾತಾವರಣ ನಿರ್ಮಾಣಗೊಂಡಿತು. ಎಲ್ಲೆಡೆ ವಿವಿಧ ಮಾದರಿಗಳಲ್ಲಿ ಬೃಹತ್ ಪೆಂಡಾಲ್ ನಿರ್ಮಿಸಿ ಶ್ರದ್ಧೆ, ಭಕ್ತಿಯಿಂದ ಗಣೇಶನಿಗೆ ಪೂಜೆ, ಪುನಸ್ಕಾರ ನಡೆದಿದ್ದವು. ಜೊತೆಗೆ ಹಲವೆಡೆ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನದಾಸೋಹ ಮೂಲಕ ಗಣೇಶ ಉತ್ಸವ ತೆರೆ ಕಂಡಿತು.ಗಣೇಶ ವಿಸರ್ಜನೆಗೂ ಮುನ್ನ ಗಣೇಶನ ಪೆಂಡಾಲ್‌ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ ಪೂಜೆ ನೆರವೇರಿಸಿ ದರ್ಶನ ಪಡೆದು ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಿದರು.
ವಿವಿಧೆಡೆ ಅನ್ನದಾಸೋಹ: ಗಣೇಶನ ವಿಸರ್ಜನೆಗೂ ಮುನ್ನ ಎಲ್ಲ ಗಣೇಶನ ಪೆಂಡಾಲ್‌ಗಳಲ್ಲಿ ಅನ್ನದಾಸೋಹ ಕಾರ್ಯಕ್ರಮ ನೆರವೇರಿತು. ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಚೌಕ್ ಗಣೇಶ ಮಂಡಳದ ಪೆಂಡಾಲ್‌ನಲ್ಲಿ ಏರ್ಪಡಿಸಿದ್ದ ಅನ್ನದಾಸೋಹ ವಿತರಣೆ ಕಾರ್ಯಕ್ರಮಕ್ಕೆ ಬೀದರ್ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಶಿವಶಂಕರ ಕಾಮಶೆಟ್ಟಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎಇಇ ಅಲ್ತಾಫ್, ಎಂಜನಿಯರ್‌ಗಳಾದ ಲೋಹಿತ್, ಅನ್ವರ್ ಪ್ರಮುಖರಾದ ಬಸವರಾಜ ಪನಶೆಟ್ಟೆ, ಜಗದೀಶ ಬಿರಾದಾರ್, ಸತೀಶ ವಾಡೆ, ಸಂಜು ಚವಳೆ, ಭದ್ರೇಶ ಸ್ವಾಮಿ, ಶೈಲೇಶ ರಿಕ್ಕೆ, ನಂದು ಸಜ್ಜನಶೆಟ್ಟಿ, ಶಿವಕುಮಾರ ಬಿರಾದಾರ್ ಸೇರಿದಂತೆ ಹಲವರು ಇದ್ದರು.
ಭವ್ಯ ಮೆರವಣಿಗೆ: ವಿವಿಧೆಡೆ ಗಣೇಶ ಚತುರ್ಥಿ ನಿಮಿತ್ತ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನುಭವ್ಯ ಮೆರವಣಿಗೆ ಮೂಲಕ ವಿಸರ್ಜಿಸಲಾಯಿತು.ಮೆರವಣಿಗೆಯುದ್ದಕ್ಕೂ ಯುವಕರು, ಮಹಿಳೆಯರು, ಮಕ್ಕಳು ಡಿಜೆ ಸೌಂಡ್‌ನಲ್ಲಿ ಮೊಳಗಿದ ಭಕ್ತಿ, ಚಲನಚಿತ್ರ ಗೀತೆಗಳಿಗೆ ಹೆಜ್ಜೆ ಹಾಕಿದರು. ಯುವಕರು ಪರಸ್ಪರರು ಗುಲಾಲ್ ಎರಚಿಕೊಂಡು, ಸಿಳ್ಳೆ, ಕೇಕೆ ಹಾಕುತ್ತ ಸಂಭ್ರಮಿಸಿದರು.
ಯುವಕರು ಸಿಡಿಸಿದ ಬಗೆ ಬಗೆಯ ಪಟಾಕಿಗಳು ಆಕಾಶದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸಿ ನೋಡುಗರನ್ನು ಆಕರ್ಷಿಸಿದವು. ಅಹಿತಕರ ಘಟನೆ ನಡೆಯದಂತೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ಪಟ್ಟಣದ ಹೊರವಲಯದಲ್ಲಿ ನಿರ್ಮಿಸಿದ ಕೃತಕ ಹೊಂಡದಲ್ಲಿ ಒಂದಾದ ಮೇಲೊಂದರಂತೆ ಗಣೇಶ ಮೂರ್ತಿಗಳನ್ನು ವಿಸರ್ಜಿಸಿದರು.
----ಫೈಲ್ 18ಬಿಡಿ3